Darshan and Pavitra Gowda 
ಸುದ್ದಿಗಳು

ದರ್ಶನ್‌, ಪವಿತ್ರಾ ಗೌಡ ಸೇರಿ ಐವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಬಂಧಿತ ಐವರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನ್ಯಾಯಾಧೀಶರಾದ ಈರಣ್ಣ ಪವಡಿ ನಾಯ್ಕ್‌ ಅವರ ನಿವಾಸದಲ್ಲಿ ಸಂಜೆ ಹಾಜರುಪಡಿಸಲಾಯಿತು.

Bar & Bench

ಸುಪ್ರೀಂ ಕೋರ್ಟ್‌ ಜಾಮೀನು ರದ್ದುಪಡಿಸಿದ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್‌, ಪವಿತ್ರಾಗೌಡ, ನಾಗರಾಜು, ಲಕ್ಷ್ಮಣ್‌ ಮತ್ತು ಪ್ರದೋಶ್‌ ಅವರನ್ನು ವಿಚಾರಣಾ ನ್ಯಾಯಾಲಯದ ನಿರ್ದೇಶನದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಬಂಧಿತ ಐವರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲದಲ್ಲಿರುವ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನ್ಯಾಯಾಧೀಶರಾದ ಈರಣ್ಣ ಪವಡಿ ನಾಯ್ಕ್‌ ಅವರ ನಿವಾಸದಲ್ಲಿ ಸಂಜೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಎಲ್ಲಾ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು.

2024ರ ಡಿಸೆಂಬರ್‌ 13ರಂದು ಹೈಕೋರ್ಟ್‌ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್‌ ಮಹದೇವನ್‌ ಅವರ ವಿಭಾಗೀಯ ಪೀಠ ಬದಿಗೆ ಸರಿಸಿತ್ತು.

ಈ ಹಿನ್ನೆಲೆಯಲ್ಲಿ ಎರಡನೇ ಆರೋಪಿ ದರ್ಶನ್‌, ಮೊದಲ ಆರೋಪಿ ಪವಿತ್ರಾ ಗೌಡ, 7ನೇ ಆರೋಪಿ ಅನುಕುಮಾರ್‌, 8ನೇ ಆರೋಪಿ ಜಗದೀಶ್‌, 11ನೇ ಆರೋಪಿ ನಾಗರಾಜು, 12ನೇ ಆರೋಪಿ ಲಕ್ಷ್ಮಣ್‌, 14ನೇ ಆರೋಪಿ ಪ್ರದೋಶ್‌ ರಾವ್‌ ಅವರಿಗೆ ಜಾಮೀನು ರದ್ದುಪಡಿಸಲಾಗಿತ್ತು.