Lawyers 
ಸುದ್ದಿಗಳು

ನಗರ ಮತ್ತು ಗ್ರಾಮೀಣ ಪ್ರದೇಶಗಳ ಕಿರಿಯ ವಕೀಲರಿಗೆ ಸ್ಟೈಪೆಂಡ್: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಸಿಐ

ಸ್ಟೈಪೆಂಡ್ ನೀಡುವುದನ್ನು ಪ್ರೋತ್ಸಾಹಿಸಲಾಗಿದ್ದರೂ, ಕೆಲ ಹಿರಿಯ ವಕೀಲರಿಗೆ ಇರುವ ಮುಗ್ಗಟ್ಟುಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಡ್ಡಾಯಗೊಳಿಸಿಲ್ಲ.

Bar & Bench

ಹಿರಿಯ ವಕೀಲರು, ಕಾನೂನು ಸಂಸ್ಥೆಗಳು ಮತ್ತು ಸ್ವತಂತ್ರ ವೃತ್ತಿಪರರಿಗೆ ಸಹಾಯ ಮಾಡುವ ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಪೆಂಡ್‌ ನೀಡುವ ಕುರಿತಂತೆ ಭಾರತೀಯ ವಕೀಲರ ಪರಿಷತ್‌ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕಿರಿಯ ವಕೀಲರು ಎದುರಿಸುತ್ತಿರುವ ಹಣಕಾಸು ಸಮಸ್ಯೆಗಳ ಬಗ್ಗೆ ವಕೀಲ ಸಿಮ್ರಾನ್ ಕುಮಾರಿ ಅವರು ಗಮನ ಸೆಳೆದಿದ್ದ ಹಿನ್ನೆಲೆಯಲ್ಲಿ ಜುಲೈ 29ರಂದು ದೆಹಲಿ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಕಿರಿಯ ವಕೀಲರು ನೋಂದಾಯಿಸಿಕೊಂಡ ದಿನದಿಂದ ಕನಿಷ್ಠ ಮೂರು ವರ್ಷಗಳ ಅವಧಿಗೆ ನಗರ ಪ್ರದೇಶಗಳಲ್ಲಿ ತಿಂಗಳಿಗೆ ₹ 20,000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ₹15,000 ಕನಿಷ್ಠ ವೇತನ ನೀಡುವಂತೆ ಬಿಸಿಐ ಸೂಚಿಸಿದೆ.

ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳು ಮತ್ತು ವಕೀಲರ ಸಂಘಗಳನ್ನು ಉದ್ದೇಶಿಸಿರುವ ಈ ಸುತ್ತೋಲೆ, ಕಿರಿಯ ವಕೀಲರು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಗಮನಾರ್ಹ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾರೆ ಎಂದಿದೆ.

ಸ್ಟೈಪೆಂಡ್ ನೀಡುವುದನ್ನು ಪ್ರೋತ್ಸಾಹಿಸಲಾಗಿದ್ದರೂ, ಸಣ್ಣ ಪಟ್ಟಣಗಳಲ್ಲಿ ಅಥವಾ ಕಡಿಮೆ ಲಾಭದಾಯಕ ವಲಯಗಳಲ್ಲಿ ಕೆಲಸ ಮಾಡುವ ಕೆಲ ಹಿರಿಯ ವಕೀಲರಿಗೆ ಇರುವ ಮುಗ್ಗಟ್ಟುಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಡ್ಡಾಯಗೊಳಿಸಿಲ್ಲ.

ಹಿರಿಯ ವಕೀಲರು ಮತ್ತು ಕಾನೂನು ಸಂಸ್ಥೆಗಳು ಕೇವಲ ಹಣಕಾಸಿನ ನೆರವನ್ನಷ್ಟೇ ಒದಗಿಸದೆ ನ್ಯಾಯಾಲಯದ ಕಾರ್ಯಚಟುವಟಿಕೆಯ ವೀಕ್ಷಣೆಗೆ, ಕಾನೂನು ಸಂಶೋಧನೆಯ ಮಾರ್ಗದರ್ಶನಕ್ಕೆ, ಕರಡು ರೂಪಿಸುವಿಕೆ ಮತ್ತು ಕೇಸ್ ತಂತ್ರಗಾರಿಕೆಗೆ ಅವಕಾಶ ನೀಡಬೇಕು ಬಿಸಿಐ ಕಿವಿಮಾತು ಹೇಳಿದೆ.

ಸ್ಟೈಪೆಂಡ್‌ ಮೊತ್ತ, ನೀಡಲಾದ ಅವಧಿ ಮತ್ತು ವಕೀಲರು ನೋಂದಾಯಿಸಿಕೊಂಡ ನಿಖರವಾದ ದಾಖಲೆಗಳನ್ನು ನಿರ್ವಹಿಸಿ ವಾರ್ಷಿಕ ವರದಿ ವೇಲೆ ಆಯಾ ರಾಜ್ಯಗಳ ವಕೀಲರ ಪರಿಷತ್ತುಗಳಿಗೆ ಹಿರಿಯ ವಕೀಲರು ಮತ್ತು ಕಾನೂನು ಸಂಸ್ಥೆಗಳು ಒದಗಿಸಬೇಕು ಎಂದು ಅದು ಸೂಚಿಸಿದೆ.

ಸ್ಟೈಪೆಂಡ್‌ ದೊರೆಯದಿದ್ದರೆ ಕಿರಿಯ ವಕೀಲರು ರಾಜ್ಯ ವಕೀಲರ ಪರಿಷತ್ತಿಗೆ ದೂರು ಸಲ್ಲಿಸಬಹುದು. ಆದರೆ ಹಿರಿಯ ವಕೀಲರಿಗೆ ನೈಜ ಆರ್ಥಿಕ ಮಿತಿಗಳಿದ್ದರೆ ಅಂತಹವರ ಬಗ್ಗೆ ಮೃದು ಧೋರಣೆ ತಳೆಯುವುದಾಗಿ ಬಿಸಿಐ ಹೇಳಿದೆ.  

ಇದಲ್ಲದೆ ತನ್ನ ಮಾರ್ಗಸೂಚಿ ಜಾರಿಯಾಗಿರುವುದನ್ನು ನಿರಂತರವಾಗಿ ಪರಿಶೀಲಿಸಲು ಮತ್ತು ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿ ಆಧಾರದಲ್ಲಿ ಸ್ಟೈಪೆಂಡ್‌ ಮೊತ್ತ ಸರಿಹೊಂದಿಸಲು ತಾನು ಸಮಿತಿ ಸ್ಥಾಪಿಸುವುದಾಗಿ ಬಿಸಿಐ ಸುತ್ತೋಲೆಯಲ್ಲಿ ತಿಳಿಸಿದೆ.  

ಮದ್ರಾಸ್ ಹೈಕೋರ್ಟ್ ಕೂಡ ಈ ಹಿಂದೆ ರಾಜ್ಯದ ಎಲ್ಲಾ ಕಿರಿಯ ವಕೀಲರಿಗೆ ಕನಿಷ್ಠ ₹ 15,000 ದಿಂದ ₹ 20,000ದವರೆಗೆ ಮಾಸಿಕ ಸ್ಟೈಪೆಂಡ್‌ ನೀಡಲು ಹೇಳಿತ್ತು.