ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತ ನಿಮಗೆ ಜನರ ಸಮಸ್ಯೆ ಅರ್ಥವಾಗದು: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಗರಂ

ರಸ್ತೆ ಗುಂಡಿಯಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಪ್ರಧಾನ ಎಂಜಿನಿಯರ್‌ ಸೇರಿದಂತೆ ಎಲ್ಲರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲು ಆದೇಶಿಸುತ್ತೇವೆ. ಎಲ್ಲರೂ ಜೈಲಿಗೆ ಹೋಗಲಿ. ಆಗ ಅವರಿಗೆ ಏನು ಮಾಡುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ ಎಂದ ಪೀಠ.
BBMP and Karnataka HC

BBMP and Karnataka HC

ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತಿರುವ ನಿಮಗೆ (ಅಧಿಕಾರಿಗಳು) ಜನರ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಎಂಜಿನಿಯರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌ ಈ ಕ್ಷಣದಿಂದಲೇ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಜೈಲಿಗೆ ಅಟ್ಟಲಾಗುವುದು ಎಂದು ಗುಡುಗಿತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ನ್ಯಾಯಾಲಯವನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಅಬ್ಬರಿಸಿದ ಪೀಠವು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

“ರಸ್ತೆ ಗುಂಡಿ ಮುಚ್ಚಲು ಸ್ವಯಂಚಾಲಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ಈ ಯಂತ್ರಗಳನ್ನು ಹೊಂದಿರುವ ಏಜೆನ್ಸಿಯ ಗುತ್ತಿಗೆಯು ಜನವರಿ 3ರಂದು ಮುಗಿದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ವಿವರಣೆ ಸಲ್ಲಿಸಬೇಕು. ರಸ್ತೆ ಗುಂಡಿ ಮುಚ್ಚುವ ಸ್ವಯಂಚಾಲಿತ ಯಂತ್ರಗಳನ್ನು ಹೊಂದಿರುವ ಏಜೆನ್ಸಿಯ ಗುತ್ತಿಗೆಯನ್ನು ನವೀಕರಿಸದಿದ್ದರೆ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮುಂಚಿತವಾಗಿ ಏಕೆ ಮಾಡಿಲ್ಲ. ಇಲ್ಲಿಯವರಿಗೆ ಕಾದು, ಈಗ ಏಕೆ ಸಮಯಾವಕಾಶ ಕೇಳಲಾಗುತ್ತಿದೆ. ಸ್ವಯಂಚಾಲಿತವಾಗಿ ಗುಂಡಿ ಮುಚ್ಚುವ ಯಂತ್ರಗಳನ್ನು ಹೊಂದಿರುವ ಏಜೆನ್ಸಿಯ ಕೆಲಸ ಮತ್ತು ಗುಣಮಟ್ಟದ ಬಗ್ಗೆ ಯಾವುದೇ ದೂರುಗಳಿಲ್ಲದಿರುವಾಗ ಅದರ ಗುತ್ತಿಗೆಯನ್ನು ಏಕೆ ನವೀಕರಿಸಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿತು.

“ರಸ್ತೆ ಗುಂಡಿ ಮುಚ್ಚಲು ಯಾವ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂಬುದನ್ನು ವಿವರಿಸಬೇಕು. ಬಿಬಿಎಂಪಿ ವಕೀಲ ವಿ ಶ್ರೀನಿಧಿ ಅವರ ಕೋರಿಕೆಯ ಮೇರೆಗೆ ಒಂದು ವಾರ ವಿಚಾರಣೆ ಮುಂದೂಡಲಾಗುತ್ತಿದ್ದು, ಮುಂದಿನ ವಿಚಾರಣೆಯಲ್ಲಿ ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿತು.

ಎಸಿ ಕಚೇರಿಯಲ್ಲಿ ಕುಳಿತಿರುವ ನಿಮಗೆ ಜನರ ಸಮಸ್ಯೆ ತಿಳಿಯದು

ಸ್ವಯಂಚಾಲಿತ ಗುಂಡಿ ಮುಚ್ಚುವ ಯಂತ್ರವನ್ನು ಹೊಂದಿರುವ ಏಜೆನ್ಸಿಯ ಗುತ್ತಿಗೆಯನ್ನು ಏಕೆ ನವೀಕರಿಸಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯವು ಈಗ ಒಂದು ಬಾರಿ ಮಾತ್ರ ಗುತ್ತಿಗೆ ನವೀಕರಿಸಲಾಗುವುದು ಎಂದು ಹೇಳುತ್ತಿದ್ದೀರಿ ಎಂದಿತು. ಮುಂದುವರೆದು, ವಿಚಾರಣೆಗೆ ಹಾಜರಾಗಿದ್ದ ಮುಖ್ಯ ಎಂಜಿನಿಯರ್‌ ಎನ್‌ ಎಸ್‌ ಪ್ರಹ್ಲಾದ್‌ ಅವರನ್ನು ಉದ್ದೇಶಿಸಿ, ಈ ವ್ಯಕ್ತಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆಯೇ? ನ್ಯಾಯಿಕ ಆದೇಶದ ಮೂಲಕ ಅವರನ್ನು ಅಮಾನತು ಮಾಡುತ್ತೇವೆ. ನೀವು (ಅಧಿಕಾರಿ) ಸುಧಾರಿಸುವುದಿಲ್ಲ. ನಿಮ್ಮ ವಿರುದ್ಧ ಕ್ರಮಕೈಗೊಂಡರೆ ಮಾತ್ರ ಸುಧಾರಿಸುತ್ತೀರಿ. ಕ್ರಿಮಿನಲ್‌ ಅವಜ್ಞೆಗಾಗಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಲಾಗುವುದು. ಇವರ ಬದಲಿಗೆ ಉತ್ತಮ ಅಧಿಕಾರಿಗಳನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗುವುದು ಎಂದು ಪೀಠವು ಕಟುವಾಗಿ ನುಡಿಯಿತು.

ಅಧಿಕಾರಿ ಪ್ರಹ್ಲಾದ್‌ ಅವರು ನ್ಯಾಯಾಲಯದ ಮುಂದೆ ಬುದ್ದಿವಂತಿಕೆ (ಸ್ಮಾರ್ಟ್‌) ಪ್ರದರ್ಶಿಸುತ್ತಿದ್ದಾರೆ. ಹಿಂದೆ ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ನಿರ್ದೇಶಿಸಲಾಗಿತ್ತು. ಆದರೆ, ಏನೂ ಸುಧಾರಣೆಯಾಗಿಲ್ಲ. ಇದು ನಿಮಗೆ ಅಭ್ಯಾಸವಾಗಿ ಹೋಗಿದೆ. ಈ ಅಧಿಕಾರಿಯನ್ನು ಜೈಲಿಗೆ ಕಳುಹಿಸಲಾಗುವುದು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಳ್ಳುವ ನಿಮಗೆ ಸಾರ್ವಜನಿಕರ ಸಮಸ್ಯೆ ಏನು ಎಂದು ಅರ್ಥವಾಗುವುದಿಲ್ಲ. ಇದನ್ನು ನಿಮಗೆ ಅರ್ಥ ಮಾಡಿಸುತ್ತೇವೆ ಎಂದು ನ್ಯಾಯಾಲಯವು ಆಕ್ರೋಶದಿಂದ ನುಡಿಯಿತು.

ಮಹಿಳೆ ಸಾವಿಗೆ ಮರುಗಿದ ಪೀಠ

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಅನುರಾಧಾ ಅವರು “ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ರಸ್ತೆ ಗುಂಡಿಯಿಂದ ಅಸುನೀಗಿದ್ದಾರೆ” ಎಂದು ತಿಳಿಸಿದ್ದಾರೆ. ಇದಕ್ಕಿಂತ ದಯನೀಯ ಸ್ಥಿತಿ ಇರಲಾರದು. ಮುಂದಿನ ವಿಚಾರಣೆಗೆ ಎಲ್ಲಾ ರೀತಿಯಲ್ಲೂ ಸಿದ್ಧವಾಗಿರಲು ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ಅಧಿಕಾರಿಗಳ ವಿರುದ್ಧ ಎಂಥ ಆದೇಶವಾದರೂ ಬರಬಹುದು. ಪ್ರತಿಬಾರಿಯೂ ನಾವು ಅವರನ್ನು ಸುಮ್ಮನೆ ಬಿಡಲಾಗದು. ಇಂದು ನಿಮ್ಮಿಂದಾಗಿ (ಪ್ರಕರಣದಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ವಕೀಲ ಶ್ರೀನಿಧಿ) ಅಧಿಕಾರಿಗಳನ್ನು ಬಿಟ್ಟಿದ್ದೇವೆ. ಇದಕ್ಕೆ ಅವರು ನಿಮಗೆ ಕೃತಜ್ಞರಾಗಿರಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಜೈಲಿಗೆ ಹಾಕುವಂತೆ ಆದೇಶ ಮಾಡುತ್ತಿದ್ದೆವು ಎಂದು ಮುಖ್ಯ ನ್ಯಾಯಮೂರ್ತಿ ಅವಸ್ಥಿ ಹೇಳಿದರು.

ಸಾರ್ವಜನಿಕರ ಬದುಕಿನ ಜೊತೆ ಎಂಜಿನಿಯರ್‌ಗಳ ಆಟ

ರಸ್ತೆ ಗುಂಡಿಯಿಂದಾಗಿ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ನಮ್ಮ ಗಮನಕ್ಕೆ ತರಲಾಗಿದೆ. ಪ್ರಧಾನ ಎಂಜಿನಿಯರ್‌ ಸೇರಿದಂತೆ ಎಲ್ಲರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲು ಆದೇಶಿಸುತ್ತೇವೆ. ಎಲ್ಲರೂ ಜೈಲಿಗೆ ಹೋಗಲಿ. ಆಗ ಅವರಿಗೆ ಏನು ಮಾಡುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ.

ಗುಂಡಿ ಮುಚ್ಚಲು ಸ್ವಯಂಚಾಲಿತ ಯಂತ್ರಗಳನ್ನು ಬಳಸಲಾಗುತ್ತಿದೆ ಎಂಬ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಿಕೊಳ್ಳೋಣವೇ? ನಿಜವಾಗಿಯೂ ಸ್ವಯಂಚಾಲಿತ ಯಂತ್ರ ಬಳಸುತ್ತಿದ್ದೀರಾ ಎಂಬುದನ್ನು ತಿಳಿಸಿ. ಏನು ಹೇಳುತ್ತಿದ್ದೀರಿ ಎಂಬುದರ ಬಗ್ಗೆ ಎಚ್ಚರಿಕೆ ಇರಲಿ. ನೀವು ನ್ಯಾಯಾಲಯದ ಮುಂದೆ ಇದ್ದೀರಿ. ಸುಳ್ಳು ಹೇಳಿಕೆ ನೀಡಿದರೆ ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ. ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸುತ್ತಿದ್ದೀರಾ? ಎಂದು ಪೀಠವು ತೀವ್ರ ಆಕ್ರೋಶ ಹೊರಹಾಕಿತು.

ಸ್ವತಂತ್ರ ತನಿಖೆ

ನಗರದಲ್ಲಿನ ಗುಂಡಿ ಮುಚ್ಚಲು ಎಲ್ಲೆಲ್ಲಿ ಸ್ವಯಂಚಾಲಿತ ಯಂತ್ರಗಳನ್ನು ಬಳಸಲಾಗಿದೆ ಎಂಬುದರ ಮಾಹಿತಿಯನ್ನು ಬಿಬಿಎಂಪಿ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಅಧಿಕಾರಿಯನ್ನು ಒಳಗೊಂಡ ಸಮಿತಿ ರಚಿಸಿ ಸ್ವತಂತ್ರ ತನಿಖೆ ನಡೆಸಲಾಗುವುದು ಎಂದು ಪೀಠವು ಮೌಖಿಕವಾಗಿ ಹೇಳಿತು.

ನಿಮ್ಮ ವಿಶ್ವಾಸಾರ್ಹತೆ ಗೊತ್ತಿದೆ

ರಸ್ತೆ ಗುಂಡಿ ಮುಚ್ಚಲು ಯಂತ್ರಗಳನ್ನು ಬಳಸಿದ ಮೊದಲ ನಗರ ಬೆಂಗಳೂರು ಎಂದು ಬಿಬಿಎಂಪಿ ವಕೀಲ ವಿ ಶ್ರೀನಿಧಿ ಅವರು ಹೇಳುತ್ತಿದ್ದಂತೆ ಸಿಟ್ಟುಗೊಂಡ ಪೀಠವು “ನಿಮ್ಮ ಅರ್ಹತೆಯ ಬಗ್ಗೆ ನಮಗೆ ತಿಳಿದಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಹೊಣೆಗಾರಿಕೆ ನಿಗದಿಪಡಿಸಲು ನಾವು ಇಂದು ನಿರ್ಧರಿಸಿದ್ದೆವು. ನ್ಯಾಯಾಲಯ ಪ್ರಕರಣ ಕೈಗೆತ್ತಿಕೊಂಡಾಗ ಎಲ್ಲವೂ ನಿಮಗೆ ನೆನಪಾಗುತ್ತದೆ. ಅರ್ಜಿ ಸಲ್ಲಿಸಿ ಹಲವು ವರ್ಷಗಳಾದರೂ ಏಕೆ ಕ್ರಮವಹಿಸಿಲ್ಲ" ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

Also Read
ಗುಂಡಿ ಬಿದ್ದ ರಸ್ತೆಗಳು: ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಕೆಂಡಾಮಂಡಲ, ಮುಖ್ಯ ಎಂಜಿನಿಯರ್‌ ಹಾಜರಾತಿಗೆ ನಿರ್ದೇಶನ

ಸರ್ಕಾರದಿಂದ 98 ಕೋಟಿ ರೂಪಾಯಿ ವಸೂಲಿ

ರಾಜ್ಯ ಸರ್ಕಾರದಿಂದ ಬಿಬಿಎಂಪಿಯು ರಸ್ತೆಗಳಿಗೆ ಸಂಬಂಧಿಸಿದಂತೆ ನಷ್ಟವಾಗಿದೆ ಎಂದು 98 ಕೋಟಿ ರೂಪಾಯಿ ವಸೂಲಿ ಮಾಡಿದೆ. ಈ ವರ್ಷ ಬಿಬಿಎಂಪಿಗೆ ರಾಜ್ಯ ಸರ್ಕಾರವು ಒಂದು ಸಾವಿರ ಕೋಟಿ ರೂಪಾಯಿಗಳನ್ನು ರಸ್ತೆಗಳ ನಿರ್ವಹಣೆಗೆ ಮಂಜೂರು ಮಾಡಿದೆ ಎಂದು ಅರ್ಜಿದಾರರ ಪರ ವಕೀಲೆ ಅನುರಾಧಾ ಅವರು ಪೀಠದ ಗಮನಸೆಳೆದರು.

ಒಂದು ಸಾವಿರ ಕೋಟಿ ರೂಪಾಯಿಯನ್ನು ಬಳಸಿ ರಸ್ತೆಗಳನ್ನೇ ನಿರ್ಮಿಸಬಹುದಲ್ಲವೇ ಎಂದು ಪೀಠವು ಪ್ರಶ್ನಿಸಿತು. ಇದಕ್ಕೆ ಶ್ರೀನಿಧಿ ಅವರು ಬಿಬಿಎಂಪಿ ವ್ಯಾಪ್ತಿಗೆ ಮತ್ತಷ್ಟು ಹಳ್ಳಿಗಳು ಸೇರ್ಪಡೆಗೊಂಡಿವೆ ಅಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.

Related Stories

No stories found.
Kannada Bar & Bench
kannada.barandbench.com