<div class="paragraphs"><p>BBMP and Karnataka HC</p></div>

BBMP and Karnataka HC

 
ಸುದ್ದಿಗಳು

ಬಿಬಿಎಂಪಿ ರಸ್ತೆ ಗುಂಡಿ ಪ್ರಕರಣ: ಬೇಷರತ್‌ ಕ್ಷಮೆಯಾಚಿಸಿದ ಪ್ರಧಾನ ಎಂಜಿನಿಯರ್‌; ಯೋಜನೆ ರೂಪುರೇಷೆ ಸಲ್ಲಿಸಲು ಆದೇಶ

Bar & Bench

ಬೆಂಗಳೂರು ವ್ಯಾಪ್ತಿಯ ಎಲ್ಲೆಲ್ಲಿ ರಸ್ತೆಗಳ ಗುಂಡಿ ಮುಚ್ಚಬೇಕು ಎಂಬುದರ ರೂಪುರೇಷೆಯನ್ನು ಮಾರ್ಚ್‌ 5ರ ಒಳಗೆ ಸಲ್ಲಿಸುವಂತೆ ಗುರುವಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಎಂ ಶ್ರೀನಿಧಿ ಅವರು “ಸ್ವಯಂಚಾಲಿತವಾಗಿ ಗುಂಡಿ ಮುಚ್ಚುವ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ ಅಲ್ಪಾವಧಿಯ ಟೆಂಡರ್‌ ಕರೆಯಲಾಗಿದೆ” ಎಂದು ಹೇಳಿದಾಗ ಪೀಠವು ಮೇಲಿನಂತೆ ಹೇಳಿತು.

ಪ್ರಧಾನ ಎಂಜಿನಿಯರ್‌ ಹಾಜರು

ಕಳೆದ ವಿಚಾರಣೆಯಲ್ಲಿ ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಎಸ್‌ ಪ್ರಭಾಕರ್‌ ಅವರ ವಿರುದ್ಧ ಜಾಮೀನುಸಹಿತ ವಾರೆಂಟ್‌ ಹೊರಡಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಇಂದು ಪೀಠದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದ ಮುಂದೆ ಕೈಮುಗಿದು ಬಂದ ಪ್ರಭಾಕರ್‌ ಅವರು “ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವಿಚಾರಣೆಯಲ್ಲಿ ಹಾಜರಾಗಲಿಲ್ಲ. ಇದಕ್ಕಾಗಿ ಬೇಷರತ್‌ ಕ್ಷಮೆಯಾಚಿಸುತ್ತೇನೆ” ಎಂದು ವಿನಂತಿಸಿದರು.

ಇದಕ್ಕೆ ಪೀಠವು “ಈ ಬಾರಿ ನಿಮ್ಮ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಗುಂಡಿ ಮುಚ್ಚುವ ವಿಚಾರದಲ್ಲಿ ವೈಯಕ್ತಿಕವಾಗಿ ಗಮನ ನೀಡಬೇಕು. ಮುಂದಿನ ವಿಚಾರಣೆಯಲ್ಲೂ ಖುದ್ದು ಹಾಜರಾಗಬೇಕು. ಗುಂಡಿ ಮುಚ್ಚುವ ವಿಚಾರದಲ್ಲಿ ನಿಮ್ಮ ಸಹೋದ್ಯೋಗಿಗಳ ಮಾತನ್ನು ಕೇಳಬೇಡಿ. ಅವರು ದಾರಿ ತಪ್ಪಿಸುತ್ತಾರೆ” ಎಂದು ಎರಡೆರಡು ಬಾರಿ ಹೇಳಿತು.

ಹಿಂದಿನ ಏಜೆನ್ಸಿಗೆ ಕೆಲಸ

“ರಸ್ತೆ ಗುಂಡಿ ಮುಚ್ಚುವುದಕ್ಕೆ ಹಿಂದೆ ಗುತ್ತಿಗೆ ನೀಡಲಾಗಿದ್ದ ಸಂಸ್ಥೆಯನ್ನು ಮತ್ತೆ ಅದೇ ಕಾರ್ಯಕ್ಕೆ ನಿಯೋಜಿಸಲಾಗಿದೆ. 182.38 ಕೀ ಮಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚಲು ಆರು ತಿಂಗಳು ಗುತ್ತಿಗೆಯನ್ನು ಆ ಸಂಸ್ಥೆಗೆ ನೀಡಲಾಗಿದೆ. ಫೆಬ್ರವರಿ 14ರಂದು ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ” ಎಂದು ವಕೀಲ ಶ್ರೀನಿಧಿ ಪೀಠಕ್ಕೆ ವಿವರಿಸಿದರು.

ರಸ್ತೆ ರಿಪೇರಿ ಮಾಡಲು ಏಜೆನ್ಸಿಯು ಹಾಟ್‌ ಮಿಕ್ಸ್‌ ಆನ್‌ ವ್ಹೀಲ್ಸ್‌ ತಂತ್ರಜ್ಞಾನ ಬಳಸುತ್ತದೆ ಎಂದು ತಿಳಿಸಲಾಗಿದೆ. ರಸ್ತೆ ರಿಪೇರಿ ಮತ್ತು ಅದಕ್ಕೆ ಸೂಕ್ತ ತಂತ್ರಜ್ಞಾನ ಬಳಕೆ ಮಾಡುವುದರಿಂದ ಸಾವುಗಳನ್ನು ತಪ್ಪಿಸಬಹುದು ಎಂಬುದು ಅರ್ಜಿದಾರರ ಪರ ವಕೀಲರ ಕಳಕಳಿಯಾಗಿದೆ ಎಂದು ಪೀಠವು ಹೇಳಿತು. ಮುಂದಿನ ವಿಚಾರಣೆ ವೇಳೆಗೆ ಯೋಜನೆಯ ರೂಪುರೇಷೆ ಮತ್ತು ಅಲ್ಪಾವಧಿ ಟೆಂಡರ್‌ಗೆ ಸಂಬಂಧಿಸಿದ ಬೆಳವಣಿಗೆ ಬಗ್ಗೆ ತಿಳಿಸುವಂತೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿತು.