Bar Council Of India 
ಸುದ್ದಿಗಳು

ವಿದೇಶಿ ಕಾನೂನು ಸಂಸ್ಥೆಗಳಿಗೆ ಅವಕಾಶ ವಿವಾದ: ಎಸ್ಐಎಲ್ಎಫ್ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಬಿಸಿಐ

ವಿದೇಶಿ ಕಾನೂನು ಸಂಸ್ಥೆಗಳ ಪ್ರವೇಶಿಕೆ ಬಗ್ಗೆ ದಾರಿತಪ್ಪಿಸುವಂತಹ ಸಾರ್ವಜನಿಕ ಮಾಹಿತಿ ನೀಡುವ ಮೂಲಕ ಸೊಸೈಟಿ ತನ್ನ ವೃತ್ತಿಯನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಬಿಸಿಐ ಅಸಮಾಧಾನ ವ್ಯಕ್ತಪಡಿಸಿದೆ.

Bar & Bench

ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಭಾರತದ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ದಾರಿತಪ್ಪಿಸುವ ಮಾಹಿತಿ ಹರಡುತ್ತಿರುವ ಭಾರತೀಯ ಕಾನೂನು ಸಂಸ್ಥೆಗಳ ಸೊಸೈಟಿ (ಎಸ್‌ಐಎಲ್‌ಎಫ್‌) ಪ್ರತಿನಿಧಿಗಳಿಗೆ ನೋಟಿಸ್‌ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಹೇಳಿದೆ.

ಖಾಸಗಿ ವಾಣಿಜ್ಯ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿ ಹೊಂದಿರುವ ಕಾನೂನು ಸಂಸ್ಥೆಗಳನ್ನು ರಕ್ಷಿಸುವ ಹೆಸರಿನಲ್ಲಿ ರೋಚಕ ಮತ್ತು ದಿಕ್ಕುತಪ್ಪಿಸುವಂತಹ ಪತ್ರಿಕಾ ಪ್ರಕಟಣೆ ಹೊರಡಿಸುವುದು ವಾಸ್ತವದಲ್ಲಿ ಖಾಸಗಿ ವಾಣಿಜ್ಯ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿ ಹೊಂದಿರುವ ವೃತ್ತಿಯನ್ನು ವೈಯಕ್ತಿಕ ಅಥವಾ ನಿರ್ದಿಷ್ಟ ವರ್ಗದ ಲಾಭಕ್ಕಾಗಿ ಬಳಸುವುದಕ್ಕೆ ಸಮವಾಗಿದ್ದು ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆಗೆ ಕಾರಣರಾದ ವ್ಯಕ್ತಿಗಳಿಗೆ ಅವರ ನಡೆ ವಿವರಿಸಲು ಕೇಳಿ ನೋಟಿಸ್‌ ನೀಡುವುದನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ಬಿಸಿಐ ಹೇಳಿದೆ.

ತಪ್ಪೆಸಗಿರುವುದು ಕಂಡುಬಂದರೆ,  ಖಂಡನೆ, ಅಮಾನತು ಅಥವಾ ವಕೀಲರ ಪಟ್ಟಿಯಿಂದ ತೆಗೆದುಹಾಕುವುದು ಸೇರಿದಂತೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.

ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳಿಗೆ ಭಾರತಕ್ಕೆ ಪ್ರವೇಶ ಕಲ್ಪಿಸುವ ಸಂಬಂಧ ಇತ್ತೀಚೆಗೆ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿರುವ ಸಂಬಂಧ ಎಸ್‌ಐಎಲ್‌ಎಫ್‌ ಮತ್ತು ಬಿಸಿಐ ನಡುವೆ ಭಿನ್ನಾಭಿಪ್ರಾಯ ಇದೆ.

"ವಿದೇಶಿ ಕಾನೂನು ಸಂಸ್ಥೆಗಳಿಗೆ ಮಣೆ ಹಾಕುತ್ತಿರುವುದು ನಮ್ಮ ಸಂಸ್ಥೆಗಳನ್ನು ನಾಶ ಮಾಡಲೆಂದೇ?" ಎಂದು ಎಸ್ಐಎಲ್ಎಫ್ ಈಚೆಗೆ ಕಿಡಿಕಾರಿತ್ತು. ಇದಕ್ಕೆ ತಿರುಗೇಟು ನೀಡಿರುವ ಬಿಸಿಐ ಎಸ್‌ಐಎಲ್‌ಎಫ್‌ ಪತ್ರಿಕಾ ಪ್ರಕಟಣೆಯಲ್ಲಿ ಬಳಸಿರುವ ಭಾಷೆ ವೃತ್ತಿಪರ ದುರ್ನಡತೆಗೆ ಸಮ ಎಂದಿದೆ.

ತಾನು ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಭಾರತದಲ್ಲಿ ಕಾನೂನು ವೃತ್ತಿಯನ್ನು ನಿಯಂತ್ರಿಸಲು ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾದ ಅಧಿಕಾರ ಹೊಂದಿದ್ದೇನೆ ಎಂದು ಬಿಸಿಐ ಹೇಳಿದ್ದು, "ಸ್ವ ಉದ್ದೇಶ" ಈಡೇರಿಕೆಗಾಗಿ ರಚಿತವಾಗಿರುವ ಖಾಸಗಿ ಸಂಸ್ಥೆಯೊಂದರ ಆದ್ಯತೆಗಳ ಅಧೀನಕ್ಕೊಳಪಡಬೇಕಿಲ್ಲ ಎಂದು ಹೇಳಿದೆ.