Darshan Thoogudeepa and Pavithra Gowda  Image source: Instagram, Facebook
ಸುದ್ದಿಗಳು

ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಪಾಟೀ ಸವಾಲಿಗೆ ಅನುಮತಿಸಲು ನ್ಯಾಯಾಲಯ ನಕಾರ

ರತ್ನಪ್ರಭಾ ನೀಡಿದ್ದ ಹೇಳಿಕೆಯಲ್ಲಿ ಗೊಂದಲವಾಗಿರುವುದರಿಂದ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ಅನುಮತಿಸಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Nataraju V

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ತಾಯಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.

ಪ್ರಕರಣದ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಐ ಪಿ ನಾಯಕ್‌ ಅವರು ನಡೆಸಿದರು. ರತ್ನಪ್ರಭಾ ನೀಡಿದ್ದ ಹೇಳಿಕೆಯಲ್ಲಿ ಗೊಂದಲ ಇರುವುದರಿಂದ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ಅನುಮತಿಸಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಮಾಸಿಕ ತಿಥಿ ಕಾರ್ಯಕ್ಕೆ ಜಾಮೀನು ನಿರಾಕರಣೆ: ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್‌ ರಾವ್‌ ಅವರು ಮಾಸಿಕವಾಗಿ ತಂದೆಯ ತಿಥಿ ಕಾರ್ಯ ನಡೆಸಲು ಜಾಮೀನು ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದಲ್ಲಿ ಮೊದಲನೇ ಆರೋಪಿ ಪವಿತ್ರಾ ಗೌಡ ಹಾಗೂ ಲಕ್ಷ್ಮಣ್, ನಾಗರಾಜ್‌ಗೆ ವಾರಕ್ಕೊಮ್ಮೆ ಮನೆಯೂಟ ನೀಡುವಂತೆ ಮಾಡಿದ್ದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೋರಿರುವ ಮನವಿಯಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಪ್ರತಿವಾದಿಗಳನ್ನಾಗಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಅರ್ಜಿಗಳಲ್ಲಿ ಯಾರ ವಿರುದ್ಧ ಕ್ರಮ ಆಗಬೇಕು ಎಂದು ನಿರ್ದಿಷ್ಟ ವಾಗಿ ಉಲ್ಲೇಖಿಸಿ, ಅರ್ಜಿ ತಿದ್ದುಪಡಿ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.