P Varavara Rao
P Varavara Rao 
ಸುದ್ದಿಗಳು

ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭೀಮಾ ಕೋರೆಗಾಂವ್ ಆರೋಪಿ ಕವಿ ವರವರ ರಾವ್

Bar & Bench

ವೈದ್ಯಕೀಯ ಕಾರಣಗಳಿಗಾಗಿ ತಮಗೆ ಶಾಶ್ವತ ಜಾಮೀನು ನೀಡುವಂತೆ ಕೋರಿ 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ತೆಲುಗು ಕವಿ ವರವರ ರಾವ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ತಿರಸ್ಕರಿಸಿ ಬಾಂಬೆ ಹೈಕೋರ್ಟ್‌ ಏಪ್ರಿಲ್ 13ರಂದು ನೀಡಿದ್ದ ತೀರ್ಪನ್ನು ರಾವ್‌ ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ರಜಾಕಾಲೀನ ಪೀಠದ ಮುಂದೆ ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್ ಅವರು ಇಂದು ಅರ್ಜಿ ಪ್ರಸ್ತಾಪಿಸಿದರು.

“ವರವರ ರಾವ್‌ ಅವರಿಗೆ 82 ವರ್ಷ ವಯಸ್ಸಾಗಿದೆ. ಜಾಮೀನು ಪ್ರಕರಣದ ವಿಚಾರಣೆ ಪುನರಾರಂಭಿಸುವ ಕುರಿತು ಆಲಿಸಿ” ಎಂದು ಗ್ರೋವರ್‌ ಮನವಿ ಮಾಡಿದರು. ಜುಲೈ 11ರಂದು ಪ್ರಕರಣ ಪಟ್ಟಿ ಮಾಡಲು ನ್ಯಾಯಾಲಯ ಒಪ್ಪಿತು.

ಎಸ್‌ ಬಿ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಬಾಂಬೆ ಹೈಕೋರ್ಟ್ ಪೀಠ ರಾವ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುವುದರ ಜೊತೆಗೆ ವಿಚಾರಣೆಯ ಅವಧಿಯಲ್ಲಿ ತೆಲಂಗಾಣದಲ್ಲೇ ಉಳಿಯಲು ಅವಕಾಶ ನೀಡಬೇಕೆಂಬ ಅರ್ಜಿಯನ್ನೂ ನಿರಾಕರಿಸಿತ್ತು. ಆದರೆ ಅದು ವೈದ್ಯಕೀಯ ನೆಲೆಯಲ್ಲಿ ತಾನು ಈ ಹಿಂದೆ ನೀಡಿದ್ದ ತಾತ್ಕಾಲಿಕ ಜಾಮೀನನ್ನು ಮೂರು ತಿಂಗಳವರೆಗೆ ವಿಸ್ತರಿಸಿತ್ತು.