ಈಜಿಪುರ-ಕೇಂದ್ರೀಯ ಸದನ ಮೇಲ್ಸೇತುವೆ: ವರ್ಷಾಂತ್ಯದಲ್ಲಿ ಪೂರ್ಣಗೊಳಿಸುವ ಬಗ್ಗೆ ಸಿಂಪ್ಲೆಕ್ಸ್‌ನಿಂದ ಅಫಿಡವಿಟ್‌

ಬಿಬಿಎಂಪಿ ಮುಖ್ಯ ಆಯುಕ್ತರು ಸಿಂಪ್ಲೆಕ್ಸ್‌ ಸಂಸ್ಥೆಯೊಂದಿಗೆ ಸಭೆ ನಡೆಸಿ, ಸದ್ಯ ಇರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಶೀಘ್ರ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಪೀಠ.
BBMP and Karnataka HC
BBMP and Karnataka HC

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಸೂಕ್ತ ಸಹಕಾರ ದೊರೆತರೆ ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 2022ರ ಡಿಸೆಂಬರ್‌ 31ರೊಳಗೆ ಪೂರ್ಣಗೊಳಿಸುವುದಾಗಿ ಯೋಜನೆಯ ಗುತ್ತಿಗೆ ಪಡೆದಿರುವ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಅಫಿಡವಿಟ್‌ ಸಲ್ಲಿಸಿದೆ.

ಮೇಲ್ಸೇತುವೆ ಕಾಮಗಾರಿ ವಿಳಂಬ ಪ್ರಶ್ನಿಸಿ ಕೋರಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು.

ಗುತ್ತಿಗೆದಾರ ಸಂಸ್ಥೆಯ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ”ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಏಪ್ರಿಲ್‌ 1ರಂದು ಅಫಿಡವಿಟ್‌ ಸಲ್ಲಿಸಲಾಗಿದೆ. ಪಾಲಿಕೆಯಿಂದ ಎಲ್ಲ ರೀತಿಯ ಸಹಕಾರ ದೊರೆತರೆ ಶೀಘ್ರ ಕಾಮಗಾರಿ ಆರಂಭಿಸಿ, ಇದೇ ವರ್ಷ ಡಿಸೆಂಬರ್‌ 31ರೊಳಗೆ ಪೂರ್ಣಗೊಳಿಸಲಾಗುವುದು” ಎಂದು ಪೀಠಕ್ಕೆ ಭರವಸೆ ನೀಡಿದರು.

ಪಾಲಿಕೆ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಲ್ಲಿರುವ ಅಫಿಡವಿಟ್‌ಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಸಂಸ್ಥೆ ನೀಡಿದ್ದ ಬ್ಯಾಂಕ್ ಖಾತರಿ ಇದೀಗ ವಸೂಲಾಗದ ಸಾಲ (ಎನ್‌ಪಿಎ) ಎಂದು ನ್ಯಾಯಾಲಯದ ಗಮನಕ್ಕೆ ತಂದರು.

Also Read
ಈಜಿಪುರ-ಕೇಂದ್ರೀಯ ಸದನ ಮೇಲ್ಸೇತುವೆ: ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಿಂಪ್ಲೆಕ್ಸ್‌ಗೆ ಹೈಕೋರ್ಟ್‌ ನಿರ್ದೇಶನ

ಅದಕ್ಕೆ ಪ್ರತಿಕ್ರಿಯಸಿದ ಸೋಂಧಿ ಅವರು “ಪಾಲಿಕೆ ತನ್ನ ಆಕ್ಷೇಪಣೆಯಲ್ಲಿ ಮಾಡಿರುವ ಆರೋಪಗಳಿಗೆ ಪ್ರತಿ ಆಕ್ಷೇಪಣೆ ಸಲ್ಲಿಸಲಾಗುವುದು, ಅದಕ್ಕಾಗಿ ಕೊಂಚ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

ಅದನ್ನು ಪರಿಗಣಿಸಿ, ಪ್ರತಿ ಆಕ್ಷೇಪಣೆ ಸಲ್ಲಿಸಲು ಗುತ್ತಿಗೆದಾರ ಸಂಸ್ಥೆಗೆ ಕಾಲಾವಕಾಶ ನೀಡಿದ ಪೀಠ ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ಮುಂದೂಡಿತಲ್ಲದೆ, ಅಷ್ಟರೊಳಗೆ ಪಾಲಿಕೆ ಮುಖ್ಯ ಆಯುಕ್ತರು ಸಂಸ್ಥೆಯೊಂದಿಗೆ ಸಭೆ ನಡೆಸಿ, ಸದ್ಯ ಇರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಶೀಘ್ರ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿತು.

Kannada Bar & Bench
kannada.barandbench.com