ಸುದ್ದಿಗಳು

ರೋಬೊ ಶ್ವಾನಕ್ಕೆ ಚಂಪಕ್ ಹೆಸರು: ಮಕ್ಕಳ ನಿಯತಕಾಲಿಕೆಯ ವ್ಯಾಜ್ಯ ಇತ್ಯರ್ಥ ಇಂಗಿತ ತಿರಸ್ಕರಿಸಿದ ಬಿಸಿಸಿಐ

ಮೊಕದ್ದಮೆ ಹೂಡಿದ್ದ ಚಂಪಕ್ ಖುದ್ದು ವ್ಯಾಜ್ಯ ಇತ್ಯರ್ಥಕ್ಕೆ ಮುಂದಾದರೂ ಆ ಪ್ರಸ್ತಾಪವನ್ನು ಕ್ರಿಕೆಟ್ ಸಂಸ್ಥೆ ತಿರಸ್ಕರಿಸಿತು.

Bar & Bench

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿ ವೇಳೆ ಕ್ರಿಕೆಟ್‌ಪ್ರಿಯರ ಗಮನ ಸೆಳೆದಿದ್ದ ರೋಬೊ ಶ್ವಾನಕ್ಕೆ ಚಂಪಕ್‌ ಹೆಸರು ಬಳಸಿದ್ದಕ್ಕೆ ಪ್ರಸಿದ್ಧ ಮಕ್ಕಳ ನಿಯತಕಾಲಿಕೆ ಚಂಪಕ್‌ ಪ್ರಕಾಶಕರಾದ ದೆಹಲಿ ಪ್ರೆಸ್‌ ಪತ್ರ್‌ ಪ್ರಕಾಶನ್‌ ಜೊತೆ ರಾಜಿಗೆ ಮುಂದಾಗುವುದಿಲ್ಲ ಎಂದು  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ಸೌರಭ್‌ ಬ್ಯಾನರ್ಜಿ ಅವರೆದುರು ಪ್ರಕರಣ ಬಂದಾಗ ಅವರು ಸೆಪ್ಟೆಂಬರ್‌ನಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ದೆಹಲಿ ಪ್ರೆಸ್ ಪರ ವಾದ ಮಂಡಿಸಿದ ವಕೀಲ ಅಮಿತ್ ಗುಪ್ತಾ, ಐಪಿಎಲ್ ಟೂರ್ನಿ ಮುಗಿದಿರುವ ಹಿನ್ನೆಲೆಯಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಮುಂದಿನ ವರ್ಷ ನಡೆಯುವ ಐಪಿಎಲ್‌ ವೇಳೆ ಚಂಪಕ್‌ ಹೆಸರು ಬಳಸುವುದಿಲ್ಲ ಎಂದು ಬಿಸಿಸಿಐ ಹೇಳಿದರೆ ಪ್ರಕರಣವನ್ನು ದೆಹಲಿ ಪ್ರೆಸ್‌ ಮುಂದುವರೆಸುವುದಿಲ್ಲ ಎಂದು ಗುಪ್ತಾ ವಾದ ಮಂಡಿಸಿದರು. ತನ್ನ ಕಕ್ಷಿದಾರರು ಮಧ್ಯಸ್ಥಿಕೆಗೆ ಮುಕ್ತರು ಎಂದು ಕೂಡ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ಬಿಸಿಸಿಐ ಪರವಾಗಿ ಹಾಜರಾದ ವಕೀಲ ತನ್ಮಯ್ ಮೆಹ್ತಾ, 'ಚಂಪಕ್' ಹೆಸರು ಬಳಸುವಲ್ಲಿ ಹಲವು ವಾಣಿಜ್ಯ ಪರಿಗಣನೆಗಳು ಇರುವುದರಿಂದ ಬಿಸಿಸಿಐ ಅಂತಹ ಭರವಸೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಬಿಸಿಸಿಐ ದೊಡ್ಡ ಸಂಸ್ಥೆ ಎಂದು ಲೆಕ್ಕಹಾಕಿ ಹಣ ಪಡೆದು ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದು ಮೊಕದ್ದಮೆಯ ಹಿಂದಿನ ಉದ್ದೇಶವಾಗಿದೆ ಎಂದು ಅವರು ದೂರಿದರು. ಜೊತೆಗೆ ದೆಹಲಿ ಪ್ರೆಸ್ ವಿರುದ್ಧ ಪ್ರಕರಣ ಹೂಡುವುದಾಗಿ ಮೆಹ್ತಾ ಎಚ್ಚರಿಕೆ ನೀಡಿದರು.

ಹೀಗಾಗಿ ವಾದ ಪೂರ್ಣಗೊಳಿಸುವಂತೆ ಕಕ್ಷಿದಾರರಿಗೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿತು.

ರೋಬೊ ನಾಯಿಗೆ ತನ್ನ ನಿಯತಕಾಲಿಕೆ ಚಂಪಕ್‌ ಎಂಬ ಹೆಸರಿಟ್ಟಿರುವುದರಿಂದ ವಾಣಿಜ್ಯ ಚಿಹ್ನೆ ಉಲ್ಲಂಘನೆಯಾಗಿದೆ ಎಂದು ದೂರಿ ಏಪ್ರಿಲ್ 2025ರಲ್ಲಿ, ದೆಹಲಿ ಪ್ರೆಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಅನಧಿಕೃತವಾಗಿ ಹೆಸರು ಬಳಕೆ ಮಾಡಲಾಗಿದ್ದು ಹೆಸರಿನ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ ಎಂದು ಅದು ಹೇಳಿತ್ತು.

ಆದರೆ ಬಿಸಿಸಿಐ ಚಂಪಕ್‌ ಎಂಬ ಹೆಸರು ಬಳಸಿದರೆ ಅದು ಹೇಗೆ ವಾಣಿಜ್ಯ ಚಿಹ್ನೆ ಉಲ್ಲಂಘನೆಯಾಗುತ್ತದೆ, ಅದು ಹೇಗೆ ಅನ್ಯಾಯದ ಲಾಭ ಪಡೆಯುತ್ತದೆ ಎಂದು ನ್ಯಾಯಾಲಯ ಆಗ ಪ್ರಶ್ನಿಸಿತ್ತು. ಆಗ ಗುಪ್ತಾ ಅವರು ಪ್ರಕಾಶಕರು ಚಂಪಕ್‌ ಬ್ರಾಂಡ್‌ನ ನೋಂದಾಯಿತ ಮಾಲೀಕರಾಗಿದ್ದು ಅದನ್ನು ಬಿಸಿಸಿಐ ಅನುಮತಿ ಇಲ್ಲದೆ ಬಳಸಿಕೊಂಡಿದೆ ಎಂದಿದ್ದರು.

“ನನ್ನ ಕಕ್ಷಿದಾರರ ನಿಯತಕಾಲಿಕ ಪ್ರಾಣಿ ಪಾತ್ರಗಳಿಗೆ ಹೆಸರುವಾಸಿಯಾಗಿದೆ. ಎರಡೂ ಉತ್ಪನ್ನಗಳು ವಿಭಿನ್ನ ಎಂದು ಹೇಳಬಹುದಾದರೂ ಹೆಸರಿನ ಬಳಕೆ ಪ್ರಕಾಶಕರಿಗೆ ಹಾನಿ ಉಂಟು ಮಾಡುತ್ತದೆ ಮತ್ತು ತಮ್ಮ ನಿಯತಕಾಲಿಕೆ ದುರ್ಬಲಗೊಳ್ಳಲು ಕಾರಣವಾಗುತ್ತದೆ” ಎಂದಿದ್ದರು.

ಆದರೆ ಅನ್ಯಾಯದ ಪ್ರಯೋಜನ ಉಂಟಾದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ನ್ಯಾಯಾಲಯ ನುಡಿದಿತ್ತು. ಐಪಿಎಲ್‌ ವಾಣಿಜ್ಯ ಉದ್ಯಮವಾಗಿದ್ದು ಚಂಪಕ್‌ ಶ್ವಾನ ರೋಬೊ ಉತ್ಪನ್ನದ ಜಾಹೀರಾತು ವಾಣಿಜ್ಯ ಶೋಷಣೆ ನಡೆದಿರುವುದನ್ನು ಸಾಬೀತುಪಡಿಸಲು ಸಾಕಾಗುತ್ತದೆ ಎಂದು ಗುಪ್ತಾ ವಾದಿಸಿದ್ದರು.

ಈ ವೇಳೆ ಕೊಹ್ಲಿ ಅವರಿಗೆ ಚಿಕು (ಚಿಕು ಎಂಬುದು ಚಂಪಕ ನಿಯತಕಾಲಿಕೆಯಲ್ಲಿ ಪ್ರಕಟವಾಗುವ ಕತೆಯೊಂದರ ಪಾತ್ರವೂ ಹೌದು) ಎಂಬ ಅಡ್ಡ ಹೆಸರು ಇದ್ದು ಅವರ ವಿರುದ್ಧವೂ ಪ್ರಕರಣ ಹೂಡಿ ಪ್ರಕಾಶಕರು ರಾಯಧನ ಗಳಿಸಬಹುದು ಎಂದು ನ್ಯಾಯಾಲಯ ಕುಟುಕಿತ್ತು. ಆಗ ಗುಪ್ತಾ ಅವರು ಕೊಹ್ಲಿ ಆ ಹೆಸರಿನ ಉತ್ಪನ್ನ ತಯಾರಿಸುತ್ತಿಲ್ಲ. ಅವರು ಹಾಗೇನಾದರೂ ಮಾಡಿದರೆ ಅದು ವಾಣಿಜ್ಯ ಶೋಷಣೆಯಾಗುತ್ತದೆ ಎಂದಿದ್ದರು.