Jail 
ಸುದ್ದಿಗಳು

ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ: ಪತ್ನಿ ನಿಖಿತಾ, ಆಕೆಯ ತಾಯಿ, ಸಹೋದರನಿಗೆ ಜಾಮೀನು ನೀಡಿದ ಬೆಂಗಳೂರು ನ್ಯಾಯಾಲಯ

ವಿಸ್ತೃತ ವಾದ ಆಲಿಸಿ, ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Bar & Bench

ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆತನ ಪರಿತ್ಯಕ್ತ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ತಾಯಿ ಮತ್ತು ಸಹೋದರಿಗೆ ಬೆಂಗಳೂರಿನ ಮೆಯೋ ಹಾಲ್‌ನಲ್ಲಿರುವ ಸತ್ರ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.

ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ನಿಖಿತಾ ಸಹೋದರ ಅನುರಾಗ್‌ ಸಿಂಘಾನಿಯಾ ಅವರಿಗೆ ಬೆಂಗಳೂರಿನ ಮೆಯೋ ಹಾಲ್‌ನಲ್ಲಿರುವ 29ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಬಾಳಪ್ಪ ಅಪ್ಪಣ್ಣ ಜರಗು ಅವರು ಜಾಮೀನು ಮಂಜೂರು ಮಾಡಿದ್ದಾರೆ.

ವಿಸ್ತೃತ ವಾದ ಆಲಿಸಿ, ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅರ್ಜಿದಾರರ ಪರವಾಗಿ ವಕೀಲ ವಿ ಭರತ್‌ ಕುಮಾರ್‌ ವಾದಿಸಿದ್ದರು.

ಈಚೆಗೆ ಕರ್ನಾಟಕ ಹೈಕೋರ್ಟ್‌ ಜನವರಿ 4ರಂದೇ ನಿಖಿತಾ, ನಿಶಾ ಮತ್ತು ಅನುರಾಗ್‌ ಅವರ ಜಾಮೀನು ಅರ್ಜಿಯನ್ನು ನಿರ್ಧರಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

ಡಿಸೆಂಬರ್‌ 29ರಂದು 34 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ಅತುಲ್‌ ಅವರು ಸುದೀರ್ಘವಾದ ಮರಣ ಪತ್ರ ಹಾಗೂ ವಿಡಿಯೋ ಮಾಡಿ ಅದರಲ್ಲಿ ಪತ್ನಿ ನಿಖಿತಾ ಮತ್ತು ಆಕೆಯ ಕುಟುಂಬಸ್ಥರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ನಿಖಿತಾ ಅವರನ್ನು ಮಾರತ್‌ಹಳ್ಳಿ ಪೊಲೀಸರು ಹರಿಯಾಣದ ಗುರುಗ್ರಾಮದ ಪಿ ಜಿಯಲ್ಲಿ ಬಂಧಿಸಿದರೆ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್‌ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರಾಮೇಶ್ವರ ಹೋಟೆಲ್‌ ಬಳಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಡಿಸೆಂಬರ್‌ 16ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

ದೂರಿನಲ್ಲಿ ಏನಿದೆ?: ಅತುಲ್‌ ಸುಭಾಷ್‌ 2019ರಲ್ಲಿ ನಿಖಿತಾ ಸಿಂಘಾನಿಯಾ ಅವರನ್ನು ಮದುವೆಯಾಗಿದ್ದು, ಅವರಿಗೆ ಒಂದು ಗಂಡು ಮಗುವಿದೆ. ನಿಖಿತಾ ಅವರ ತಾಯಿ ನಿಶಾ, ಸಹೋದರ ಅನುರಾಗ್‌ ಮತ್ತು ಅವರ ಸಂಬಂಧಿ ಸುಶೀಲ್‌ ಸಿಂಘಾನಿಯಾ ಅವರು ಅಣ್ಣನಾದ ಅತುಲ್‌ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ಇವುಗಳ ಇತ್ಯರ್ಥಕ್ಕಾಗಿ 3 ಕೋಟಿ ರೂಪಾಯಿ ಹಣ ನೀಡಬೇಕು ಎಂದು ಅತುಲ್‌ ಸಹೋದರ ದೆಹಲಿಯ ನಿವಾಸಿ ಬಿಕಾಸ್‌ ಕುಮಾರ್‌ ಅವರು ಡಿಸೆಂಬರ್‌ 9ರಂದು ಮಾರತ್‌ಹಳ್ಳಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಣ್ಣ ತನ್ನ ಪುತ್ರನನ್ನು ಭೇಟಿ ಮಾಡಲು 30 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನ್ಯಾಯಾಲಯದ ಕಲಾಪದಲ್ಲಿ ಹಾಜರಾಗದ ಅತ್ತಿಗೆ ನಿಖಿತಾ ಮತ್ತು ಆಕೆಯ ಮನೆಯವರು ಅಣ್ಣನಿಗೆ 3 ಕೋಟಿ ರೂಪಾಯಿ ನೀಡಬೇಕು, ಇಲ್ಲದಿದ್ದರೆ ಬದುಕಬೇಡ ಆತ್ಮಹತ್ಯೆ ಮಾಡಿಕೋ ಎಂದು ಅಣಕಿಸಿದ್ದರು. ಇದರಿಂದ ಜರ್ಜರಿತನಾಗಿದ್ದ ಅಣ್ಣ ಅತುಲ್‌ ಮಾನಸಿಕ ಮತ್ತು ದೈಹಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದರು.

ಇದನ್ನು ಆಧರಿಸಿ ಮಾರತಹಳ್ಳಿ ಪೊಲೀಸ್‌ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 108 (ಆತ್ಮಹತ್ಯೆಗೆ ಪ್ರಚೋದನೆ), 3(5) (ಏಕ ಉದ್ದೇಶದಿಂದ ಅನೇಕ ಮಂದಿ ಕ್ರಿಮಿನಲ್‌ ಕೃತ್ಯದಲ್ಲಿ ತೊಡಗುವುದು) ಅಡಿ ನಿಖಿತಾ, ನಿಶಾ, ಅನುರಾಗ್‌ ಮತ್ತು ಸುಶೀಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.