ಗೌಪ್ಯ ವಿಚಾರಣೆಯಲ್ಲಿ ಸಾಕ್ಷ್ಯ ನುಡಿದ ರೇಣುಕಾಸ್ವಾಮಿ ಪೋಷಕರು; ಪವಿತ್ರಾ ಗೌಡ ಸೆಲ್‌ಗೆ ಟಿ ವಿ ಅಳವಡಿಸಲು ನಿರ್ದೇಶನ

ದರ್ಶನ್‌, ಪವಿತ್ರಾಗೌಡ ಸೇರಿ 7 ಮಂದಿ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫೆರೆನ್ಸ್ ವಿಚಾರಣೆಗೆ ಹಾಜರಾದರು. 17ನೇ ಆರೋಪಿ ನಿಖಿಲ್‌ ನಾರಾಯಣ ಹೊರತುಪಡಿಸಿ, ಜಾಮೀನು ಮೇಲಿರುವ ಉಳಿದ 9 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು.
Darshan Thoogudeepa and Pavithra GowdaImage
Darshan Thoogudeepa and Pavithra GowdaImage source: Instagram, Facebook
Published on

ನಟ ದರ್ಶನ್‌ ಮತ್ತು ಇತರೆ ಆರೋಪಿಗಳ ವಿರುದ್ಧದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ವಿಚಾರಣೆ ಬುಧವಾರದಿಂದ ಆರಂಭವಾಗಿದ್ದು, ಮೃತನ ತಂದೆ ಮತ್ತು ತಾಯಿ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ಗೌಪ್ಯ ವಿಚಾರಣೆಯಲ್ಲಿ ಸಾಕ್ಷ್ಯ ನುಡಿದರು.

ಬೆಂಗಳೂರಿನ 57ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಐ ಪಿ ನಾಯಕ್‌ ಅವರು ಪ್ರಕರಣ ಸಂಬಂಧ ಮುಖ್ಯ ವಿಚಾರಣೆ ಆರಂಭಿಸಿದ್ಧಾರೆ. ಬುಧವಾರ ಪ್ರಾಸಿಕ್ಯೂಷನ್‌ ಮೊದಲ ಸಾಕ್ಷಿಯಾಗಿ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮತ್ತು ಎರಡನೇ ಸಾಕ್ಷಿ ತಂದೆ ಕಾಶಿನಾಥಯ್ಯ ತಮ್ಮ ಸಾಕ್ಷ್ಯವನ್ನು ಸರ್ಕಾರಿ ವಿಶೇಷ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ದಾಖಲಿಸಿದರು.

Judge IP Naik
Judge IP Naik

ಇದೇ ವೇಳೆ ಪ್ರಕರಣದ ಮೊದಲ ಆರೋಪಿ, ನಟಿ ಪವಿತ್ರಾ ಗೌಡ ಪರ ವಕೀಲ ಬಾಲನ್‌ ಅವರು ರತ್ನಪ್ರಭ ಅವರನ್ನು ಪಾಟೀ ಸವಾಲಿಗೆ ಗುರಿಪಡಿಸಿದರು. ಈ ವೇಳೆ ಬಾಲನ್‌ ಕೇಳಿದ ಹಲವು ಪ್ರಶ್ನೆಗಳಿಗೆ ರತ್ನಪ್ರಭ ತಮಗಿದ್ದ ಮಾಹಿತಿಯನ್ನು ಆಧರಿಸಿ ಉತ್ತರಿಸಿದರು. ಕೆಲ ಪ್ರಶ್ನೆಗಳಿಗೆ ‘ಗೊತ್ತಿಲ್ಲ’ ಎಂದು ತಿಳಿಸಿದರು.

ಬಾಲನ್‌ ಅವರ ಪಾಟೀ ಸವಾಲು ಪ್ರಕ್ರಿಯೆ ಅಪೂರ್ಣಗೊಂಡ ಕಾರಣ ನ್ಯಾಯಾಲಯವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಗುರುವಾರವು ಬಾಲನ್‌ ಅವರು ರತ್ನಪ್ರಭ ಮತ್ತು ಕಾಶೀನಾಥಯ್ಯ ಅವರನ್ನು ಪಾಟೀ ಸವಾಲಿಗೆ ಗುರಿಪಡಿಸಲಿದ್ದಾರೆ. ಇದಾದ ನಂತರ ದರ್ಶನ್‌ ಸೇರಿ ಇತರ 15 ಆರೋಪಿಗಳು ಪರ ವಕೀಲರು ಈ ಇಬ್ಬರು ಸಾಕ್ಷಿಗಳ ಪಾಟೀ ಸವಾಲು ನಡೆಸಬಹುದು.

ಸ್ನೇಹಿತರೊಂದಿಗೆ ಊಟಕ್ಕೆ ಹೋಗುತ್ತೇನೆ ಎಂದ ಮಗ ಶವವಾದ

2024ರ ಜೂನ್‌ 8ರಂದು ಪುತ್ರ ರೇಣುಕಸ್ವಾಮಿ ಬೆಳಗ್ಗೆ ಫಾರ್ಮಸಿ ಕೆಲಸಕ್ಕೆ ಹೋಗಿದ್ದ. ಮಧ್ಯಾಹ್ನ ಕರೆ ಮಾಡಿ ಸ್ನೇಹಿತರ ಜತೆ ಊಟಕ್ಕೆ ಹೋಗುತ್ತೇನೆ; ಬರುವುದು ತಡವಾಗುತ್ತದೆ ಎಂದು ತಿಳಿಸಿದ್ದ. ಸಂಜೆ 7 ಗಂಟೆಯಾದರೂ ಮನೆಗೆ ಬರಲಿಲ್ಲ. ಆಗ ಕರೆ ಮಾಡಿದರೆ ಮಗನ ಮೊಬೈಲ್‌ ಸ್ವಿಚ್ಡ್‌ ಆಫ್ ಆಗಿತ್ತು. ನಾವು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ನಂತರ ಜೂನ್‌ 10ರಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಮಗೆ ಕರೆ ಮಾಡಿ, ನಿಮ್ಮ ಮಗನ ವಿಚಾರವಾಗಿ ಬೆಂಗಳೂರಿಗೆ ಬರಬೇಕು ಎಂದು ಹೇಳಿದರು. ಇದರಿಂದ ಜೂನ್‌ 11ರಂದು ಬೆಂಗಳೂರಿಗೆ ಬಂದೆವು. ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಪುತ್ರನ ಮೃತದೇಹ ತೋರಿಸಿ, ದರ್ಶನ್‌ ಮತ್ತು ತಂಡ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ಮಗನ ಮೃತದೇಹ ನೋಡಿದಾಗ ಎಲ್ಲೆಡೆ ಗಂಭೀರ ಗಾಯಗಳಿದ್ದವು. ಕೆಲವೆಡೆ ಸುಟ್ಟ ಗಾಯಗಳಿದ್ದವು. ಕೆಲ ದಿನಗಳ ಬಳಿಕ ಚಿತ್ರದುರ್ಗದ ಮನೆಗೆ ಬಂದ ಪೊಲೀಸರು, ರಾಘವೇಂದ್ರ ನಿಮ್ಮ ಮಗನ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರ ಕಳವು ಮಾಡಿದ್ದರು ಎಂದು ಹೇಳಿ, ಅದನ್ನು ಗುರುತಿಸಲು ತೋರಿಸಿದರು. ಉಂಗುರದಲ್ಲಿ ಆರ್‌ಎಸ್‌ (ರೇಣುಕಾಸ್ವಾಮಿ ಮತ್ತು ಪತ್ನಿ ಸಹನಾ) ಅಂತ ಇತ್ತು ಎಂದು ಹೇಳಿದರು. ಈ ಎಲ್ಲಾ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿತು.

ಶವದ ಮೇಲಿದ್ದ ಶರ್ಟ್‌ ಬೇರೆ

ಪಾಟೀ ಸವಾಲು ಪ್ರಕ್ರಿಯೆಯಲ್ಲಿ ಪವಿತ್ರಾ ಗೌಡ ಪರ ವಕೀಲ ಬಾಲನ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದ ರತ್ನಪ್ರಭ ಅವರು ಜೂನ್‌ 8ರಂದು ಮಧ್ಯಾಹ್ನ 2 ಗಂಟೆಗೆ ಪುತ್ರ ಕರೆ ಮಾಡಿದ್ದ. ಊಟಕ್ಕೆ ಹೊರಗಡೆ ಹೋಗುತ್ತೇನೆ ಎಂದು ಹೇಳಿದ್ದ. ಆದರೆ, ಎಲ್ಲಿಗೆ ಹೋಗುತ್ತೇನೆಂದು ಹೇಳಿರಲಿಲ್ಲ. ರಾತ್ರಿ 7 ಗಂಟೆ ಬಳಿಕ ಮಗನ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಮಗ ಎಲ್ಲಿ ಹೋಗಿದ್ದ ಎಂಬುದು ಗೊತ್ತಿರಲಿಲ್ಲ. ಆತ ಕೆಲಸ‌ ಮಾಡುತ್ತಿದ್ದ ಫಾರ್ಮಸಿಯಲ್ಲಿ ವಿಚಾರಿಸಿರಲಿಲ್ಲ. ರೇಣುಕಾಸ್ವಾಮಿ ಸ್ನೇಹಿತರೊಂದಿಗೆ ಬಾಲಾಜಿ ಬಾರ್‌ಗೆ ಊಟಕ್ಕೆ ಹೋಗಿಲ್ಲ. ಶವದ ಮೇಲಿದ್ದ ಟಿ ಶರ್ಟ್ ಗುರುತಿಸಿದ್ದೇನೆ. ಮಗ ಮನೆಯಿಂದ ಹೋಗುವಾಗ ಬೇರೆ ಶರ್ಟ್ ಹಾಕಿದ್ದ. ಚಿನ್ನದ ಸರ-ಉಂಗುರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಸೇರಿ 17 ಮಂದಿ ವಿರುದ್ಧ ಆರೋಪ ನಿಗದಿಗೊಳಿಸಿದ ಬೆಂಗಳೂರು ನ್ಯಾಯಾಲಯ

ಇದಕ್ಕೂ ಮುನ್ನ ದರ್ಶನ್‌, ಪವಿತ್ರಾಗೌಡ ಸೇರಿ 7 ಮಂದಿ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫೆರೆನ್ಸ್ ವಿಚಾರಣೆಗೆ ಹಾಜರಾದರು. 17ನೇ ಆರೋಪಿ ನಿಖಿಲ್‌ ನಾರಾಯಣ ಹೊರತುಪಡಿಸಿ, ಜಾಮೀನು ಮೇಲಿರುವ ಉಳಿದ 9 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಇದೇ ವೇಳೆ ಪವಿತ್ರಾಗೌಡ ಕೋರಿಗೆ ಮೇರೆಗೆ ಆಕೆಯ ಸೆಲ್‌ನಲ್ಲಿ ಟಿವಿ ಅಳವಡಿಸಬೇಕು. ಓದಲು ದಿನಪತ್ರಿಕೆ, ಗ್ರಂಥಾಲಯದ ಪುಸ್ತಕಗಳು ಲಭ್ಯವಿದ್ದರೆ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು. ಹಾಗೆಯೇ, ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು.

ಬುಧವಾರ ಮಧ್ಯಾಹ್ನ 12 ಗಂಟೆಗೆ ರತ್ನಪ್ರಭ ಮತ್ತು ಕಾಶೀನಾಥಯ್ಯ ಕೋರ್ಟ್‌ಗೆ ಹಾಜರಾದರು. ಮಧ್ಯಾಹ್ನ 12.30ರಿಂದ 2.30ವರೆಗೆ ಅವರು ಸಾಕ್ಷ್ಯ ಹೇಳಿಕೆ ದಾಖಲಿಸಿದರು. ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರು, ಆರೋಪಿಗಳ ಪರ ಒಂದಿಬ್ಬರು ವಕೀಲರನ್ನು ಮಾತ್ರ ಕೋರ್ಟ್‌ ಒಳಗೆ ಇರಲು ನ್ಯಾಯಾಲಯವು ಹೇಳಿತು. ಉಳಿದ ಎಲ್ಲರನ್ನು ಕೋರ್ಟ್‌ ಹಾಲ್‌ನಿಂದ ಹೊರಗಡೆ ಕಳುಹಿಸಿ, ಗೌಪ್ಯ ವಿಚಾರಣೆ (ಇನ್‌-ಕ್ಯಾಮರಾ ಪ್ರೋಸಿಡಿಂಗ್‌) ನಡೆಸಿತು. ಮಧ್ಯಾಹ್ನ 3.30ರಿಂದ ಸಂಜೆಯ 5ರವರೆಗೂ ರತ್ನಪ್ರಭ ಪಾಟಿ ಸವಾಲು ನಡೆಯಿತು. ಆಗ ಎಲ್ಲರಿಗೂ ಕೋರ್ಟ್‌ ಹಾಲ್‌ನಲ್ಲಿ ಪ್ರವೇಶ ಕಲ್ಪಿಸಲಾಯಿತು.

Kannada Bar & Bench
kannada.barandbench.com