ತಮ್ಮ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕರಿಗೆ ನಟ ಸುದೀಪ್ ಲೀಗಲ್ ನೋಟಿಸ್: ₹10 ಕೋಟಿ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ

ನೋಟಿಸ್‌ ಪಡೆದ ಮೂರು ದಿನಗಳೊಳಗೆ ಬೇಷರತ್‌ ಕ್ಷಮೆ ಯಾಚಿಸದಿದ್ದರೆ ಕ್ರಿಮಿನಲ್‌ ಕ್ರಮ ಎದುರಿಸಬೇಕಾದೀತು ಎಂದು ಸುದೀಪ್ ಹೇಳಿದ್ದಾರೆ.
Actor Sudeep
Actor SudeepFacebook

ಹಣ ಪಡೆದಿದ್ದರೂ ನಟ ಸುದೀಪ್‌ ಅವರು ತಮ್ಮ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಎಂದು ಆರೋಪ ಮಾಡಿದ್ದ ನಿರ್ಮಾಪಕರಿಬ್ಬರಿಗೆ ಸುದೀಪ್‌ ಲೀಗಲ್‌ ನೋಟಿಸ್‌ ನೀಡಿದ್ದಾರೆ. ಆ ಮೂಲಕ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ನಿರ್ಮಾಪಕರಿಬ್ಬರ ವಿರುದ್ಧ  ₹ 10 ಕೋಟಿ ಪರಿಹಾರ ಕೋರಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಿರ್ಮಾಪಕರಾದ ಎಂ ಎನ್‌ ಕುಮಾರ್‌ ಹಾಗೂ ಎಂ ಎನ್‌ ಸುರೇಶ್‌ ಅವರ ವಿರುದ್ಧ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರ ಮೂಲಕ ಸುದೀಪ್‌ ಲೀಗಲ್‌ ನೋಟಿಸ್‌ ನೀಡಿದ್ದಾರೆ. ನಿರ್ಮಾಪಕರು ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ನೋಟಿಸ್‌ ನೀಡಲಾಗಿದೆ. ನಿರ್ಮಾಪಕ ಕುಮಾರ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ನಿರ್ಮಾಪಕ ಎಂ ಎನ್‌ ಸುರೇಶ್‌ ಅವರ ವಿರುದ್ಧವೂ  ಮೊಕದ್ದಮೆ ಹೂಡುವುದಾಗಿ ಸುದೀಪ್‌ ಪರ ವಕೀಲರು ತಿಳಿಸಿದ್ದಾರೆ.

ನಿರ್ಮಾಪಕರು ನೀಡಿದ ಹೇಳಿಕೆಗಳು ತಮ್ಮ ಕಕ್ಷಿದಾರರಾದ ನಟ ಸುದೀಪ್‌ ಹಾಗೂ ಅವರ ಕುಟುಂಬಕ್ಕೆ ಊಹಿಸಲಸಾಧ್ಯವಾದ ಮಾನಸಿಕ ಯಾತನೆ ಉಂಟು ಮಾಡಿವೆ. ಈ ಆರೋಪಗಳು ನಟನ ವೃತ್ತಿಪರ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ  ಧಕ್ಕೆ ತಂದಿವೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಅಲ್ಲದೆ ಅವರು ನೀಡಿರುವ ಹೇಳಿಕೆಗಳು ಸುಳ್ಳು, ಕಿಡಿಗೇಡಿತನದಿಂದ ಕೂಡಿರುವುದಷ್ಟೇ ಅಲ್ಲದೆ ಮಾನಹಾನಿಕರವೂ ಕಾನೂನುಬಾಹಿರವೂ ಆಗಿವೆ. ಈ ಆರೋಪಗಳನ್ನು ಮಾಡುವ ಮೂಲಕ ನಿರ್ಮಾಪಕರು ಐಪಿಸಿ ಸೆಕ್ಷನ್‌ 499 ಹಾಗೂ 500ರ ಅಡಿ ಅಪರಾಧ ಎಸಗಿದ್ದಾರೆ ಎನ್ನಲಾಗಿದೆ.

Also Read
ನಟ ಚೇತನ್‌ ಒಸಿಐ ಮಾನ್ಯತೆ ರದ್ದು: ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್‌; ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಆದೇಶ

ನೋಟಿಸ್‌ ದೊರೆತ ಮೂರು ದಿನಗಳ ಒಳಗಾಗಿ ನಿರ್ಮಾಪಕರು ಬೇಷರತ್‌ ಕ್ಷಮೆ ಯಾಚಿಸಬೇಕು. ಈ ಕ್ಷಮೆಯಾಚನೆಯ ವಿವರಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ತಪ್ಪಿದಲ್ಲಿ ಕ್ರಿಮಿನಲ್‌ ಪ್ರಕ್ರಿಯೆ ಎದುರಿಸಬೇಕಾಗುತ್ತದೆ. ಅಲ್ಲದೆ ಲೀಗಲ್‌ ನೋಟಿಸ್‌ಗೆ ಸಂಬಂಧಿಸಿದಂತೆ ₹ 50,000 ಶುಲ್ಕವನ್ನು ಭರಿಸಲು ನಿರ್ಮಾಪಕರೇ ಹೊಣೆಗಾರರಾಗಿರುತ್ತಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ಕರ್ನಾಟಕಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ನಿರ್ಮಾಪಕರು “ತಮ್ಮ ಸಿನಿಮಾದಲ್ಲಿ ಅಭಿನಯಿಸುವುದಾಗಿ ಸುದೀಪ್‌ ಅವರು ಹೇಳಿ ಎಂಟು ಕೋಟಿ ರೂಪಾಯಿ ಮುಂಗಡ ಪಡೆದಿದ್ದರು. ಆದರೆ ಹಣ ಪಡೆದು ಏಳು ವರ್ಷ ಕಳೆದಿದ್ದರೂ ಸಿನಿಮಾದಲ್ಲಿ ಅಭಿನಯಿಸಲು ಡೇಟ್ಸ್‌ ನೀಡಿಲ್ಲ. ಅಲ್ಲದೆ ಆರ್‌ ಆರ್‌ ನಗರದಲ್ಲಿ ಸುದೀಪ್‌ ಅವರು ಖರೀದಿಸಿದ ಮನೆಗೆ ತಾವು (ಎಂ ಎನ್‌ ಕುಮಾರ್‌) ನೀಡಿದ್ದ ಹಣ ಬಳಕೆಯಾಗಿದೆ" ಎಂದು ದೂರಿದ್ದರು. ಇದು ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.

ನಿರ್ಮಾಪಕ ಎಂ ಎನ್‌ ಕುಮಾರ್‌ ಅವರ ಈ ಹಿಂದಿನ ಸಿನಿಮಾಗಳಾದ ʼರಂಗ ಎಸ್‌ಎಸ್‌ಎಲ್‌ಸಿʼ, ʼಕಾಶಿ ಫ್ರಮ್‌ ವಿಲೇಜ್‌ʼ, ʼಮುಕುಂದ ಮುರಾರಿʼ ಹಾಗೂ ʼಮಾಣಿಕ್ಯʼ ಚಿತ್ರಗಳಲ್ಲಿ ಸುದೀಪ್‌ ನಟನೆ, ನಿರ್ದೇಶನವನ್ನು ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com