Actor Sudeep Facebook
ಸುದ್ದಿಗಳು

ನಿರ್ಮಾಪಕರ ವಿರುದ್ಧದ ನಟ ಸುದೀಪ್‌ ಖಾಸಗಿ ದೂರು ವಿಚಾರಣೆಗೆ ಪರಿಗಣಿಸಿದ ನ್ಯಾಯಾಲಯ; ಆ.7ಕ್ಕೆ ಸ್ವಯಂ ಹೇಳಿಕೆ ದಾಖಲು

ಆರೋಪಿಗಳಾಗಿರುವ ಎಂ ಎನ್‌ ಕುಮಾರ್‌ ಮತ್ತು ಎಂ ಎನ್‌ ಸುರೇಶ್‌ ಅವರು ಮಾನಹಾನಿ ಹೇಳಿಕೆ ಮತ್ತು ಸುಳ್ಳು ಆರೋಪ ಮಾಡಿದ್ದಾರೆ ಎಂದು ಸುದೀಪ್‌ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್‌ ವೆಂಕಣ್ಣ ಬಸಪ್ಪ ಹೊಸಮನಿ ನಡೆಸಿದರು.

Siddesh M S

ಮಾನಹಾನಿ ಹೇಳಿಕೆ ಮತ್ತು ಆರೋಪಗಳನ್ನು ಮಾಡಿರುವ ನಿರ್ಮಾಪಕರಾದ ಎಂ ಎನ್‌ ಕುಮಾರ್‌ ಮತ್ತು ಎಂ ಎನ್‌ ಸುರೇಶ್‌ ಅವರ ವಿರುದ್ಧ ಮಾನಹಾನಿ ದಾವೆ ದಾಖಲಿಸಬೇಕು ಹಾಗೂ 10 ಸಾವಿರ ರೂಪಾಯಿ ದಂಡ ಪಾವತಿಸಲು ಆದೇಶಿಸಬೇಕು ಎಂದು ಕೋರಿ ನಟ ಸುದೀಪ್‌ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿರುವ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ದೂರುದಾರರ ಸ್ವಯಂ ಹೇಳಿಕೆ ದಾಖಲಿಸಿಕೊಳ್ಳಲು ಪ್ರಕರಣವನ್ನು ಆಗಸ್ಟ್‌ 7ಕ್ಕೆ ಮುಂದೂಡಿದೆ.

ಆರೋಪಿಗಳಾಗಿರುವ ಎಂ ಎನ್‌ ಕುಮಾರ್‌ ಮತ್ತು ಎಂ ಎನ್‌ ಸುರೇಶ್‌ ಅವರು ಮಾನಹಾನಿ ಹೇಳಿಕೆ ಮತ್ತು ಸುಳ್ಳು ಆರೋಪ ಮಾಡಿದ್ದಾರೆ ಎಂದು ನಟ ಸುದೀಪ್‌ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು 13ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವೆಂಕಣ್ಣ ಬಸಪ್ಪ ಹೊಸಮನಿ ಅವರು ನಡೆಸಿದರು. ವಕೀಲ ಅಜಯ್‌ ಕಡಕೋಳ ಅವರು ವಾದ ಮಂಡಿಸಿದರು. ಬೆಂಗಳೂರಿನ ಜಯನಗರದ ಮಂಜುನಾಥ್‌ ಮತ್ತು ನಾಯಂಡಹಳ್ಳಿಯ ಎಸ್‌ ಕೃಷ್ಣ ಅವರು ಸಾಕ್ಷಿ ನುಡಿಯಲಿದ್ದಾರೆ ಎಂದು ಸುದೀಪ್‌ ಖಾಸಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸುದೀಪ್‌ ಖಾಸಗಿ ದೂರಿನಲ್ಲಿರುವ ಪ್ರಮುಖ ಅಂಶಗಳೇನು?

  • ಆರೋಪಿಗಳು ಮಾಡಿರುವ ಆರೋಪ ಮತ್ತು ಹೇಳಿಕೆಗಳು ಸುದೀಪ್‌ ಮತ್ತು ಅವರ ಕುಟುಂಬ ಸದಸ್ಯರು ಬಹಿರಂಗಪಡಿಸಲಾಗದ ಮಾನಸಿಕ ವೇದನೆಗೆ ನೂಕಿದೆ. ಈ ಮೂಲಕ ಸುದೀಪ್‌ ಅವರ ವೃತ್ತಿ, ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ಹಾಳು ಮಾಡಲಾಗಿದೆ. ದೇಶಾದ್ಯಂತ ಇರುವ ಅಭಿಮಾನಿಗಳು, ಬೆಂಬಲಿಗರ ನಡುವೆ ಸುದೀಪ್‌ ಅವರ ನಡೆ-ನುಡಿಯ ವಿಚಾರವು ಚರ್ಚೆಯ ವಿಷಯವಾಗಿದೆ. ಆರೋಪಿಗಳು ಮಾಡಿರುವ ಮಾನಹಾನಿ ಹೇಳಿಕೆಯಿಂದ ತಮ್ಮ ಸಿನಿಮಾಗಳಿಗೆ ಹಾನಿಯಾಗಬಹುದು ಎಂದು ಭಾವಿಸಿ ಸುದೀಪ್‌ ಅವರ ಜೊತೆಗಿನ ಸಿನಿಮಾ ನಿರ್ಮಾಣ ಒಪ್ಪಂದವನ್ನು ಕೆಲವು ನಿರ್ಮಾಪಕರು ಹಿಂಪಡೆದಿದ್ದಾರೆ. ತಾವು ನೀಡುತ್ತಿರುವ ಹೇಳಿಕೆ ಮತ್ತು ಮಾಡುತ್ತಿರುವ ಆಪಾದನೆ ಸುಳ್ಳು ಎಂದು ಗೊತ್ತಿದ್ದರೂ ಹಾಗೆ ಮಾಡುವ ಮೂಲಕ ಆರೋಪಿಗಳು ಗಂಭೀರ ಪ್ರಮಾದ ಎಸಗಿದ್ದು, ಅವುಗಳು ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿ ಅಪರಾಧವಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

  • ಆರೋಪಿಗಳು ಎಸಗಿರುವ ಅಪರಾಧವು ಐಪಿಸಿ ಸೆಕ್ಷನ್‌ 499 ಮತ್ತು 500 ಅಡಿ ಅಪರಾಧವಾಗಿದ್ದು, ಆರೋಪಿಗಳನ್ನು ನ್ಯಾಯಾಲಯವು ದೋಷಿಗಳು ಎಂದು ಪರಿಗಣಿಸಿದರೆ ಮತ್ತು ದಂಡ ವಿಧಿಸಿದರೆ ಅದರ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಬೇಕು. ದಂಡದ ಮೊತ್ತ ವಸೂಲಿಯಾದರೆ ದೂರುದಾರ ಸುದೀಪ್‌ಗೆ ಆ ಹಣವನ್ನು ನೀಡಬೇಕು. ಇಲ್ಲವೇ, ನ್ಯಾಯಾಲಯವು ನಿರ್ಧರಿಸಿದ ಮೊತ್ತವನ್ನು ಪರಿಹಾರವನ್ನಾಗಿ ಸುದೀಪ್‌ ಅವರಿಗೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಲಾಗಿದೆ.

  • ವಿದ್ಯುನ್ಮಾನ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ವಿಡಿಯೊ, ಸುದ್ದಿಗಳು ಸುಳ್ಳು, ಮಾನಹಾನಿ ಮತ್ತು ಕಾನೂನುಬಾಹಿರವಾಗಿವೆ. ಆರೋಪಿಗಳು ನೀಡಿರುವ ಹೇಳಿಕೆ ಮತ್ತು ಮಾಡಿರುವ ಆಪಾದನೆ ಸುಳ್ಳು ಎಂದು ಗೊತ್ತಿದ್ದೂ ದುರುದ್ದೇಶದಿಂದ ಸುದೀಪ್‌ ಅವರ ಸುದೀರ್ಘ ಕಾಲದಿಂದ ಕಟ್ಟುಕೊಂಡು ಬಂದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲಾಗಿದೆ. ಆರೋಪಿ ಕುಮಾರ್‌ ಅವರಿಂದ ಭಾರಿ ಹಣ ಪಡೆಯಲಾಗಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. 2023ರ ಜನವರಿ 17ರಂದು ನೀಡಿರುವ ಲೀಗಲ್‌ ನೋಟಿಸ್‌ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಒಂದೇ ಒಂದು ಮಾತನ್ನೂ ಆರೋಪಿಗಳು ಆಡಿಲ್ಲ. ಮಂಡಳಿಯಲ್ಲಿ ತಾವು ಹೊಂದಿರುವ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ದೂರಲಾಗಿದೆ.

  • ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದಾಗಿ ಹೇಳಿಕೊಂಡು ತಾನು ನಿರ್ಮಿಸುವ ಚಿತ್ರದಲ್ಲಿ ನಟಿಸುವಂತೆ ಕುಮಾರ್‌ ಅವರು ಕೋರಿದ್ದರಿಂದ ರಂಗ ಎಸ್‌ಎಸ್‌ಎಲ್‌ಸಿ, ಕಾಶಿ ಫ್ರಮ್‌ ವಿಲೇಜ್‌, ಮುಕುಂದ ಮುರಾರಿ ಮತ್ತು ಮಾಣಿಕ್ಯ ಸಿನಿಮಾಗಳಲ್ಲಿ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೇ ಸುದೀಪ್‌ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್‌ ಅವರೊಂದಿಗೆ ಸಾಧಿಸಿದ ಅನ್ಯೋನ್ಯತೆ ಬಳಕೆ ಮಾಡಿಕೊಂಡು ಸುದೀಪ್‌ ದುಬಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಕುಮಾರ್‌ ಅವರು ಸುಳ್ಳು, ಕಾನೂನುಬಾಹಿರ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕುಮಾರ್‌ ಅವರು ಕರ್ನಾಟಕ ಚಲಚಿತ್ರ ಮತ್ತು ವಾಣಿಜ್ಯ ಮಂಡಳಿಗೂ ಸುದೀಪ್‌ ವಿರುದ್ಧ ದೂರು ನೀಡಿದ್ದಾರೆ. ಕುಮಾರ್‌ ಅವರ ಕಾನೂನುಬಾಹಿರ, ತಪ್ಪು ಮತ್ತು ಮಾನಹಾನಿ ಸಂವಹನದ ಹಿನ್ನೆಲೆಯಲ್ಲಿ ಅವರಿಗೆ 2023ರ ಜನವರಿ 17ರಂದು ಲೀಗಲ್‌ ನೋಟಿಸ್‌ ಸಹ ಕಳುಹಿಸಲಾಗಿತ್ತು. ಇದರ ಸಂಭವನೀಯ ಹಾನಿಯನ್ನು ಅರಿತಿದ್ದ ಕುಮಾರ್‌ ಅವರು ಆನಂತರ ಯಾವುದೇ ಹೇಳಿಕೆ ನೀಡಿರಲಿಲ್ಲ. ಈ ನೆಲೆಯಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಸಿರಲಿಲ್ಲ ಎಂದು ಸುದೀಪ್‌ ವಿವರಿಸಿದ್ದಾರೆ.

  • ಆದರೆ, 2023ರ ಜುಲೈ 3ರಂದು ಸ್ನೇಹಿತರು, ಸಂಬಂಧಿಕರು, ಸಿನಿಮಾ ಕ್ಷೇತ್ರದವರು ಸುದೀಪ್‌ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಕರೆ ಮಾಡಿ ವಿಚಾರಿಸಲಾರಂಭಿಸಿದ್ದಾರೆ. ಏಕೆಂದರೆ 2023ರ ಜುಲೈ 3ರಂದು ಕುಮಾರ್‌ ಮತ್ತು ಸುರೇಶ್‌ ಅವರು ಕರ್ನಾಟಕ ಚಲಚಿತ್ರ ಮತ್ತು ವಾಣಿಜ್ಯ ಮಂಡಳಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಸುದೀಪ್‌ಗೆ ಚಿತ್ರದಲ್ಲಿ ನಟಿಸಲು ಹಣ ನೀಡಲಾಗಿದೆ. ಇತರರಿಗೂ ಅವರು ಮುಂಗಡ ಹಣ ಕೊಡಿಸಿದ್ದಾರೆ. ಅಲ್ಲದೇ, ಆರ್‌ಆರ್‌ ನಗರದಲ್ಲಿ ಆಸ್ತಿ ಖರೀದಿಸಲು ಮುಂಗಡವಾಗಿ ಹಣ ಪಡೆದಿದ್ದಾರೆ. ಭಾರಿ ಹಣವನ್ನು ಸ್ವೀಕರಿಸಿದ ಬಳಿಕವೂ ಸುದೀಪ್‌ ಅವರು ಕೈಗೆ ಸಿಗುತ್ತಿಲ್ಲ. ತಮ್ಮ ಜೊತೆಯಲ್ಲಿ ನಡೆದುಕೊಂಡಿರುವ ರೀತಿಯಲ್ಲಿಯೇ ಇತರೆ ಇಬ್ಬರು ನಿರ್ಮಾಪಕರ ಜೊತೆಯೂ ನಡೆದುಕೊಂಡಿದ್ದಾರೆ. ಸುದೀಪ್‌ ಅವರು ಕುಮಾರ್‌ ಅವರಿಗೆ ಮುಜುಗರ ಮತ್ತು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿರುವ ವಿಡಿಯೊಗಳು ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಎರಡನೇ ಆರೋಪಿ ಸುರೇಶ್‌ ಅವರ ಪ್ರಚೋದನೆ ಮತ್ತು ಸೂಚನೆಯ ಮೇರೆಗೆ ಕುಮಾರ್‌ ಅವರು ಹೇಳಿಕೆ ನೀಡಿರುವ ವಿಚಾರವು ತನಗೆ ಅಧಿಕೃತ ಮೂಲಗಳಿಂದ ಗೊತ್ತಾಗಿದೆ ಎಂದು ಸುದೀಪ್‌ ದೂರಿನಲ್ಲಿ ವಿವರಿಸಲಾಗಿದೆ.

  • ನಿರ್ಮಾಪಕ ಕುಮಾರ್‌ ಈಗ ಇರುವ ಸ್ಥಿತಿಯಲ್ಲಿ ಬೇರೆ ಯಾರೇ ಇದ್ದರೂ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರು ಎಂದು ಎರಡನೇ ಆರೋಪಿ ಸುರೇಶ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಮೂಲಕ ಸುದೀಪ್‌ ನಡೆ ಮತ್ತು ನುಡಿಯು ಯಾವುದೇ ವ್ಯಕ್ತಿಯ ಜೀವಕ್ಕೆ ಎರವಾಗುತ್ತದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ. ಕುಮಾರ್‌ ನಿರ್ಮಿಸುವ ಚಿತ್ರದಲ್ಲಿ ಸುದೀಪ್‌ ನಟಿಸದೇ ಇದ್ದರೆ ಸುರೇಶ್‌ ಜೊತೆಗೂಡಿ ಸುದೀಪ್‌ ಅವರ ಮನೆಯ ಮುಂದೆ 2023ರ ಜುಲೈ 6ರಂದು ಪ್ರತಿಭಟನೆ ನಡೆಸುವುದಾಗಿಯೂ ಕುಮಾರ್‌ ಹೇಳಿದ್ದಾರೆ. ಅಲ್ಲದೇ, ಸುದೀಪ್‌ ಪಾಲ್ಗೊಳ್ಳುವ ಶೂಟಿಂಗ್‌ ಸ್ಥಳಗಳಿಗೂ ತೆರಳಿ ಅಲ್ಲಿಂದ ಅವರು ಅತ್ತಿತ್ತ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೇ, ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾನರ್‌ ಮತ್ತು ಪೋಸ್ಟರ್‌ಗಳನ್ನು ಹರಿಯ ಬಿಡುವ ಮೂಲಕ ಸುದೀಪ್‌ ಮನೆ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದಾರೆ ಎಂದು ವಿವರಿಸಲಾಗಿದೆ.

  • ಕುಮಾರ್‌ ಅವರು ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡರೆ ಅಥವಾ ಗಂಭೀರ ಕ್ರಮಕ್ಕೆ ಮುಂದಾದರೆ ಕುಮಾರ್‌ ಕುಟುಂಬದ ತಲೆ ಮೇಲೆ ಬೀಳುವ ಎಲ್ಲಾ ಜವಾಬ್ದಾರಿಗಳು ಸುದೀಪ್‌ ಹೊಣೆಗಾರರಾಗುತ್ತಾರೆ ಎಂದು ಎರಡನೇ ಆರೋಪಿ ಸುರೇಶ್‌ ಬೆದರಿಕೆ ಹಾಕಿದ್ದಾರೆ. ಈ ಹೇಳಿಕೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ರೀತಿ ಹೇಳಿಕೆಗಳ ಮೂಲಕ ಆರೋಪಿಗಳು ಸುದೀಪ್‌ ಅವರಿಗೆ ಗಂಭೀರವಾದ ಮುಜುಗರ ಉಂಟು ಮಾಡಿದ್ದು, ಅವರ ಪ್ರಾಮಾಣಿಕತೆ ಮತ್ತು ನೇರ ನಡತೆಯನ್ನು ಪ್ರಶ್ನಿಸಿದ್ದಾರೆ. ಆರೋಪಿಗಳು ಜೊತೆಗೂಡಿ, ಇತರರನ್ನು ಇದರ ಭಾಗವಾಗಿಸಿ ಪಿತೂರಿ ನಡೆಸಿ ವ್ಯವಸ್ಥಿತವಾಗಿ ಸುದೀರ್ಘವಾಗಿ ಕಟ್ಟಿಕೊಂಡು ಬಂದಿರುವ ಸುದೀಪ್‌ ಅವರ ಘನತೆಗೆ ಹಾನಿ ಮಾಡಿದ್ದಾರೆ. ಈ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಸುದೀಪ್‌ ಅವರ ಭವಿಷ್ಯವನ್ನು ಮಂಕು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

  • ಕುಮಾರ್‌ ಅವರಿಗೆ ಲೀಗಲ್‌ ನೋಟಿಸ್‌ ನೀಡಲು ಮೂಲಕ ಎಚ್ಚರಿಕೆ ನೀಡಿದ್ದರೂ ಆರೋಪಿಗಳು ಸುದೀಪ್‌ ಅವರ ವೈಯಕ್ತಿಕ ಅಷ್ಟೇ ಅಲ್ಲದೇ ವತ್ತಿಪರ ನಡತೆ, ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ. ಸುದೀಪ್‌ ಅವರನ್ನು ಅಪ್ರಾಮಾಣಿಕ ಮತ್ತು ನೈತಿಕತೆ ಇಲ್ಲದವರು ಎಂದು ಬಿಂಬಿಸಲು ವ್ಯವಸ್ಥಿತ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರಿಗೆ ಮತ್ತು ಸಿನಿಮಾ ಕ್ಷೇತ್ರದಲ್ಲಿರುವವರೆಗೆ ದೂರುದಾರ ಸುದೀಪ್‌ ವಂಚಕ, ಅವರ ಜೊತೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು, ಅವರ ಜೊತೆಗಿನ ವ್ಯವಹಾರವು ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಭಯಾನಕ ಸ್ಥಿತಿ ತಂದೊಡ್ಡಬಹುದು ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ.

ಸಿ ವಿ ನಾಗೇಶ್‌ ಅಸೋಸಿಯೇಟ್ಸ್‌ನ ವಕೀಲರಾದ ಅಜಯ್‌ ಕಡಕೋಳ, ಪ್ರತೀಕ್‌ ಜಿ ಮತ್ತು ಸನತ್‌ ಕುಮಾರ್‌ ಅವರು ವಕಾಲತ್ತು ಹಾಕಿದ್ದಾರೆ.