ಉತ್ತರ ಕನ್ನಡ ಜಿಲ್ಲೆ ಬೇಲೆಕೇರಿ ಬಂದರಿನಿಂದ 2009-10ರಲ್ಲಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿ ಸರ್ಕಾರದ ಬೊಕ್ಕಸಕ್ಕೆ 3.27 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಕೆನರಾ ಓವರ್‌ಸೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್ ಒಡೆಯರ್ ಮತ್ತಿತರರ ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಒಡೆಯರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ. ಆ ಮೂಲಕ ಕ್ರಿಮಿನಲ್ ವಿಚಾರಣೆಗೆ ಅನುಮತಿಸಿದೆ.
ಒಡೆಯರ್ ಅವರ ಮೇಲ್ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ವಿಚಾರಣೆ ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದೆ.
ಅಪರಾಧ ನಿಗದಿಪಡಿಸುವ ಸಮಯದಲ್ಲಿ ವ್ಯಕ್ತಿಯು ಕಂಪನಿಯ ವ್ಯವಹಾರಗಳ ಉಸ್ತುವಾರಿ ಮತ್ತು ಜವಾಬ್ದಾರನಾಗಿದ್ದಾನೆಯೇ ಎಂಬುದು ವಿಚಾರಣೆಯ ವಿಷಯವಾಗಿದೆ. ಅದಿರು ಸಾಗಾಟಕ್ಕೆ ಹಣ ಪಾವತಿ ಮಾಡಿರುವಲ್ಲಿ ಒಡೆಯರ್ ಪಾತ್ರ ಇದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಒಡೆಯರ್ ವಿರುದ್ಧ ಇದು ಪ್ರಾಥಮಿಕ ಹಂತದ ಪ್ರಕರಣವಾಗಿದ್ದು ಈ ಹಂತದಲ್ಲಿ ಅವರನ್ನು ಆರೋಪಿಯನ್ನಾಗಿ ನಿಗದಿಪಡಿಸಲು ಇಷ್ಟು ಅಂಶ ಸಾಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಾಯಿದೆಯ ಅಡಿಯಲ್ಲಿ ಅಪರಾಧವನ್ನು ಪರಿಗಣಿಸುವ ಡಿಸೆಂಬರ್ 30, 2015 ರಂದು ನೀಡಲಾಗಿದ್ದ ವಿಶೇಷ ನ್ಯಾಯಾಧೀಶರ ಸಂಜ್ಞೇಯ ಆದೇಶ ನಿರ್ದಿಷ್ಟ ನಿಬಂಧನೆಯ ಅನುಪಸ್ಥಿತಿಯಲ್ಲಿ ಅಸಮಂಜಸವಾಗಿದೆ. ಆದರೆ ಇದು ವಿಚಾರಣೆಗೆ ತೊಂದರೆ ಉಂಟುಮಾಡುವುದಿಲ್ಲ ಎಂದು ಅದು ಹೇಳಿದೆ.
ಅಲ್ಲದೆ ಅರ್ಜಿದಾರರು ಅತಿಯಾದ ವಿಳಂಬ ಅಂದರೆ ಎರಡು ವರ್ಷದ ಬಳಿಕ ಆದೇಶವನ್ನು ಪ್ರಶ್ನಿಸಿದ್ದು ಇದಕ್ಕೆ ಅವರು ಕಾರಣವನ್ನೂ ವಿವರಿಸಿಲ್ಲ. ಅಪರಾಧವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆಯೇ ವಿನಾ ಅಪರಾಧಿಯನ್ನಲ್ಲ ಎಂಬುದು ಒಪ್ಪಿತ ಕಾನೂನಿನ ಸ್ಥಿರ ತತ್ವವಾಗಿದೆ. ಆದಾಗ್ಯೂ, ವಿಶೇಷ ನ್ಯಾಯಾಧೀಶರು ಸಂಬಂಧಿತ ಎಲ್ಲವನ್ನು ಪರಿಶೀಲಿಸಿದ್ದಾರೆ ಎಂಬುದನ್ನು ಸಂಜ್ಞೇಯ ಆದೇಶ ಸೂಚಿಸುತ್ತದೆ. ಆದೇಶದ ರೂಪದಲ್ಲಿ ಬದಲಾವಣೆಯು ಅದರ ಪರಿಣಾಮವನ್ನು ಬದಲಾಯಿಸುವುದಿಲ್ಲ. ಹೀಗಾಗಿ ಸಿಆರ್‌ಪಿಸಿ ಸೆಕ್ಷನ್ 465ರ ಅಡಿಯಲ್ಲಿ ನ್ಯಾಯ ವಿಫಲ ಆಗಿಲ್ಲ ಎಂಬುದು ಸಾಬೀತಾಗಿದೆ. ಈ ಅಕ್ರಮವು ವಿಚಾರಣೆಯನ್ನು ಹಾಳು ಮಾಡುವುದಿಲ್ಲ ಎಂದು ಪೀಠ ತಿಳಿಸಿದೆ.
ಹಿನ್ನೆಲೆ
ಸರ್ಕಾರೇತರ ಸಂಸ್ಥೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದನ್ವಯ ಅದಿರು ಅಕ್ರಮ ರಫ್ತು ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಲಾಗಿತ್ತು. ಅಕ್ಟೋಬರ್ 9, 2014 ರಂದು ಕೆನರಾ ಓವರ್‌ಸೀಸ್ ಪ್ರೈ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜಿ ಲಕ್ಷ್ಮೀನಾರಾಯಣ ಗುಬ್ಬಾ ಮತ್ತು ಮಿನೆರಲ್ ಮೈನರ್ಸ್ ಅಂಡ್ ಟ್ರೇಡರ್ಸ್‌ನ ಕೆ ರಾಮಪ್ಪ ಹಾಗೂ ಅನಾಮಧೇಯ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಒಡೆಯರ್ ವ್ಯವಸ್ಥಾಪಕ ನಿರ್ದೇಶಕಾಗಿರುವ ಕೆನರಾ ಓವರ್‌ಸೀಸ್ ಲಿಮಿಟೆಡ್, ಗುಬ್ಬ; ರಾಮಪ್ಪ; ಶ್ರೀಮತಿ ಶಾಂತಲಕ್ಷ್ಮಿ ಜಯರಾಮ್ ಮತ್ತು ಜೆ ಮಿಥಿಲೇಶ್ವರ್ ಅವರ ವಿರುದ್ಧ ಡಿಸೆಂಬರ್ 17, 2015ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: