ತಮ್ಮ ನಡೆನುಡಿಯ ಮೂಲಕ ಜಾತೀಯತೆಯ ಆರೋಪಗಳಿಂದ ನ್ಯಾಯಾಂಗವನ್ನು ಉಳಿಸುವ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾ ನ್ಯಾಯಾಧೀಶರುಗಳಿಗೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಕಿವಿಮಾತು ಹೇಳಿದೆ [ಇಂದ್ರಜೀತ್ ಪಟೇಲ್ ಮತ್ತು ಸರ್ಕಾರ ನಡುವಣ ಪ್ರಕರಣ].
ಜಾಮೀನು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರು ಈ ಎಚ್ಚರಿಕೆ ನೀಡಿದ್ದು ಆದೇಶದ ಪ್ರತಿಯನ್ನು ಸತ್ನಾ ಜಿಲ್ಲೆ ಮೈಹರ್‌ನ ಪ್ರಥಮ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಪ್ರಶಾಂತ್ ಶುಕ್ಲಾ ಅವರ ಸೇವಾ ಪುಸ್ತಕದಲ್ಲಿ ದಾಖಲಿಸುವಂತೆ ಸೂಚಿಸಿದರು. ಭವಿಷ್ಯದಲ್ಲಿ ನ್ಯಾಯಾಂಗದ ಒಟ್ಟಾರೆ ಚಿತ್ರಣವನ್ನು ಹಾಳುಮಾಡುವಂತಹ ಜಾತಿವಾದ, ಪಕ್ಷಪಾತದ ಆರೋಪ ಕೇಳಿ ಬರಬಾರದು ಎಂಬ ಕಾರಣಕ್ಕೆ ತಮ್ಮ ನಡೆಯಲ್ಲಿ ಹೆಚ್ಚು ಜಾಗರೂಕರಾಗಿ ವಿವೇಚನಾಶೀಲರಾಗಿರಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.
“ಪ್ರಮುಖ ಆರೋಪಿಗೆ ಕೇವಲ ಜಾತಿ ಆಧಾರದ ಮೇಲೆ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. ಆತನ ಬಳಿ ಕದ್ದು ಮಾಲು ದೊರೆತಿದ್ದರೂ ಆತನಿಗೆ ಜಾಮೀನು ನೀಡಲಾಗಿದೆ. ಬದಲಿಗೆ ಆತನ ಹೇಳಿಕೆಯನ್ನಷ್ಟೇ ಆಧರಿಸಿ ನನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ಕಳವು ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಅರ್ಜಿದಾರ ತಿಳಿಸಿದ್ದರು.
ಅರ್ಜಿದಾರರ ಆರೋಪಗಳು ಮೇಲ್ನೋಟಕ್ಕೆ ರುಜುವಾತಾಗಿವೆ ಎಂದ ಹೈಕೋರ್ಟ್ ₹25,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಪಡೆದು ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿತು.