BBMP and Karnataka HC 
ಸುದ್ದಿಗಳು

ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡಣೆ: ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

ಮೇಲ್ಮನವಿಯ ಸಲ್ಲಿಕೆಯೊಂದಿಗೆ ಮತ್ತೊಂದು ಸುತ್ತಿನ ಕಾನೂನು ಹೋರಾಟ ನಿಶ್ಚಿತವಾಗಿದ್ದು, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನಿಲುವು ಬದಲಿಸುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

Siddesh M S

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳ ಪುನರ್‌ ವಿಂಗಡಣೆ ಅಧಿಸೂಚನೆ ರದ್ದತಿ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಪ್ರಕರಣವು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದ್ದು, ಹೈಕೋರ್ಟ್‌ನ ವಿಭಾಗೀಯ ಪೀಠವು ಪಕ್ಷಕಾರರ ವಾದ ಆಲಿಸಲಿದೆ.

ಇದರೊಂದಿಗೆ ಮತ್ತೊಂದು ಸುತ್ತಿನ ಕಾನೂನು ಹೋರಾಟ ನಿಶ್ಚಿತವಾಗಿದ್ದು, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನಿಲುವು ಬದಲಿಸುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರಿನ ಬಿ ಎನ್‌ ಮಂಜುನಾಥ ರೆಡ್ಡಿ, ಸಿ ಕೃಷ್ಣೇಗೌಡ ಮತ್ತು ಎನ್‌ ನಾಗರಾಜು ಮತ್ತು ಕೆ ಸಿ ಗೋವರ್ಧನ ರೆಡ್ಡಿ ಅವರು ಮೇಲ್ಮನವಿ ದಾಖಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಚುನಾವಣೆ ನಡೆಸುವ ಸಂಬಂಧ ವಾರ್ಡ್‌ಗಳ ಪುನರ್‌ ವಿಂಗಡಣೆ ಕುರಿತಾಗಿ 2022ರ ಜುಲೈ 14ರಂದು ಹೊರಡಿಸಿರುವ ಅಂತಿಮ ಅಧಿಸೂಚನೆಯ ಸಾಕಷ್ಟು ದೋಷಗಳಿಂದ ಕೂಡಿದೆ. ವಾಸ್ತವಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಒಳಗೊಂಡಿದ್ದು, ಕಾನೂನಾತ್ಮಕವಾಗಿ ದೋಷಪೂರಿತವಾಗಿದ್ದು, ವಿವೇಚನಾರಹಿತವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆಯು ಸ್ವೇಚ್ಛೆಯಿಂದ ಕೂಡಿದ್ದು, ಕ್ಷೇತ್ರ ವಿಂಗಡಣೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಅರಿಯಲು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

  • ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್‌ಗಳ ಪೈಕಿ ಕೆಲವು ವಾರ್ಡ್‌ಗಳಲ್ಲಿ ಗಣನೀಯವಾಗಿ ಕಡಿಮೆ ಜನಸಂಖ್ಯೆ ಇದ್ದು, ಇದು ಉಲ್ಲೇಖಿತ ಸರಾಸರಿ ಜನಸಂಖ್ಯೆಗೆ ಸಮೀಪವಿಲ್ಲ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 2011ರ ಜನಗಣತಿಯಲ್ಲಿ ವಿವರಿಸುವುದಕ್ಕಿಂತಲೂ ಕೆಲವು ವಾರ್ಡ್‌ಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ. ಸಾಮಾನ್ಯ ಜನಸಂಖ್ಯೆಗಿಂತ ಹೆಚ್ಚು ಮತದಾರರು ಇರಲು ಸಾಧ್ಯವೇ ಇಲ್ಲ. ಇಂಥ ವ್ಯತಿರಿಕ್ತಗಳಿಗೆ ಸಕಾರಣಗಳನ್ನು ನೀಡಲಾಗಿಲ್ಲ. ಇದಕ್ಕೆ ಶಿವಾಜಿನಗರ, ಬಿಟಿಎಂ ಲೇಔಟ್‌, ಚಾಮರಾಜಪೇಟೆ, ಜಯನಗರ ವಿಧಾನಸಭಾ ಕ್ಷೇತ್ರಗಳನ್ನು ಉದಾಹರಣೆಯನ್ನಾಗಿ ನೀಡಲಾಗಿದೆ.

  • ನಗರಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಅಂತಿಮ ಅಧಿಸೂಚನೆಯು ಭೌತಿಕ ಮತ್ತು ಭೌಗೋಳಿಕ ವಿಚಾರಗಳನ್ನು ನಗಣ್ಯವಾಗಿ ಕಂಡಿದ್ದು, ಸಂಹವನ ಸೌಲಭ್ಯಗಳು, ಸಾರ್ವಜನಿಕ ಅನುಕೂಲತೆಗಳ ಬಗ್ಗೆ ಗಮನಹರಿಸಿಲ್ಲ. ಮೇಲ್ನೋಟಕ್ಕೇ ಗೋಚರಿಸುವಂತೆ ವಾರ್ಡ್‌ಗಳ ಪುನರ್‌ ವಿಂಗಡಣೆಯನ್ನು ಅಡ್ಡಾದಿಡ್ಡಿಯಾಗಿ ನಡೆಸಿದ್ದು, ದುರುದ್ದೇಶ ಮತ್ತು ಅಕ್ರಮದಿಂದ ಕೂಡಿದೆ.

  • ಹಾಲಿ ವಾರ್ಡ್‌ ವಿಂಗಡಣೆಯ ಸಂದರ್ಭದಲ್ಲಿ ಪ್ರಮುಖ ರಸ್ತೆಗಳು, ರಾಜಕಾಲುವೆ, ರೈಲು ಹಳಿಗಳನ್ನು ಅವೈಜ್ಞಾನಿಕವಾಗಿ ವಿಭಜಿಸಲಾಗಿದ್ದು, ಕೆಲವು ಕಡೆ ಎರಡು ಮತ್ತೆ ಕೆಲವು ಕಡೆ ಮೂರು ವಾರ್ಡ್‌ಗಳಿಗೆ ಸೇರಿಸಲಾಗಿದೆ. ಸರ್ಕಾರದ ಈ ಕ್ರಮವು ಮೌಲಸೌಕರ್ಯ ಯೋಜನೆಗಳ ವ್ಯಾಪ್ತಿಯ ಬಗ್ಗೆ ಹಲವು ವಿವಾದಕ್ಕೆ ಕಾರಣವಾಗಲಿದ್ದು, ಒಟ್ಟಾರೆಯಾಗಿ ಬೆಂಗಳೂರಿನ ಆಡಳಿತ ಮತ್ತು ಅಭಿವೃದ್ಧಿಗೆ ಹಾನಿ ಉಂಟು ಮಾಡಲಿದೆ.

  • ಚುನಾವಣೆಯ ದೃಷ್ಟಿಯಿಂದ ಮಾತ್ರವಲ್ಲದೇ ವಾರ್ಡ್‌ಗಳ ಸಮರ್ಥ ಆಡಳಿತದ ದೃಷ್ಟಿಯಿಂದಲೂ ವಿವಿಧ ವಿಚಾರಗಳನ್ನು ಪರಿಶೀಲಿಸಲು ಸಂಪೂರ್ಣವಾಗಿ ಪ್ರತಿವಾದಿಗಳು ವಿಫಲರಾಗಿದ್ದಾರೆ. ಕ್ಷೇತ್ರಗಳನ್ನು ವಿಭಜಿಸುವಾಗ ಮೂಲಸೌಕರ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಉದಾಹರಣೆಗೆ ಒಂದೇ ವಾರ್ಡ್‌ನಲ್ಲಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬರುವಂತೆ ಮಾಡಲಾಗಿದೆ. ಇನ್ನೊಂದು ವಾರ್ಡ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇಲ್ಲವಾಗಿದೆ. ಇದು ಸಾಮಾನ್ಯ ಜನರಿಗೆ ಮೂಲಸೌಕರ್ಯ ನಿರಾಕರಿಸಿದಂತಾಗಲಿದೆ.

  • ಸಾಂಪ್ರದಾಯಿಕ ಕಾರಣಕ್ಕೆ ಒಟ್ಟಾಗಿ ಇರಬೇಕಾದ ಒಂದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಿನ್ನೆಲೆ ಹೊಂದಿರುವ ಜನರನ್ನು ಪ್ರತ್ಯೇಕಿಸಲಾಗಿದೆ. ಇದರಿಂದ ಮೂಲ ಸೌಕರ್ಯ ನಿರಾಕರಿಸಿದಂತಾಗಿದೆ. ಇಂಥ ಸ್ವೇಚ್ಛೆಯ ಕ್ರಮಕ್ಕೆ ಯಾವುದೇ ಅರ್ಹತೆ ಇಲ್ಲ ಮತ್ತು ಇದಕ್ಕೆ ಮಾನ್ಯತೆ ನೀಡಬಾರದು.

  • ಸಮುದಾಯಗಳನ್ನು ಪ್ರತ್ಯೇಕಿಸಿ, ಮತ ವಿಭಜನೆ ಮಾಡುವ ಮೂಲಕ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲಾಗಿದೆ. ಇದು ಬೇರೆ ಪಕ್ಷಗಳಿಗೆ ಅನನುಕೂಲವಲ್ಲದೇ ಸ್ವಾಭಾವಿಕ ನ್ಯಾಯ ಮತ್ತು ಸಂವಿಧಾನದಲ್ಲಿನ ಪ್ರಜಾಸತ್ತೀಯ ನಂಬಿಕೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

  • ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್‌ 7ರ ಅಡಿ ಕ್ಷೇತ್ರ ಪುನರ್‌ ವಿಂಗಡಣೆ ಅಂತಿಮ ಅಧಿಸೂಚನೆ ಎತ್ತಿ ಹಿಡಿಯುವ ಮೂಲಕ ಅದನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡುವ ಮೂಲಕ ಏಕಸದಸ್ಯ ಪೀಠವು ತಪ್ಪೆಸಗಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಏಕಸದಸ್ಯ ಪೀಠವು 2022ರ ಸೆಪ್ಟೆಂಬರ್‌ 16ರಂದು ಮಾಡಿರುವ ಆದೇಶವು ದೋಷಪೂರಿತ ಮತ್ತು ಕಾನೂನಿಗೆ ವಿರುದ್ಧವಾಗಿದ್ದು, ವಜಾಕ್ಕೆ ಅರ್ಹವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್‌ 7(3)(ಎ) ಅಡಿ 2021ರ ಜನವರಿ 29ರಂದು ರಾಜ್ಯ ಸರ್ಕಾರವು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸಿ, ಅಧಿಸೂಚನೆ ಪ್ರಕಟಿಸಿತ್ತು. ಇದರ ಮುಂದುವರಿದ ಭಾಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣೆಗಾಗಿ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. 2022ರ ಜೂನ್‌ 9ರಂದು ಸಮಿತಿಯು ವರದಿ ನೀಡದ್ದು, ಅದನ್ನು ಸರ್ಕಾರ ಒಪ್ಪಿಕೊಂಡಿತ್ತು. 2022ರ ಜೂನ್‌ 6ರಂದು 2011ರ ಜನಗಣತಿಯ ಆಧಾರದಲ್ಲಿ ಬಿಬಿಎಂಪಿ ವಾರ್ಡ್‌ಗಳ ಕ್ಷೇತ್ರ ಪುನರ್‌ ವಿಂಗಡಣೆಯ ಕರಡಿನ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದನ್ನು ಪರಿಶೀಲಿಸಿದ್ದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಪರಿಶೀಲನಾ ಸಮಿತಿಯು ತನ್ನ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದನ್ನು ಸರ್ಕಾರ ಒಪ್ಪಿಕೊಂಡಿತ್ತು.

ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್‌ 13ರ ಅನ್ವಯ 2020ರ ಸೆಪ್ಟೆಂಬರ್‌ 22ರಿಂದ ಎರಡು ವಾರಗಳಲ್ಲಿ ಅಂತಿಮ ಮೀಸಲಾತಿ ಪ್ರಕಟಿಸಿ, ಅಂತಿಮ ಅಧಿಸೂಚನೆ ಹೊರಡಿಸಿದ ಆರು ವಾರಗಳಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು 2020ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆನಂತರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶಿಸಿದ್ದ ಸುಪ್ರೀಂ ಕೋರ್ಟ್‌, 2022ರ ಆಗಸ್ಟ್‌ 16ರಂದು ಅರ್ಹತೆಯ ಆಧಾರದಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸಲು ಏಕಸದಸ್ಯ ಪೀಠಕ್ಕೆ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅರ್ಜಿದಾರರನ್ನು ವಕೀಲರಾದ ಎಂ ಜಯಮೊವಿಲ್‌, ಶತಭಿಷ್‌ ಶಿವಣ್ಣ, ಬಿ ಕೆ ಬೋಪಣ್ಣ, ಅಭಿಷೇಕ್‌ ಜನಾರ್ದನ್‌, ಅರ್ನವ್‌ ಬಾಗಲವಾಡಿ, ಸಮೃದ್ಧ್‌ ಹೆಗ್ಡೆ ಮತ್ತು ಧನುಷ್‌ ಮೆನನ್‌ ಪ್ರತಿನಿಧಿಸಿದ್ದಾರೆ.