Actor Darshan with his girlfriend Pavitra Gowda 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಬೆಂಗಳೂರು ಸತ್ರ ನ್ಯಾಯಾಲಯ

ಕಳೆದ ವರ್ಷ ಹೈಕೋರ್ಟ್‌ ಪವಿತ್ರಾ ಗೌಡ, ನಟ ದರ್ಶನ್‌ ಸೇರಿ ಏಳು ಮಂದಿಗೆ ಮಂಜೂರು ಮಾಡಿದ್ದ ಜಾಮೀನನ್ನು ಆಗಸ್ಟ್‌ 14ರಂದು ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು. ಹೀಗಾಗಿ, ಏಳು ಆರೋಪಿಗಳು ನ್ಯಾಯಾಲಯದ ಆದೇಶದ ಅನುಸಾರ ಜೈಲಿಗೆ ತೆರಳಿದ್ದಾರೆ.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾಗೆ (ಬಿಎನ್‌ಎಸ್‌ಎಸ್‌) ಬದಲಾಗಿ ಹಳೆಯ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿ ಆರೋಪ ಪಟ್ಟಿ ಪರಿಗಣಿಸಿರುವುದು ಮತ್ತು ಅದನ್ನು ಆಧರಿಸಿ ಸಂಜ್ಞೇ ಪರಿಗಣಿಸಿರುವುದು ಕಾನೂನುಬಾಹಿರವಾಗಿರುವುದರಿಂದ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಬೇಕು ಎಂದು ಮೊದಲನೇ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ಡಿಫಾಲ್ಟ್‌ ಜಾಮೀನು ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶರಾದ ಐ ಪಿ ನಾಯ್ಕ್‌ ಇಂದು ಪ್ರಕಟಿಸಿದರು.

ಸಿಆರ್‌ಪಿಸಿ ಸೆಕ್ಷನ್‌ 173ರ ಅಡಿ 2024ರ ಸೆಪ್ಟೆಂಬರ್‌ 5ರಂದು ಆರೋಪ ಪಟ್ಟಿ ಆಧರಿಸಿ ಸಂಜ್ಞೇ ಪರಿಗಣಿಸಿರುವುದು ಮತ್ತು ಐಪಿಸಿ ಸೆಕ್ಷನ್‌ ಅಡಿ ದಂಡನೀಯ ಅಪರಾಧಗಳು ಚಾಲ್ತಿಯಲ್ಲಿಲ್ಲವಾಗಿವೆ. ಸಿಆರ್‌ಪಿಸಿ ಸೆಕ್ಷನ್‌ 207ರ ಅಡಿ ಸಕ್ಷಮ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವುದು ಮತ್ತು ಸಿಆರ್‌ಪಿಸಿ ಸೆಕ್ಷನ್‌ 209ರಡಿ ಆರೋಪ ನಿಗದಿ ಆದೇಶವೂ ಅನೂರ್ಜಿತವಾಗುತ್ತದೆ. 2024ರ ಸೆಪ್ಟೆಂಬರ್‌ 30ರಂದು ರಿಮ್ಯಾಂಡ್‌ ಮಾಡಿರುವ ಆದೇಶವು ಸೂಕ್ತ ಕಾನೂನಿನ ಅನ್ವಯ ನಡೆದಿಲ್ಲ. ಹೀಗಾಗಿ, ಸೆಪ್ಟೆಂಬರ್‌ 30ರಿಂದ ಪವಿತ್ರಾ ಗೌಡ ರಿಮ್ಯಾಂಡ್‌ ಆದೇಶವು ಬಿಎನ್‌ಎಸ್‌ಎಸ್‌ ಅಡಿ ನಡೆದಿಲ್ಲವಾದ್ದರಿಂದ ಆಕೆ ಡಿಫಾಲ್ಟ್‌ ಜಾಮೀನಿಗೆ ಅರ್ಹರಾಗಿದ್ದಾರೆ ಎಂದು ವಾದಿಸಲಾಗಿತ್ತು.

ಕಳೆದ ವರ್ಷ ಕರ್ನಾಟಕ ಹೈಕೋರ್ಟ್‌ ಪವಿತ್ರಾ ಗೌಡ, ನಟ ದರ್ಶನ್‌ ಸೇರಿ ಏಳು ಮಂದಿಗೆ ಮಂಜೂರು ಮಾಡಿದ್ದ ಜಾಮೀನನ್ನು ಕಳೆದ ಆಗಸ್ಟ್‌ 14ರಂದು ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು. ಹೀಗಾಗಿ, ಏಳು ಆರೋಪಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಸಾರ ಜೈಲಿಗೆ ತೆರಳಿದ್ದಾರೆ.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು ಪವಿತ್ರ ಗೌಡ, ದರ್ಶನ್‌ ಅಲಿಯಾಸ್‌ ಡಿ ಬಾಸ್‌, ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌ ಅಲಿಯಾಸ್‌ ಜಗ್ಗ, ಅನುಕುಮಾರ್‌, ರವಿ ಶಂಕರ್‌ ಅಲಿಯಾಸ್‌ ರವಿ, ಧನರಾಜ್‌ ಡಿ ಅಲಿಯಾಸ್‌ ರಾಜು, ವಿನಯ್‌ ವಿ, ನಾಗರಾಜು, ಲಕ್ಷ್ಮಣ, ದೀಪಕ್‌, ಪ್ರದೂಷ್‌, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ, ನಿಖಿಲ್‌ ನಾಯಕ್‌ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್‌ ಪಿತೂರಿ), 364 (ಅಪಹರಣ), 355 (ಅಪಮಾನಿಸುವ ಉದ್ದೇಶದಿಂದ ಹಲ್ಲೆ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಾಗಿದೆ.