ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿನ ವಿಡಿಯೋಗಳ ಮರು ಪ್ರಸಾರ, ಸಂಕಲನ ಅಥವಾ ಹಂಚಿಕೆ ಮಾಡದಂತೆ ಟಿವಿ5 ಕನ್ನಡ, ಎಚ್‌ಟಿ ಕನ್ನಡ, ಟಿವಿ ವಿಕ್ರಮ, ಸುದ್ದಿಮನೆ ಅಫಿಶಿಯಲ್, ಫ್ಯಾನ್ಸ್ ಟ್ರೋಲ್ ಸೇರಿ ಒಂಭತ್ತು ಪ್ರತಿವಾದಿಗಳ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ತಾತ್ಕಾಲಿಕ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.
ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿರುವ ಹಿರಿಯ ವಕೀಲ ಎಸ್ ಬಸವರಾಜು ಅವರು ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆ ನಡೆಸಿರುವ 45ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾರಾಯಣ ಭಟ್ ಅವರು ಈ ಆದೇಶ ಮಾಡಿದ್ದಾರೆ.
ಪ್ರತಿವಾದಿಗಳು, ಅವರ ಏಜೆಂಟರು, ಸೇವಕರು ಅಥವಾ ಅವರ ಸಂಬಂಧಿತರು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನಲ್‌ನ ವಿಡಿಯೋಗಳ ಮರು ಪ್ರಸಾರ, ಸಂಕಲನ ಅಥವಾ ಹಂಚಿಕೆ ಮಾಡದಂತೆ ಮುಂದಿನ ವಿಚಾರಣೆವರೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.
ಪ್ರತಿನಿಧಿಯ ಸಾಮರ್ಥ್ಯದಲ್ಲಿ ಪ್ರತಿವಾದಿಗಳ ವಿರುದ್ಧ ದಾವೆ ಹೂಡಲು ಫಿರ್ಯಾದಿಗೆ ಅನುಮತಿಸಲಾಗಿದೆ. ಪ್ರತಿನಿಧಿಯ ಸಾಮರ್ಥ್ಯದ ಮೇಲೆ ದಾವೆ ಹೂಡಲಾಗುತ್ತಿದೆ ಎಂಬ ವಿಚಾರವನ್ನು ಹೆಚ್ಚು ಪ್ರಸರಣ ಹೊಂದಿರುವ ಎರಡು ಪತ್ರಿಕೆಗಳಲ್ಲಿ ಫಿರ್ಯಾದಿಯು ಸಾರ್ವಜನಿಕ ಪ್ರಕಟಣೆ ನೀಡುವ ಮೂಲಕ ಇಚ್ಛಿಸುವವರು ಪ್ರಕ್ರಿಯೆಯಲ್ಲಿ ಬಾಗವಹಿಸಲು ಆಹ್ವಾನಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಲಾಗಿದೆ.
ಫಿರ್ಯಾದಿ ಎಸ್ ಬಸವರಾಜ್ ಪರವಾಗಿ ವಕೀಲರಾದ ಎ ಆರ್ ಗೌತಮ್ ಮತ್ತು ಭಾರ್ಗವಿ ಎಫ್. ನವನಿ ವಾದಿಸಿದ್ದರು.
ಯಾರೆಲ್ಲಾ ಪ್ರತಿವಾದಿಗಳು: ಯೂಟ್ಯೂಬ್, ಗೂಗಲ್ ಎಎಲ್‌ಸಿ ಇಂಡಿಯಾ, ಟಿ ವಿ ವಿಕ್ರಮ, ಸುದ್ದಿಮನೆ ಅಫಿಶಿಯಲ್, ಎಚ್‌ಟಿ ಕನ್ನಡ, ಫ್ಯಾನ್ಸ್ ಟ್ರೋಲ್, ಟಿವಿ5 ಕನ್ನಡ, ನ್ಯಾಚುರಲ್ ಜಸ್ಟೀಸ್, ಹರ್ಷತ್ ಟಾಕೀಸ್, ರೈಟ್ ನ್ಯೂಸ್, ಲರ್ನ್ ಜಸ್ಟೀಸ್, ವಿದ್ವತ್ ಭಾರತ್, ಅವನಿಯಾನ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಪ್ರತಿವಾದಿಗಳಾದ ಟಿ ವಿ ವಿಕ್ರಮ, ಸುದ್ದಿಮನೆ ಅಫಿಶಿಯಲ್, ಎಚ್‌ಟಿ ಕನ್ನಡ, ಫ್ಯಾನ್ಸ್ ಟ್ರೋಲ್, ಟಿವಿ5 ಕನ್ನಡ ಯೂಟ್ಯೂಬ್ ಚಾನಲ್‌ಗಳು ಕಾನೂನುಬಾಹಿರವಾಗಿ ಹೈಕೋರ್ಟ್ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೊಗಳನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ಸಣ್ಣ ವಿಡಿಯೊ ತುಣುಕುಗಳನ್ನಾಗಿ ಸಂಕಲನ ಮಾಡಿ, ದುರುದ್ದೇಶಪೂರಿತ ತಲೆಬರಹ ನೀಡಿ ಅಲ್ಲಿನ ಆಶಯವನ್ನು ತಿರುಚಿದ್ದಾರೆ. ಟಿ ವಿ ವಿಕ್ರಮ, ಸುದ್ದಿಮನೆ ಅಫಿಶಿಯಲ್, ಎಚ್‌ಟಿ ಕನ್ನಡ, ಫ್ಯಾನ್ಸ್ ಟ್ರೋಲ್, ಟಿವಿ5 ಕನ್ನಡ ಚಾನಲ್‌ಗಳು ಹೈಕೋರ್ಟ್ ವಿಡಿಯೊಗಳನ್ನು ಮರು ಪ್ರಸಾರ, ಸಂಕಲನ ಅಥವಾ ಹಂಚಿಕೆ ಮಾಡುತ್ತಿದ್ದಾರೆ. ಈ ಮೂಲಕ ನ್ಯಾಯಾಲಯದ ಕಲಾಪದ ಅಸಲಿ ಉದ್ದೇಶವನ್ನೇ ಹಾಳು ಮಾಡುವ ಮೂಲಕ ವೀಕ್ಷಕರನ್ನು ದಾರಿ ತಪ್ಪಿಸುತ್ತಿದ್ದಾರೆ.
ಪ್ರತಿವಾದಿಗಳ ಈ ಕ್ರಮದಿಂದ ನ್ಯಾಯಾಲಯದ ಕಲಾಪದ ಕುರಿತು ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ನ್ಯಾಯಮೂರ್ತಿಗಳು, ವಕೀಲರು ಮತ್ತು ದಾವೆಯಲ್ಲಿನ ಪಕ್ಷಕಾರರನ್ನು ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ನ್ಯಾಯಿಕ ಪ್ರಕ್ರಿಯೆಯ ಪ್ರಾಮಾಣಿಕತೆಗೆ ಧಕ್ಕೆಯಾಗುತ್ತಿದೆ. ಪ್ರತಿವಾದಿಗಳು ಅಪ್‌ಲೋಡ್ ಮಾಡಿರುವ ಸಂಕಲಿತ ವಿಡಿಯೊಗಳಿಗೆ ಬಂದಿರುವ ಆಕ್ಷೇಪಾರ್ಹವಾದ ಅಭಿಪ್ರಾಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಹೈಕೋರ್ಟ್ ವಿಡಿಯೊಗಳನ್ನು ತಪ್ಪು ಮಾಹಿತಿಯ ಮೂಲಕ ಪ್ರಸಾರ ಮಾಡಿ ಪ್ರತಿವಾದಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವಾದಿ ಯೂಟ್ಯೂಬ್ ಚಾನಲ್‌ಗಳ ವ್ಯಾಪ್ತಿ ವಿಸ್ತಾರವಾಗಿದ್ದು, ತಪ್ಪು ಸಂಕಥನ (ನರೇಟಿವ್) ಹಂಚಿಕೆ ಕಾರಣವಾಗುತ್ತಿದೆ. ಇದರಿಂದ ನ್ಯಾಯಮೂರ್ತಿಗಳು, ವಕೀಲರು ಮತ್ತು ದಾವೆಯಲ್ಲಿನ ಪಕ್ಷಕಾರರ ಘನತೆಗೆ ಭಾರಿ ಹಾನಿಯಾಗುತ್ತಿದೆ. ಅನಗತ್ಯ ಟ್ರೋಲ್ ಮತ್ತು ಸಾರ್ವಜನಿಕ ಟೀಕೆ ವ್ಯಕ್ತವಾಗುತ್ತಿದೆ.
ನ್ಯಾಯಾಲಯದ ಪ್ರಕ್ರಿಯೆಯ ಕುರಿತಾದ ತಪ್ಪು ಮಾಹಿತಿ ರವಾನೆಯು ನ್ಯಾಯಾಂಗ ಪ್ರಕ್ರಿಯೆ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಹಾನಿ ಉಂಟು ಮಾಡಿದೆ. ಅನಧಿಕೃತವಾದ ಈ ಕೃತ್ಯದಿಂದ ತಪ್ಪು ಮಾಹಿತಿ ರವಾನೆ ಮತ್ತು ಆರ್ಥಿಕ ಲಾಭವಾಗುತ್ತಿದ್ದು, ಹೈಕೋರ್ಟ್‌ನ ಸಾಂಸ್ಥಿಕ ತತ್ವಗಳಾದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಗಂಭೀರ ಬೆದರಿಕೆ ಉಂಟು ಮಾಡಿದೆ.
ಹೈಕೋರ್ಟ್‌ನ ವಿಶೇಷ ಹಕ್ಕನ್ನು ಪ್ರತಿವಾದಿಗಳ ಉಲ್ಲಂಘಿಸಿದ್ದು, ಅವರ ಕೃತ್ಯವು ಹಕ್ಕುಸ್ವಾಮ್ಯ ಉಲ್ಲಂಘನೆ ಕಾಯಿದೆ ಅನ್ವಯ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದ್ದು, ಲೈವ್ ಸ್ಟ್ರೀಮಿಂಗ್ ಅಂಡ್ ರೆಕಾರ್ಡಿಂಗ್ ಕೋರ್ಟ್ ಪ್ರೊಸೀಡಿಂಗ್ಸ್ ನಿಯಮ 9ರ ಉಲ್ಲಂಘನೆಯಾಗಿದೆ.
ನ್ಯಾಯಾಲಯ ಕಲಾಪದ ನಿರ್ದಿಷ್ಟ ಭಾಗವನ್ನು ಕತ್ತರಿಸಿ ಬಿತ್ತಿರಿಸುವುದು ವ್ಯಕ್ತಿಗತ ಸಮಸ್ಯೆಗೆ ಕಾರಣವಾಗಲಿದ್ದು, ವಿಶೇಷವಾಗಿ ಸಂತ್ರಸ್ತರು ಅಥವಾ ಸಾಕ್ಷ್ಯಗಳಿಗೆ ತೊಂದರೆ ಉಂಟು ಮಾಡಲಿದೆ.
ಪ್ರತಿವಾದಿಗಳು ಕಲಾಪದ ಪ್ರಚೋದನೆ/ರಂಜನೆಯ ಕೃತ್ಯದಲ್ಲಿ ತೊಡಗಿರುವುದರಿಂದ ನ್ಯಾಯಯುತ ವಿಚಾರಣೆಗೆ ಮಾರಕವಾಗಬಹುದು. ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಬಿತ್ತರಿಸುವಾಗ ಪ್ರತಿವಾದಿಗಳು ಸೂಕ್ಷ್ಮ ವಿಚಾರ ಅಥವಾ ಚಿತ್ರಗಳನ್ನು ನಿರ್ಬಂಧಿಸುವ ಗೋಜಿಗೂ ಹೋಗಿಲ್ಲ. ಇದು ವ್ಯಕ್ತಿಯ ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ.
ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ಕತ್ತರಿಸಿ ಹಾಕುವುದರಿಂದ ರಂಜಕತೆ ಅಥವಾ ಅನಗತ್ಯ ವಿಚಾರಕ್ಕೆ ಆದ್ಯತೆಯಾಗಲಿದ್ದು, ಇದು ನ್ಯಾಯಾಲಯದ ಘನತೆಗೆ ಹಾನಿ ಮಾಡುತ್ತದೆ ಎಂದು ಆಕ್ಷೇಪಿಸಲಾಗಿದೆ.
ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್ ತಮ್ಮ ವೇದಿಕೆಯಲ್ಲಿ ಬಳಸಿರುವ ಹೈಕೋರ್ಟ್ ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ತಕ್ಷಣ ತೆಗೆದು ಹಾಕಬೇಕು ಮತ್ತು ಹೈಕೋರ್ಟ್ ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ಬಳಸದಂತೆ ಈಚೆಗೆ ಹೈಕೋರ್ಟ್ ನಿರ್ದೇಶಿಸಿತ್ತು.