High Court of Karnataka
High Court of Karnataka 
ಸುದ್ದಿಗಳು

[ದಾಸರಹಳ್ಳಿ ಅಭಿವೃದ್ಧಿ] ಬಿಬಿಎಂಪಿಯಿಂದ ₹110 ಕೋಟಿ ಮೊತ್ತದ ಸಮಗ್ರ ಕ್ರಿಯಾ ಯೋಜನೆ ಅಫಿಡವಿಟ್ ಹೈಕೋರ್ಟ್‌ಗೆ ಸಲ್ಲಿಕೆ

Bar & Bench

ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಅಂದಾಜು ₹110 ಕೋಟಿ ಮೊತ್ತದ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಿದೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ರಸ್ತೆಗಳು ಹಾಳಾಗಿದ್ದರೂ ದುರಸ್ಥಿ ಮಾಡುತ್ತಿಲ್ಲ ಎಂದು ಆರೋಪಿಸಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಎಸ್‌ ವಿಶ್ವಜಿತ್‌ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬಿಬಿಎಂಪಿಯ ದಾಸರಹಳ್ಳಿ ವಲಯ ಆಯುಕ್ತ ಬಿ ಶರತ್ ಅವರು “ದಾಸರಹಳ್ಳಿ ವಲಯದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನನ್ನ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಬಿಬಿಎಂಪಿಯ 19 ಅಧಿಕಾರಿಗಳು, ಬೆಸ್ಕಾಂನ ಒಬ್ಬ ಅಧಿಕಾರಿ, ಜಲಮಂಡಳಿಯ ಎಂಟು ಅಧಿಕಾರಿಗಳು ಸದಸ್ಯರಾಗಿದ್ದಾರೆ. ಈ ಎಲ್ಲಾ ಸದಸ್ಯರು ಮಾರ್ಚ್‌ 18ರಂದು ನಡೆದ ಸಭೆಗೆ ಹಾಜರಾಗಿ ಚರ್ಚಿಸಿದ್ದಾರೆ. ದಾಸರಹಳ್ಳಿ ವಲಯದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹110 ಕೋಟಿಯ ಸಮಗ್ರ ಕ್ರಿಯಾ ಯೋಜನೆಯನ್ನು ಸಮಿತಿ ರೂಪಿಸಿದ್ದು, ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಎಂಬ ಮಾಹಿತಿ ಒಳಗೊಂಡ ಅಫಿಡವಿಟ್‌ ಅನ್ನು ಪೀಠಕ್ಕೆ ಸಲ್ಲಿಸಿದರು.

ದಾಸರಹಳ್ಳಿ ವಲಯದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿಯಲ್ಲಿರುವ ಒಂಭತ್ತು ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೇ 30ರೊಳಗೆ ಆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಅನುಮೋದನೆ ನೀಡಿದ ಕೂಡಲೇ ಕಾಲಮಿತಿಯೊಳಗೆ ಸಮಗ್ರ ಕ್ರಿಯಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಕ್ರಿಯಾ ಯೋಜನೆಯನ್ನು ಸಾರ್ವನಿಕರು ವೀಕ್ಷಿಸಲು ಪ್ರತ್ಯೇಕ ವೆಬ್‌ಲಿಂಕ್ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಮುಖ್ಯ ಕಚೇರಿಗೆ ಸಲ್ಲಿಸುವಂತೆ ವಲಯ ಜಂಟಿ ಆಯಕ್ತ ಮುತ್ತು ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಶರತ್ ವಿವರಿಸಿದ್ದಾರೆ.

ಅಲ್ಲದೆ, ಸಮಿತಿ ರೂಪಿಸಿರುವ ಸಮಗ್ರ ಕ್ರಿಯಾ ಯೋಜನೆ, ಒಂಭತ್ತು ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ಮತ್ತು ಮಾರ್ಚ್‌ 18ರಂದು ನಡೆದ ಸಮಿತಿಯ ಸಭೆಯ ನಡಾವಳಿ ಕುರಿತ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಲಾಗಿದೆ.

ರಾಜ್ಯ ಸರ್ಕಾರ ಅನುಮೋದನೆ ನೀಡಿದ ನಂತರ ಸಮಗ್ರ ಕ್ರಿಯಾ ಯೊಜನೆ ಜಾರಿಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.