ಮುಸ್ಲಿಂ ಸಮುದಾಯ ತಮ್ಮ ದಾಖಲೆಗಳಲ್ಲಿ ಜಾತಿ ಉಲ್ಲೇಖಿಸದಿರುವ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ಬಾಂಬೆ ಹೈಕೋರ್ಟ್ ಪರಿಶೀಲಿಸಲಿದೆ [ಜುವೇರಿಯಾ ರಿಯಾಜಹಮದ್ ಶೇಖ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ತಮಗೆ ವಿಮುಕ್ತ್ ಜಾತಿಯ ಮುಸ್ಲಿಂ ನಾಯಕ್‌ವಾಡಿಯ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಲು ನಿರಾಕರಿಸಿ ಸಾಂಗ್ಲಿಯ ಜಾತಿ ಪರಿಶೀಲನಾ ಸಮಿತಿ ನೀಡಿದ ಆದೇಶ ರದ್ದುಗೊಳಿಸುವಂತೆ ಅರ್ಜಿದಾರರಾದ ಜುವೇರಿಯಾ ಶೇಖ್ ಕೋರಿದ್ದರು.
ಅರ್ಜಿದಾರರ ಶಾಲೆ ಬಿಡುವ ಪ್ರಮಾಣ ಪತ್ರದಲ್ಲಿ ಜಾತಿಯನ್ನು ಮುಸ್ಲಿಂ - ನಾಯಕ್‌ವಾಡಿ ಎಂದು ನಮೂದಿಸಿಲ್ಲ, ಏಕೆಂದರೆ ಮುಸ್ಲಿಂ ಸಮುದಾಯದಲ್ಲಿ ಉಪಜಾತಿಯನ್ನು ನಮೂದಿಸುವ ಕ್ರಮವಿಲ್ಲ. ಮುಸ್ಲಿಂ ಸಮುದಾಯದ ಕೆಲವು ವ್ಯಕ್ತಿಗಳಿಗೆ ಅವರ ಸಾಂಪ್ರದಾಯಿಕ ವ್ಯವಹಾರದ ಆಧಾರದ ಮೇಲೆ ವಿಮುಕ್ತ್ ಜಾತಿ (ವಿಜೆ) ಸ್ಥಾನಮಾನ ನೀಡಲಾಗಿದೆ. ಇಸ್ಲಾಂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಮುಸ್ಲಿಂ ಸಮುದಾಯದ ದಾಖಲೆಯಲ್ಲಿ ಜಾತಿ ನಮೂದಿಸಿಲ್ಲವಾದ್ದರಿಂದ ಜಾತಿ ಪರಿಶೀಲನಾ ಸಮಿತಿ ಈ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ಶೇಖ್ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಬಾಂಬೆ ಕೋರ್ಟ್ ನೀಡಿದ ಹಲವು ತೀರ್ಪುಗಳ ಪ್ರಕಾರ ಮುಸ್ಲಿಂ ಸಮುದಾಯದಲ್ಲಿ ತಮ್ಮ ದಾಖಲೆಗಳಲ್ಲಿ ಜಾತಿ ನಮೂದಿಸುವ ಅಭ್ಯಾಸವಿಲ್ಲ ಎಂಬ ದೃಢ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ಬಿ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ಹೇಳಿತು.
"ನಾವು ಈ ವಿಷಯದಲ್ಲಿ ಕಾನೂನನ್ನು ಪರಿಶೀಲಿಸಲು ಬಯಸುತ್ತೇವೆ. ಆದ್ದರಿಂದ, ಈ ಪ್ರಶ್ನೆಗೆ ನ್ಯಾಯಾಲಯಕ್ಕೆ ಸಹಾಯಮಾಡಲು ನಾವು ಎರಡೂ ಕಡೆಯವರನ್ನು (ಅರ್ಜಿದಾರರು ಹಾಗೂ ರಾಜ್ಯ ಸರ್ಕಾರ) ಕೇಳಿಕೊಳ್ಳುತ್ತೇವೆ" ಎಂದು ಪೀಠ ಹೇಳಿದೆ.