ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಮಹಾರಾಷ್ಟ್ರದ ಪುಣೆಯಲಲ್ಲಿರುವ ಔಷಧ ಘಟಕವೊಂದನ್ನು ಬಳಸಲು ಬಾಂಬೆ ಹೈಕೋರ್ಟ್ ಸೋಮವಾರ ಕೋವ್ಯಾಕ್ಸಿನ್ ತಯಾರಿಕಾ ಕಂಪೆನಿ ಭಾರತ್ ಬಯೋಟೆಕ್‌ಗೆ ಅನುಮತಿ ನೀಡಿದೆ. ಅಲ್ಲದೆ ಅಗತ್ಯ ಅನುಮತಿಗಳನ್ನು ಕಂಪೆನಿಗೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಲಸಿಕೆ ತಯಾರಿಕೆ ಸಕ್ರಿಯಗೊಳಿಸಲು ಭಾರತ್ ಬಯೋಟೆಕ್‌ನ ಸಹ ಸಂಸ್ಥೆ ಬಯೋವೆಟ್‌ಗೆ ಸೂಕ್ತ ಸಮಯದೊಳಗೆ ಅಗತ್ಯ ಪರವಾನಗಿ ಹಾಗೂ ಅನುಮತಿ ನೀಡುವಂತೆ ನ್ಯಾಯಾಲಯ ಪುಣೆ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪುಣೆ ಜಿಲ್ಲಾಧಿಕಾರಿ ಮತ್ತು ಮಹಾರಾಷ್ಟ್ರದ ಅರಣ್ಯ ಇಲಾಖೆಗೆ ಸೂಚಿಸಿತು.
ವ್ಯಾಕ್ಸಿನೇಷನ್ ಉತ್ಪಾದನಾ ಘಟಕ ಆರಂಭಿಸಲು ಅನುಮತಿ ನಿರಾಕರಿಸಿದ್ದ ಅರಣ್ಯ ಇಲಾಖೆ ಆದೇಶವನ್ನು ರದ್ದುಗೊಳಿಸಲು ಕೋರಿ ಬಯೋವೆಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಕೆ ತಟೇದ್ ಮತ್ತು ಎನ್ ಆರ್ ಬೋರ್ಕರ್ ಅವರಿದ್ದ ಪೀಠ ಮಧ್ಯಂತರ ನಿರ್ದೇಶನ ನೀಡಿತು.
ಬಳಸಲು ಸಿದ್ಧವಾಗಿರುವ ಬಿಎಲ್‌ಎಸ್ -3 ಲಸಿಕೆ ತಯಾರಿಕಾ ಸೌಲಭ್ಯ ಇಂಟರ್‌ವೆಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿತ್ತು. ಆದರೆ ವಾಣಿಜ್ಯ ಕಾರಣಗಳಿಗಾಗಿ ಅದು ಸ್ಥಗಿತಗೊಳ್ಳುವ ಹಂತದಲ್ಲಿದ್ದಾಗ ಭಾರತ್ ಬಯೋಟೆಕ್ ಆ ಕಂಪೆನಿಯ ಅನುಮತಿಯೊಂದಿಗೆ ಅಲ್ಲಿ ಲಸಿಕೆ ತಯಾರಿಸಲು ಮುಂದಾಗಿದೆ.
ಕೋವಿಡ್‌ಗೆ ಲಸಿಕೆ ತಯಾರಿಸುವ ದೇಶದ ಮೂರು ಘಟಕಗಳಲ್ಲಿ ಭಾರತ್ ಬಯೋಟೆಕ್‌ನ ಸಹ ಸಂಸ್ಥೆ ಬಯೋವೆಟ್ ಕೂಡ ಒಂದು. ಲಸಿಕೆ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಬಯೋವೆಟ್ ಈಗಿನ ಘಟಕದಲ್ಲಿ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಬಳಕೆಯ ಹಂತದಲ್ಲಿರುವ ಘಟಕವನ್ನು ಬಯೋವೆಟ್‌ಗೆ ನೀಡಲು ಇಂಟರ್‌ವೆಟ್ ಒಪ್ಪಿಕೊಂಡಿದೆ ಎಂದು ಅರ್ಜಿಯಲ್ಲಿ ಭಾರತ್ ಬಯೋಟೆಕ್ ತಿಳಿಸಿತ್ತು.
ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರು ಲಸಿಕೆ ತಯಾರಿಸುವ ಬಯೋಟೆಕ್ ಬಗ್ಗೆ ಆಕ್ಷೇಪಣೆ ಇಲ್ಲದಿದ್ದರೂ ಈ ಅನುಮತಿ ಆಧರಿಸಿ ಬಯೋವೆಟ್ ಪಾಲುದಾರಿಕೆ ಸಾಧಿಸುವುದನ್ನು ಸರ್ಕಾರ ಬಯಸುವುದಿಲ್ಲ ಎಂದರು. ಈ ಕುರಿತ ಅಫಿಡವಿಟ್ ಸಲ್ಲಿಸಿದ ಬಯೋವೆಟ್ ತಾನು ಉತ್ಪಾದನೆಯನ್ನು ಮಾತ್ರವೇ ಮಾಡುವುದಾಗಿಯೂ, ಅನುಮತಿಯನ್ನು ಬಳಸಿಕೊಂಡು ಪಾಲುದಾರಿಕೆ ಸಾಧಿಸುವುದಿಲ್ಲ ಎಂದಿತು. ಅಲ್ಲದೆ, ಕುಂಭಕೋಣಿ ಅವರು ಲಸಿಕೆ ತಯಾರಿಕೆಗೆ ಅಗತ್ಯವಾದ ಎಲ್ಲಾ ಅನುಮತಿ ನೀಡಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಸಹಕರಿಸಲಿವೆ ಎಂದು ತಿಳಿಸಿದರು. ಫಿನಿಕ್ಸ್ ಲೀಗಲ್ ಸಂಸ್ಥೆಯ ವಕೀಲರು ಇಂಟರ್‌ವೆಟ್ ಪರವಾಗಿ, ಶ್ರೀಅಂಡ್ ಕೊ ಸಂಸ್ಥೆಯ ವಕೀಲರು ಬಯೋವೆಟ್ ಪರವಾಗಿ ವಾದ ಮಂಡಿಸಿದರು.