ಕೋವಿಡ್ ಲಸಿಕೆ ಬೆಲೆ ನೀತಿ: ಸುಪ್ರೀಂಕೋರ್ಟ್‌ನಲ್ಲಿ ತನ್ನನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ಇಂತಹ ನೀತಿ ನಿರೂಪಣಾ ವಿಚಾರಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಉತ್ತಮ ಅರ್ಥ ಕಲ್ಪಿಸಿದರೂ ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಮತ್ತು ತನ್ನ ಕಾರ್ಯಕಾರಿ ಕೆಲಸಗಳ ವಿಚಾರವನ್ನು ಸರ್ಕಾರಕ್ಕೆ ಬಿಡಬೇಕು ಎಂದು ಕೇಂದ್ರ ಹೇಳಿದೆ.
Supreme Court and Covid vaccine
Supreme Court and Covid vaccine

ಲಸಿಕೆ ವ್ಯಾಪ್ತಿ ವಿಸ್ತರಣೆ, ಲಸಿಕೆ ತಯಾರಿಕೆ ತ್ವರಿತ ಹೆಚ್ಚಳ ಹಾಗೂ ಹೊಸ ಲಸಿಕೆ ತಯಾರಕರನ್ನು ಆಕರ್ಷಿಸುವ ಸಲುವಾಗಿ ಉದಾರ ಬೆಲೆ ನೀತಿ ಅಳವಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಅಫಿಡವಿಟ್‌ ಮೂಲಕ ಈ ಮಾಹಿತಿ ನೀಡಿದೆ.

ಪ್ರಸ್ತುತ ಬೆಲೆ ನೀತಿ ಪ್ರಕಾರ ಲಸಿಕೆಗಳಿಗೆ ಭಿನ್ನ ರೀತಿಯ ಬೆಲೆ ನಿಗದಿಪಡಿಸಲಾಗಿದ್ದು, ಕೇಂದ್ರ ಸರ್ಕಾರವು ಲಸಿಕೆಗೆ ಪಾವತಿಸುವ ದರಕ್ಕಿಂತ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಬೆಲೆಯನ್ನು ಲಸಿಕೆ ತಯಾರಕರಿಗೆ ಪ್ರತಿ ಲಸಿಕೆಗೆ ಪಾವತಿಸಬೇಕಿದೆ.

ಸ್ಫರ್ಧಾತ್ಮಕ ಮಾರುಕಟ್ಟೆ ಸೃಷ್ಟಿಸುವುದು, ಲಸಿಕೆ ತಯಾರಿಸುವ ಖಾಸಗಿ ಕಂಪೆನಿಗಳಿಗೆ ಉತ್ತೇಜನಕಾರಿ ಬೇಡಿಕೆ ಒದಗಿಸುವುದು, ಲಸಿಕೆಗಳ ಪರಿಣಾಮಕಾರಿ ತಯಾರಿಕೆಗಾಗಿ ಹಾಗೂ ಮಾರುಕಟ್ಟೆ ಚಾಲಿತ ಕೈಗೆಟಕುವ ಬೆಲೆಗಳಿಗೆ ಅವು ದೊರೆಯಬೇಕೆಂಬ ಉದ್ದೇಶದಿಂದ ಭಿನ್ನ ಬೆಲೆ ನಿಗದಿಪಡಿಸಲಾಗಿದೆ. ಇದು ವಿದೇಶಿ ಲಸಿಕಾ ತಯಾರಕರನ್ನು ಆಕರ್ಷಿಸಿ ಲಸಿಕೆ ಲಭ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ವಿವರಿಸಿದೆ.

Also Read
ರಾಜ್ಯದಲ್ಲಿ ಲಸಿಕೆ ಆಘಾತಕಾರಿ ಎಂಬಷ್ಟು ಕಡಿಮೆ; ಕೂಡಲೇ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್

ಏಪ್ರಿಲ್ 30ರಂದು ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರ ಖರೀದಿಸಬೇಕಾದ ಲಸಿಕೆಗಳ ಬೆಲೆ ಹೆಚ್ಚಳ ಏಕೆ ಎಂದು ಸುಪ್ರೀಂಕೋರ್ಟ್‌ ಸರ್ಕಾರವನ್ನು ಪ್ರಶ್ನಿಸಿತ್ತು. ಆಸ್ಟ್ರಾಜೆನಿಕಾ ಅಮೆರಿಕದ ನಾಗರಿಕರಿಗೆ ಕಡಿಮೆ ಬೆಲೆಗೆ ಲಸಿಕೆಗಳನ್ನು ಮಾರಾಟ ಮಾಡುತ್ತಿದೆ. ಆದರೆ ಭಾರತೀಯರು ಏಕೆ ಇಷ್ಟು ಹಣ ಪಾವತಿಸಬೇಕು. ಲಸಿಕೆ ತಯಾರಕರು ಕೇಂದ್ರಕ್ಕೆ 150 ರೂನಂತೆ ಪ್ರತಿ ಡೋಸ್‌ ಲಸಿಕೆ ನೀಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಗಳಿಗೆ 300 ಅಥವಾ 400 ರೂಗಳಿಗೆ ಅದೇ ಲಸಿಕೆಯನ್ನು ನೀಡುತ್ತಿದ್ದಾರೆ. ಒಂದು ರಾಷ್ಟ್ರವಾಗಿ ನಾವು ಇಷ್ಟು ಹಣ ಏಕೆ ಪಾವತಿಸಬೇಕು. ಬೆಲೆ ಅಂತರ 30 ರಿಂದ 40,000 ಕೋಟಿ ಆಗುವುದಿಲ್ಲವೇ? ಎಂದು ಕೇಂದ್ರವನ್ನು ಕೇಳಿತ್ತು.

ತನ್ನ ಅಫಿಡವಿಟ್‌ನಲ್ಲಿ ಕೇಂದ್ರವು ಲಸಿಕೆಯ ದರನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಇದೇ ವೇಳೆ ದೇಶದ ಎಲ್ಲ ನಾಗರಿಕರಿಗೂ ಲಸಿಕೆಯು ಉಚಿತವಾಗಿ ದೊರೆಯಲಿದೆ ಎನ್ನುವ ಅಂಶವನ್ನು ಪ್ರಸ್ತಾಪಿಸಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಕೈಗೊಂಡಿರುವ ನಿರ್ಧಾರ ಕಾರಣ ಎನ್ನುವುದನ್ನು ತಿಳಿಸಿದೆ. ಅಂತಿಮವಾಗಿ ತಜ್ಞರ ಅಭಿಪ್ರಾಯದ ಕೊರತೆ, ಆಡಳಿತಾತ್ಮಕ ಅನನುಭವಗಳು ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ತೊಡರಾಗಬಹುದು ಎಂದು ಕೇಂದ್ರವು ಹೇಳಿದೆ.

ಉತ್ತಮ ಉದ್ದೇಶದ, ಆದರೆ ಅತ್ಯುತ್ಸಾಹದ ನ್ಯಾಯಾಂಗದ ಮಧ್ಯಪ್ರವೇಶವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ತಜ್ಞರ ಸಲಹೆ ಅಥವಾ ಆಡಳಿತಾತ್ಮಕ ಅನುಭವದ ಕೊರತೆಗಳು ಈ ಸಮಸ್ಯೆಗೆ ನವೀನ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ವೈದ್ಯರು, ವಿಜ್ಞಾನಿಗಳು, ತಜ್ಞರು ಮತ್ತು ಕಾರ್ಯಾಂಗಕ್ಕೆ ಅವಕಾಶವಿಲ್ಲದಂತೆ ಮಾಡಬಹುದು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಕೇಂದ್ರದ ಅಫಿಡವಿಟ್‌

ಕೇಂದ್ರದ ವಾದ ಹೀಗಿದೆ: 

  • ಹೊಸ ಲಸಿಕೆ ನೀತಿಯಡಿ ಕೇಂದ್ರ ಸರ್ಕಾರ ಲಸಿಕೆ ತಯಾರಕರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದು ಲಸಿಕೆ ಬೆಲೆಗಳು ಎಲ್ಲಾ ರಾಜ್ಯಗಳಿಗೆ ಏಕರೂಪವಾಗಿರುವಂತೆ ನೋಡಿಕೊಳ್ಳಲಾಗಿದೆ.

  • 18 ರಿಂದ 44 ವರ್ಷವಯೋಮಾನದ ಜನತೆಗೆ ಕೂಡ ಎಲ್ಲಾ ರಾಜ್ಯ ಸರ್ಕಾರಗಳು ಉಚಿತವಾಗಿ ಲಸಿಕೆ ನೀಡುತ್ತಿವೆ. ಹೀಗಾಗಿ ಎಲ್ಲಾ ವಯಸ್ಸಿನ ಪ್ರತಿ ನಾಗರಿಕರಿಗೆ ದೇಶಾದ್ಯಂತ ಉಚಿತ ಲಸಿಕೆ ಲಭ್ಯವಾಗುತ್ತಿದೆ.

  • ಲಸಿಕೆಯ ವ್ಯಾಪಕ ತಯಾರಿಕೆಗಾಗಿ ಪೇಟೆಂಟ್‌ ಷರತ್ತುಗಳನ್ನು ಸಡಿಲಗೊಳಿಸುವಂತೆ ಸುಪ್ರೀಂಕೋರ್ಟ್‌ ನೀಡಿದ್ದ ಸಲಹೆಗೆ ಪ್ರತಿಕ್ರಿಯಿಸಿರುವ ಕೇಂದ್ರ, ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಮತ್ತಿತರ ಅಗತ್ಯ ವಸ್ತುಗಳ ಲಭ್ಯತೆ ಈಗ ಇರುವ ಪ್ರಮುಖ ವಿಷಯ. ಔಷಧ ತಯಾರಿಕೆಗೆ ಹೆಚ್ಚುವರಿ ಅನುಮತಿ ಮತ್ತು ಪರವಾನಗಿ ಹೆಚ್ಚಿಸಿದ ಮಾತ್ರಕ್ಕೆ ಕೂಡಲೇ ಉತ್ಪಾದನೆ ಹೆಚ್ಚಳವಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.

  • ರೆಮ್‌ಡಿಸಿವಿರ್‌ ರೀತಿಯ ಔಷಧ ಉತ್ಪಾದನೆಗಾಗಿ ಕಚ್ಚಾವಸ್ತುಗಳು ಮತ್ತಿತರ ಅಗತ್ಯ ಸಾಮಗ್ರಿಗಳ ಲಭ್ಯತೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ ಈಗ ಇರುವ ನಿರ್ಬಂಧಗಳಿಂದಾಗಿ ಅಪೇಕ್ಷಿತ ಫಲಿತಾಂಶ ದೊರೆಯದಿರಬಹುದು. ಸಾಂಕ್ರಾಮಿಕ ರೋಗ ಯಾವಾಗ ಹೆಚ್ಚುತ್ತದೆ ಎಂಬುದು ಕೂಡ ತಿಳಿದಿಲ್ಲವಾದ್ದರಿಂದ ರೆಮ್‌ಡಿಸಿವಿರ್‌ ಬೇಡಿಕೆಯನ್ನು ಖಚಿತವಾಗಿ ಊಹಿಸುವುದು ಕೂಡ ಕಷ್ಟ.

  • ಸಾಂಕ್ರಾಮಿಕ ರೋಗ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು ಪೇಟೆಂಟ್‌ ಕಾಯಿದೆಯಡಿ ಮಾಡುವ ಬದಲಾವಣೆ ಅಂತರರಾಷ್ಟ್ರೀಯವಾಗಿಯೂ ಪರಿಣಾಮ ಬೀರಲಿದೆ. ಹೀಗಾಗಿ ರಾಜತಾಂತ್ರಿಕ ಮಟ್ಟದಲ್ಲಿ ಕೇಂದ್ರ ಸರ್ಕಾರ ಜಾಗತಿಕ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ.

  • ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನೀತಿ ನಿರೂಪಣಾ ವಿಚಾರಗಳಲ್ಲಿ ರಾಷ್ಟ್ರೀಯ ಕಾರ್ಯತಂತ್ರವು ತಜ್ಞ ವೈದ್ಯಕೀಯ ಮತ್ತು ವೈಜ್ಞಾನಿಕ ಸಲಹೆಗಳನ್ನು ಆಧರಿಸಿ ರೂಪುಗೊಂಡಿರುತ್ತದೆ. ಹಾಗಾಗಿ, ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಅಲ್ಲಿ ಹೆಚ್ಚಿನ ಆಸ್ಪದವಿಲ್ಲ. ಉತ್ತಮ ಉದ್ದೇಶದ, ಆದರೆ ಅತ್ಯುತ್ಸಾಹದ ನ್ಯಾಯಾಂಗದ ಮಧ್ಯಪ್ರವೇಶವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ತಜ್ಞರ ಸಲಹೆ ಅಥವಾ ಆಡಳಿತಾತ್ಮಕ ಅನುಭವದ ಕೊರತೆಗಳು ಈ ಸಮಸ್ಯೆಗೆ ನವೀನ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ವೈದ್ಯರು, ವಿಜ್ಞಾನಿಗಳು, ತಜ್ಞರು ಮತ್ತು ಕಾರ್ಯಾಂಗಕ್ಕೆ ಅವಕಾಶವಿಲ್ಲದಂತೆ ಮಾಡಬಹುದು.

  • ಹಾಗಾಗಿ, ಎಲ್ಲರ ಹಿತಾಸಕ್ತಿಯ ದೃಷ್ಟಿಯಿಂದ ಕಾರ್ಯಾಂಗಕ್ಕೆ ತನ್ನ ಕೆಲಸವನ್ನು ಮಾಡಲು ಮುಕ್ತ ಅವಕಾಶ ನೀಡಬೇಕು ಎಂದು ಅಫಿಡವಿಟ್‌ನಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com