ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳದ ಮೌಲ್ವಿ ಅಬ್ದುಲ್ ನಾಸೀರ್ ಮದನಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಮಾನವೀಯತೆಯ ನೆಲೆಯಲ್ಲಿ ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪಾಗಿ ಅವರನ್ನು ಸಿಲುಕಿಸಿದ್ದರಿಂದ ಅವರು 1998ರಿಂದ 2007ರವರೆಗೆ ಬಂಧನದಲ್ಲಿದ್ದರು. 2007ರಲ್ಲಿ ಅವರನ್ನು ಖುಲಾಸೆ ಮಾಡಲಾಗಿತ್ತು. ಆನಂತರ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿಯನ್ನು 2010ರಲ್ಲಿ ಬಂಧಿಸಲಾಗಿದ್ದು, ವಿಚಾರಣೆ ಇನ್ನೂ ನಡೆಯುತ್ತಿದೆ. ಸದ್ಯ ಮದನಿ ಗೃಹ ಬಂಧನದಲ್ಲಿದ್ದು, ಕೇರಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾ. ಖಾಟ್ಜು ವಿವರಿಸಿರುವುದನ್ನು ʼರೈಟರ್ಸ್ ಕೆಫೆಟೇರಿಯಾʼ ಎಂಬ ವೆಬ್‌ಸೈಟ್ ಪ್ರಕಟಿಸಿದೆ.
ಪ್ರಕರಣದ ಊರ್ಜಿತತ್ವಕ್ಕೆ ಹೋಗದೆ, ಮಾನವೀಯತೆಯ ಆಧಾರದಲ್ಲಿ ಮದನಿಗೆ ಕ್ಷಮಾಪಣೆ ನೀಡಲು ಸಂವಿಧಾನದ 161ನೇ ವಿಧಿಯಡಿ ತಮ್ಮ ಅಧಿಕಾರ ಬಳಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವಂತೆ ಕೆಳಗಿನ ಕಾರಣಗಳಿಗಾಗಿ ಕೋರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣದಲ್ಲಿ 9 ವರ್ಷ ಸೇರಿದಂತೆ ಒಟ್ಟು 22 ವರ್ಷಗಳನ್ನು ಮದನಿ ಈಗಾಗಲೇ ಜೈಲಿನಲ್ಲಿ ಕಳೆದಿದ್ದಾರೆ.
1992ರಲ್ಲಿ ಅವರು ಕಾಲು ಕಳೆದುಕೊಂಡಿದ್ದು, ಸದ್ಯ ಅಂಗವಿಕಲರಾಗಿದ್ದು, ವೀಲ್ ಚೇರ್‌ನಲ್ಲಿ ಮಾತ್ರ ಓಡಾಡುವ ಸ್ಥಿತಿಯಲ್ಲಿದ್ದಾರೆ.
ಎರಡೂ ಮೂತ್ರಪಿಂಡಗಳೂ ವಿಫಲವಾಗಿದ್ದು, ಡಯಾಲಿಸಿಸ್‌ಗೆ ಒಳಗಾಗಬೇಕಿದೆ.
ಭಾಗಶಃ ಅಂಧತ್ವಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ.
ಸಕ್ಕರೆ ಕಾಯಿಲೆಗೆ ಒಳಗಾಗಿದ್ದು, ಇದರಿಂದ ಹಲವು ಅಂಗಗಳಿಗೆ ಹಾನಿಯಾಗಿದೆ. ಭಾಗಶಃ ಅಂಧತ್ವಕ್ಕೆ ಇದುವೇ ಕಾರಣವಾಗಿರಬಹುದು.
ಮದನಿ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಹಾಸಿಗೆ ಹಿಡಿದಿದ್ದಾರೆ.
ಒಂದೊಮ್ಮೆ ಮದನಿಯನ್ನು ದೋಷಿ ಎಂದು ಘೋಷಿಸಿದರೂ ಈಗಾಗಲೇ ಅವರಿಗೆ ಸಾಕಷ್ಟು ಶಿಕ್ಷೆಯಾಗಿದೆ. ಈ ಸಂದರ್ಭದಲ್ಲಿ ವಿಲಿಯಂ ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಮರ್ಚೆಂಟ್ ಆಫ್ ವೆನಿಸ್‌ನಲ್ಲಿ ಪೋರ್ಷಿಯಾಳ ಸುಪ್ರಸಿದ್ಧ ಭಾಷಣದಲ್ಲಿ ನ್ಯಾಯವನ್ನು ಕರುಣೆಯಿಂದ ಹದಗೊಳಿಸಬೇಕು ಎಂದಿದ್ದನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ ಎಂದು ನ್ಯಾ. ಕಾಟ್ಜು ಹೇಳಿದ್ದಾರೆ.