ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ವಿನ್ಜೊ ಗೇಮ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಪಾವನ್ ನಂದಾಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಎಂ ಚಂದ್ರಶೇಖರ್ ರೆಡ್ಡಿ ಅವರು ಪಾವನ್ ನಂದಾಗೆ ಜಾಮೀನು ಮಂಜೂರು ಮಾಡಿದ್ದಾರೆ.
₹5 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ತಲಾ ₹2 ಲಕ್ಷ ಮೌಲ್ಯದ ಇಬ್ಬರ ಭದ್ರತೆ ಒದಗಿಸಬೇಕು. ಪಾಸ್‌ಪೋರ್ಟ್ ನ್ಯಾಯಾಲಯದ ವಶಕ್ಕೆ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು ಹಾಗೂ ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ನಂದಾ ಇಂಥದ್ದೇ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
2025ರ ಡಿಸೆಂಬರ್‌ನಲ್ಲಿ ವಿಶೇಷ ನ್ಯಾಯಾಲಯವು ಮತ್ತೊಬ್ಬ ಸಹ ಸಂಸ್ಥಾಪಕಿ ಸೌಮ್ಯಾ ಸಿಂಗ್ ರಾಥೋಡ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಪಾವನ್ ನಂದಾಗೆ ಜಾಮೀನು ನಿರಾಕರಿಸಿತ್ತು. ಈಗ ಪಾವನ್ ನಂದಾಗೆ ಜಾಮೀನು ಮಂಜೂರಾಗಿದೆ.
ಪ್ರಕರಣದ ಹಿನ್ನೆಲೆ: ಆಲ್ಗಾರಿದಮ್ ತಿರುಚಿ, ಡಿಜಿಟಲ್ ರೂಪದಲ್ಲಿ ಗ್ರಾಹಕರ ಹಣ ವಂಚನೆ ಮಾಡಿರುವ ಆರೋಪದ ಸಂಬಂಧ ಬೆಂಗಳೂರು (ಪಶ್ಚಿಮ ಸೆನ್ ಠಾಣೆ), ರಾಜಸ್ಥಾನ, ದೆಹಲಿ ಮತ್ತು ಗುರುಗ್ರಾಮಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಇದರ ಆಧಾರದಲ್ಲಿ 6.11.2025ರಂದು ಇ ಡಿಯು ಇಸಿಐಆರ್ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 18 ರಿಂದ 22ರವರೆಗೆ ದೆಹಲಿಯ ಎರಡು ವಿನ್ಜೊ ಕಚೇರಿ, ಸೌಮ್ಯ ಅವರ ನಿವಾಸ ಹಾಗೂ ಉದ್ಯೋಗಿಯಾಗಿರುವ ಧೀರಜ್ ಮನೆಯಲ್ಲಿ ಇ ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಇದರ ಬೆನ್ನಿಗೇ ನವೆಂಬರ್ 22ರಂದು ಸೌಮ್ಯ ಮತ್ತು ಪಾವನ್‌ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ನವೆಂಬರ್ 26ರಂದು ಅವರು ವಿಚಾರಣೆಗೆ ಹಾಜರಾದಾಗ ಬಂಧಿಸಲಾಗಿದೆ.
ವಿನ್ಜೊ ಅಪ್ಲಿಕೇಶನ್ ಮೂಲಕ ಮುಗ್ಧರನ್ನು ಆಟ ಆಡುವಂತೆ ಪ್ರೇರೇಪಿಸಿ, ಆನಂತರ ಸಿಸ್ಟಂ ಸಹಾಯದಿಂದ ಅವರನ್ನು ವಂಚಿಸುವ ಜಾಲ ಇದಾಗಿದೆ. 2024ರ ಮೇನಿಂದ 2025ರ ಆಗಸ್ಟ್ ನಡುವೆ 177 ಕೋಟಿ ರೂಪಾಯಿ ಅಪರಾಧದ ಗಳಿಕೆ ಪತ್ತೆಯಾಗಿದ್ದು, ಸಿಂಗಾಪುರ ಮತ್ತು ಅಮೆರಿಕಾದಲ್ಲಿರುವ ವಿನ್ಜೊ ಪಾಲುದಾರ ಕಂಪನಿಗಳಿಗೆ ಸುಮಾರು 400 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಇದುವರೆಗೆ ಒಟ್ಟಾರೆ 500 ಕೋಟಿ ಆಸ್ತಿ ಜಫ್ತಿ ಮಾಡಲಾಗಿದೆ. ಇದೊಂದು ದೊಡ್ಡ ಜಾಲ ಎಂದು ಇ ಡಿ ಆರೋಪಿಸಿದೆ.