[ಬಿಬಿಎಂಪಿ ತ್ಯಾಜ್ಯ ವಿಲೇವಾರಿ] ಅಧಿಕಾರಿಗಳಿಗೆ ಗಂಟುಮೂಟೆ ಸಮೇತ ಬರಲು ಹೇಳಿ, ಜೈಲಿಗೆ ಅಟ್ಟುತ್ತೇವೆ: ಹೈಕೋರ್ಟ್‌

ಮುಂದಿನ ವಿಚಾರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಖುದ್ದು ಹಾಜರಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ಚದ ಪೀಠವು ತಾಕೀತು ಮಾಡಿದೆ.
BBMP Commissioner Gauvrav Gupta and Karnataka HC
BBMP Commissioner Gauvrav Gupta and Karnataka HC

ನ್ಯಾಯಾಲಯದ ನಿರ್ಬಂಧ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯುತ್ತಿರುವುದಕ್ಕೆ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ಇಲ್ಲಿಂದಲೇ ಜೈಲಿಗೆ ಕಳುಹಿಸಲಾಗುವುದು. ಇದಕ್ಕಾಗಿ ಅಗತ್ಯ ವಸ್ತುಗಳನ್ನು ಗಂಟುಮೂಟೆ ಕಟ್ಟಿಕೊಂಡು ಬರಲು ತಿಳಿಸಿ ಎಂದು ಗುಡುಗಿದ್ದು, ಮುಂದಿನ ವಿಚಾರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿದೆ.

ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮದನ್‌ ಪಿಳ್ಳೈ ಅವರು “ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದಲ್ಲಿ ಉತ್ಪತ್ತಿಯಾಗುವ ಕಸ ಸುರಿಯುವುದಕ್ಕೆ ಬಿಬಿಎಂಪಿಯನ್ನು ನಿರ್ಬಂಧಿಸಿ 2021ರ ಮಾರ್ಚ್‌ 6ರಂದು ನ್ಯಾಯಾಲಯ ಆದೇಶ ಮಾಡಿದೆ. ಆದರೂ ಮಿಟ್ಟಗಾನಹಳ್ಳಿಯಲ್ಲಿ ಕ್ವಾರಿ ಪ್ರದೇಶಲ್ಲಿ ಕಸ ಸುರಿಯಲಾಗುತ್ತಿದೆ” ಪೀಠದ ಗಮನಕ್ಕೆ ತಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪ್ರತಿನಿಧಿಸಿದ್ದ ವಕೀಲ ಗುರುರಾಜ ಜೋಶಿ ಅವರು “ತ್ಯಾಜ್ಯ ಸುರಿಯಲು ಮಂಡಳಿಯಿಂದ ಪಾಲಿಕೆಗೆ ಯಾವುದೇ ರೀತಿಯ ಅನುಮತಿ ನೀಡಿಲ್ಲ” ಎಂದು ಪೀಠದ ಗಮನಸೆಳೆದರು.

ಮತ್ತೊಂದೆಡೆ ಪ್ರಕರಣ ಸಂಬಂಧ ಬಿಬಿಎಂಪಿಯೇ ಸ್ವತಃ 2021ರ ನವೆಂಬರ್‌ 23ರಂದು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯವನ್ನು ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ ಎಂದು ಹೇಳಿತ್ತು.

ಇದರಿಂದ ಕೆರಳಿದ ಪೀಠವು “ಮಾರ್ಚ್‌ 6ರ ನ್ಯಾಯಾಲಯ ನೀಡಿರುವ ಆದೇಶವನ್ನು ಬಿಬಿಎಂಪಿ ಉಲ್ಲಂಘನೆ ಮಾಡಿರುವುದು ಪ್ರಮಾಣ ಪತ್ರದಿಂದ ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆಯಾಗಿದೆ. ಯಾರ ಆದೇಶದ ಮೇರೆಗೆ ಕ್ವಾರಿ ಪ್ರದೇಶದಲ್ಲಿ ತ್ಯಾಜ್ಯ ಸುರಿಯಲಾಗಿದೆ? ಎಂದು ಪಾಲಿಕೆ ಪರ ವಕೀಲರನ್ನು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿತು.

“ಮುಂದಿನ ವಿಚಾರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಜರಾಗಲಿ. ಅವರು ಜೈಲಿಗೆ ಹೋಗಲಿ. ನ್ಯಾಯಾಲಯವು ತಮ್ಮನ್ನು ಜೈಲಿಗೆ ಕಳುಹಿಸಲಿ ಎಂಬುದಾಗಿ ಬಿಬಿಎಂಪಿಯ ಕೆಲ ಅಧಿಕಾರಿಗಳು ಬಯಸುತ್ತಿದ್ದಾರೆ” ಎಂದು ಮೌಖಿಕವಾಗಿ ಕಟುವಾಗಿ ನುಡಿಯಿತು.

“ನ್ಯಾಯಾಲಯದ ನಿರ್ಬಂಧ ಆದೇಶದ ಹೊರತಾಗಿಯೂ ಯಾರ ಆದೇಶದ ಮೇರೆಗೆ ಘನತ್ಯಾಜ್ಯವನ್ನು ಕ್ವಾರಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಮುಖ್ಯ ಆಯುಕ್ತರು ಸಲ್ಲಿಸಬೇಕು” ಎಂದು ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿತು.

Also Read
ಬಿಬಿಎಂಪಿ ರಸ್ತೆ ಗುಂಡಿ ಪ್ರಕರಣ: ಪ್ರಧಾನ ಎಂಜಿನಿಯರ್‌ ವಿರುದ್ಧ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದ ಹೈಕೋರ್ಟ್‌

ಗಂಟುಮೂಟೆ ಕಟ್ಟಿಕೊಂಡು ಬರಲು ಹೇಳಿ

“ನಿಮ್ಮ (ಬಿಬಿಎಂಪಿ) ಅಧಿಕಾರಿಗಳಿಗೆ ಅಗತ್ಯ ವಸ್ತುಗಳನ್ನು ಗಂಟುಮೂಟೆ ಕಟ್ಟಿಕೊಂಡು (ಬ್ಯಾಗ್‌ ಮತ್ತು ಬ್ಯಾಗೇಜ್‌) ಬರಲು ಹೇಳಿ. ಅವರಿಗೆ ಹೈಕೋರ್ಟ್‌ ಎಂದರೆ ಏನು ಎಂದು ತಿಳಿಸಬೇಕಿದೆ. ಈ ಬಾರಿ ಅವರನ್ನು ಇಲ್ಲಿಂದಲೇ ಜೈಲಿಗೆ ಕಳುಹಿಸಲಾಗುವುದು. ನ್ಯಾಯಾಲಯದ ಆದೇಶಕ್ಕೆ ಅರ್ಥವಿದೆ. ಇದನ್ನು ಅವರಿಗೆ ತಿಳಿಸಿ” ಎಂದು ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರಿಗೆ ಪೀಠವು ಮೌಖಿಕವಾಗಿ ತಿಳಿಸಿತು.

Also Read
ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತ ನಿಮಗೆ ಜನರ ಸಮಸ್ಯೆ ಅರ್ಥವಾಗದು: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಗರಂ

ಇದಕ್ಕೂ ಮುನ್ನ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವ ಪ್ರಕರಣದ ವಿಚಾರಣೆ ನಡೆದಿತ್ತು. ನ್ಯಾಯಾಲಯದ ಹಿಂದಿನ ಆದೇಶದಂತೆ ಪ್ರಧಾನ ಎಂಜಿನಿಯರ್‌ ಅವರು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಬೇಕಿತ್ತು. ಆದರೆ, ಅನಾರೋಗ್ಯದ ನೆಪವೊಡ್ಡಿ ಅವರು ಬಂದಿರಲಿಲ್ಲ. ಇದರಿಂದ ಕೆರಳಿದ್ದ ಪೀಠವು ಪ್ರಧಾನ ಎಂಜಿನಿಯರ್‌ ವಿರುದ್ಧ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದ್ದು, ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com