Darshan Twitter
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ: ಸಾಕ್ಷ್ಯನಾಶಕ್ಕೆ ಬಳಕೆಯಾಗಿದ್ದ ₹84 ಲಕ್ಷದ ಮೂಲ ಪತ್ತೆಗೆ ಮುಂದಾದ ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ಅವರು ವಿಚಾರಣೆ ನಡೆಸಿದರು.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲು ಬಳಕೆ ಮಾಡಲಾಗಿದೆ ಎನ್ನಲಾದ ₹84 ಲಕ್ಷದ ಮೂಲ ಪತ್ತೆ ಹಚ್ಚಲು ಮುಂದಾಗಿರುವ ಆದಾಯ ತೆರಿಗೆ (ಐಟಿ) ಇಲಾಖೆಯು ಹಣವನ್ನು ತನ್ನ ವಶಕ್ಕೆ ನೀಡಬೇಕು ಹಾಗೂ ಹಣದ ಮೂಲದ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ಅವರು ವಿಚಾರಣೆ ನಡೆಸಿದರು.

ಅರ್ಜಿಗೆ ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕಾಮಾಕ್ಷಿ ಪಾಳ್ಯ ಠಾಣೆಯ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಅರ್ಜಿ ಸಂಬಂಧ ಮಂಗಳವಾರ ಆದೇಶ ಮಾಡುವುದಾಗಿ ನ್ಯಾಯಾಲಯ ತಿಳಿಸಿದೆ. ಇದರಿಂದ ನಟ ದರ್ಶನ್‌ ಅವರು ಮತ್ತೊಂದು ರೀತಿಯ ಕಾನೂನು ಹೋರಾಟಕ್ಕೆ ಅಣಿಯಾಗಬೇಕಿದೆ.

ರೇಣುಕಾಸ್ವಾಮಿಯ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟ ದರ್ಶನ್‌ ಅವರು ಇತರೆ ಆರೋಪಿಗಳಿಗೆ ₹30 ಲಕ್ಷ ರೂಪಾಯಿ ಹಣ ನೀಡಿದ್ದರು. ಈ ಹಣವು ಆರೋಪಿ ಪ್ರದೋಷ್‌ ಮನೆಯಿಂದ ಕಾಮಾಕ್ಷಿಪಾಳ್ಯ ಠಾಣಾ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದರು. ನಂತರ ಪ್ರಕರಣದಲ್ಲಿ ದರ್ಶನ್ ಪಾತ್ರ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರ ಮನೆಯನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆ ₹40 ಲಕ್ಷ ಹಣ ದೊರೆತಿತ್ತು. ಆರೋಪಿ ಕೇಶವಮೂರ್ತಿ ಮನೆಯಲ್ಲಿ 5, ಅನುಕುಮಾರ್‌ ಮನೆಯಲ್ಲಿ ₹1.5 ಲಕ್ಷ ಹಣ ಸೇರಿದಂತೆ ಒಟ್ಟು ₹84 ಲಕ್ಷ ಹಣವನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದರು.

ಮಾಜಿ ಉಪ ಮೇಯರ್‌ ಮೋಹನ್‌ ರಾಜ್‌ ಅವರು ದರ್ಶನ್‌ ಅವರಿಗೆ ಸಾಲ ನೀಡಿದ್ದರು ಎಂದು ತನಿಖೆ ವೇಳೆ ಕಂಡುಬಂದಿತ್ತು. ಈ ಹಣವು ಸಿನಿಮಾದಲ್ಲಿ ನಟಿಸಿದ ಕಾರಣ ನಿರ್ಮಾಪಕರು ನೀಡಿದ್ದರು ಎಂದು ದರ್ಶನ್‌ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದರು. ಇದೀಗ ಈ ₹84 ಲಕ್ಷ ಹಣಕ್ಕೆ ಲೆಕ್ಕವಿಲ್ಲ ಎಂದು ಭಾವಿಸಿರುವ ಐಟಿ ಇಲಾಖೆ, ಹಣದ ಮೂಲ ಪತ್ತೆ ಮಾಡಲು ನಿರ್ಧರಿಸಿದೆ. ಆ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದೆ.