
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸಹಿತ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಇದೇ ವೇಳೆ ಹೈಕೋರ್ಟ್‌ನ ಜಾಮೀನು ಮಂಜೂರು ಆದೇಶದಲ್ಲಿನ ಹಲವು ಹುಳುಕುಗಳನ್ನು ಎತ್ತಿ ತೋರಿದೆ.
ತೀರ್ಪು ಪ್ರಕಟಿಸಿದ ನ್ಯಾ. ಪಾರ್ದಿವಾಲಾ ಮತ್ತು ನ್ಯಾ. ಆರ್ ಮಹದೇವನ್ ಅವರಿದ್ದ ಪೀಠವು, ತನ್ನ ಆದೇಶದ ವೇಳೆ ಜಾಮೀನು ಮಂಜೂರು ಮತ್ತು ರದ್ದತಿಗೆ ಸಂಬಂಧಿಸಿದ ಎಲ್ಲಾ ವಾದವನ್ನು ನಾವು ಪರಿಗಣಿಸಿದ್ದೇವೆ. ಹೈಕೋರ್ಟ್‌ನ ಆದೇಶವು ವಿಕ್ಷಿಪ್ತ ದೋಷಗಳಿಂದ ಕೂಡಿದೆ ಎಂದಿತು.
ಆದೇಶವನ್ನು ಓದಿದ ನ್ಯಾ. ಮಹದೇವನ್ ಅವರು, "ಹೈಕೋರ್ಟ್‌ನ ಆದೇಶವು ಗಂಭೀರ ವೈರುಧ್ಯಗಳಿಂದ ಕೂಡಿದೆ. ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ವಿಶೇಷ ಅಥವಾ ಸಕಾರಣಗಳನ್ನು ನೀಡಲಾಗಿಲ್ಲ. ನ್ಯಾಯಾಲಯವು ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನು ಕೈಬಿಟ್ಟಿದೆ. ಹೈಕೋರ್ಟ್ ಜಾಮೀನು ನೀಡುವಾಗ ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ. ಹೇಳಿಕೆಯಲ್ಲಿನ ವೈರುಧ್ಯ, ವಿಳಂಬ ಮುಂತಾದ ವಿಚಾರಣಾ ನ್ಯಾಯಾಲಯವು ಪಾಟೀ ಸವಾಲಿನ ಸಂದರ್ಭದಲ್ಲಿ ನಿರ್ಧರಿಸಬೇಕಿರುವ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿದೆ. ಸಾಕ್ಷಿಗಳ ಪ್ರಾಮಾಣಿಕತೆ ಮತ್ತು ನಂಬಲರ್ಹತೆಯನ್ನು ನಿರ್ಧರಿಸಬೇಕಿರುವುದು ವಿಚಾರಣಾ ನ್ಯಾಯಾಲಯ ಮಾತ್ರ ಎಂದು ನ್ಯಾಯಾಲಯ ಹೇಳಿದೆ.
ಇಂಥ ಗಂಭೀರವಾದ ಪ್ರಕರಣದ ಸ್ವರೂಪ, ಗಹನತೆ ಮತ್ತು ಆರೋಪಿಗಳ ಪಾತ್ರವನ್ನು ಪರಿಗಣಿಸದೇ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವುದು ಅನಗತ್ಯವಾಗಿ ವ್ಯಾಪ್ತಿ ಮೀರಿದ ಚಟುವಟಿಕೆಯಾಗಿದೆ ಎಂದೂ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಸಾಕ್ಷಿಗಳ ವ್ಯಾಖ್ಯಾನ, ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಸಾಂದರ್ಭಿಕ ಸಾಕ್ಷಿಗಳನ್ನು ಪರಿಗಣಿಸಿದರೆ ಜಾಮೀನು ರದ್ದುಪಡಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಆಕ್ಷೇಪಾರ್ಹ ಆದೇಶದ ಮೂಲಕ ಕಲ್ಪಿಸಿರುವ ಸ್ವಾತಂತ್ರ್ಯವು ನ್ಯಾಯದಾನಕ್ಕೆ ನೈಜ ಮತ್ತು ಪ್ರಬಲವಾದ ಬೆದರಿಕೆಯೊಡ್ಡುತ್ತದೆ. ಇದು ವಿಚಾರಣಾ ಪ್ರಕ್ರಿಯೆಯನ್ನು ದಾರಿತಪ್ಪಿಸುತ್ತದೆ. ಈ ನೆಲೆಯಲ್ಲಿ ಹಾಲಿ ಪ್ರಕರಣದಲ್ಲಿ ಸಿಆರ್‌ಪಿಸಿ 439 (1) ಅಡಿ ಲಭ್ಯವಾಗಿರುವ ವ್ಯಾಪ್ತಿಯ ಹಕ್ಕನ್ನು ಚಲಾಯಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ಕಾನೂನಿನ ಅಡಿ ಸ್ಥಾಪಿತವಾದ ಪ್ರಜಾಪ್ರಭುತ್ವದಲ್ಲಿ ಯಾವುದೇ ವ್ಯಕ್ತಿಯು ತನ್ನ ಸಾಮಾಜಿಕ ಸ್ಥಾನಮಾನದ ಪ್ರಭಾವ, ಕಾನೂನು ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು. ಸಂವಿಧಾನದ 14ನೇ ವಿಧಿಯು ಕಾನೂನಿನ ಅಡಿ ಎಲ್ಲರೂ ಸಮಾನರು ಎಂದು ಖಾತರಿಪಡಿಸಿದ್ದು, ಸ್ವೇಚ್ಛೆಯನ್ನು ನಿಷೇಧಿಸುತ್ತದೆ. ಯಾವುದೇ ವ್ಯಕ್ತಿಯು ತನ್ನ ಜನಪ್ರಿಯತೆ, ಅಧಿಕಾರ, ವಿಶೇಷ ಸ್ಥಾನಮಾನಗಳ ಹೊರತಾಗಿ ಕಾನೂನಿಗೆ ಒಳಪಟ್ಟಿರುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ಎಲ್ಲಾ ಮೇಲ್ಮನವಿಗಳನ್ನು ಪುರಸ್ಕರಿಸಲಾಗಿದ್ದು, 13.12.2024ರಂದು ಹೈಕೋರ್ಟ್ ಮಾಡಿರುವ ಆದೇಶವನ್ನು ಬದಿಗೆ ಸರಿಲಾಗಿದೆ. ಆದ್ದರಿಂದ, ಆರೋಪಿಗಳಿಗೆ ಮಂಜೂರು ಮಾಡಿರುವ ಜಾಮೀನು ಬದಿಗೆ ಸರಿಸಲಾಗಿದೆ ಎಂದು ಪೀಠವು ಆದೇಶಿಸಿತು.
ಮುಂದುವರೆದು, "ಸಕ್ಷಮ ಪ್ರಾಧಿಕಾರಿಗಳು ಆರೋಪಿಗಳನ್ನು ತಕ್ಷಣ ವಶಕ್ಕೆ ಪಡೆಯಬೇಕು. ತುರ್ತಾಗಿ ವಿಚಾರಣೆ ನಡೆಸಿ, ಮೆರಿಟ್ ಮೇಲೆ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು. ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಜಾಮೀನಿಗೆ ಸೀಮಿತವಾಗಿದ್ದು, ಇದು ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಪ್ರಭಾವಿಸಬಾರದು" ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.
ಆದೇಶದ ನಂತರ ಅದಕ್ಕೆ ಪೂರಕವಾಗಿ ನ್ಯಾ. ಪಾರ್ದಿವಾಲಾ ಅವರು, "ನನ್ನ ಗೌರವಾನ್ವಿತ ಸಹೋದರ ನ್ಯಾಯಮೂರ್ತಿ ಆರ್ ಮಹಾದೇವನ್ ಅವರು ಪ್ರೌಢಿಮೆಯಿಂದ ಕೂಡಿರುವ ತೀರ್ಪು ನೀಡಿದ್ದು, ಇದು ಅಮೋಘವಾದದ್ದಾಗಿದೆ. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಹಂತದಲ್ಲಿ ಯಾವುದೇ ಬೆಲೆ ತೆತ್ತಾದರೂ ಕಾನೂನಾತ್ಮ ಆಡಳಿತವನ್ನು ಎತ್ತಿಹಿಡಿಯಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮಿಗಿಲಲ್ಲ ಅಥವಾ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಾತ್ಮಕ ಆಡಳಿತವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ" ಎಂದು ಹೇಳಿದರು.
ಜೈಲಿನಲ್ಲಿ ಆರೋಪಿಗಳಿಗೆ ವಿಶೇಷ ಅಥವಾ ರಾಜಾತಿಥ್ಯ ನೀಡಲಾಗಿದ್ದು, ಅದಕ್ಕಾಗಿ ಜೈಲು ಮೇಲ್ವಿಚಾರಕರು ಸೇರಿ ಎಲ್ಲರನ್ನೂ ಅಮಾನತು ಮಾಡಲಾಗಿದೆ ಎಂಬ ವಿಚಾರವನ್ನು ನಮಗೆ ತಿಳಿಸಲಾಗಿದೆ ಎಂದು ನ್ಯಾ. ಪಾರ್ದಿವಾಲಾ ನುಡಿದರು.
ಆನಂತರ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರನ್ನು ಕುರಿತು. ನ್ಯಾ. ಪಾರ್ದಿವಾಲಾ ಅವರು “ನಾಳೆ ಯಾವುದಾದರೂ ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟು ಸೇದುತ್ತಾ, ಮಧ್ಯ ಸೇವನೆ ಮಾಡುತ್ತಾ ಕುಳಿತರೆ ನಾವು ನಿಮ್ಮನ್ನು ಮೊದಲು ಈ ನ್ಯಾಯಾಲಯಕ್ಕೆ ಕರೆಯಬೇಕಾಗುತ್ತದೆ” ಎಂದರು.
ಇದಕ್ಕೆ ಲೂಥ್ರಾ ಅವರು “ಪೂರಕ ತೀರ್ಪಿನಲ್ಲಿ ನೀವು ಪ್ರಸ್ತಾಪಿಸಿರುವ ವಿಚಾರಗಳು ದೇಶಾದ್ಯಂತ ಪರಿಣಾಮ ಬೀರಲಿದ್ದು, ಈ ತೀರ್ಪನ್ನು ದೇಶದ ಎಲ್ಲಾ ಜೈಲುಗಳಿಗೆ ಕಳುಹಿಸಿಕೊಡಬೇಕಿದೆ. ಗಂಭೀರ ವಿಚಾರ ಇದಾಗಿದೆ” ಎಂದರು.
ಅದಕ್ಕೆ ಪೀಠವು "ಆಕ್ಷೇಪಾರ್ಹವಾದ (ಜೈಲು ಆತಿಥ್ಯದ) ಫೋಟೊ, ವಿಡಿಯೋಗಳನ್ನು ನಾವು ನೋಡಿದರೆ ನಿಮಗೆ ಮೊದಲು ಸಮನ್ಸ್ ನೀಡಲಾಗುತ್ತದೆ ” ಎಂದರು. ಇದಕ್ಕೆ ಲೂಥ್ರಾ ಅವರು “ಈ ಸಂಬಂಧ (ಜೈಲುಗಳಲ್ಲಿನ ನಿಯಮ ಉಲ್ಲಂಘನೆ) ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿ, ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ರವಾನಿಸಲಾಗುವುದು” ಎಂದರು.