ವರವರ ರಾವ್‌ 149 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ:‌ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ರಾವ್ ಅವರನ್ನು ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಲ್ಲಿಟ್ಟು ವಿಚಾರಣೆ ಬಾಕಿ ಇರುವವರೆಗೂ ಅವರನ್ನು ಬಂಧನದಿಂದ ಬಿಡುಗಡೆ ಮಾಡುವ ನ್ಯಾಯಾಲಯದ ಊಹಾತ್ಮಕ ಸಲಹೆಯನ್ನು ಹಿರಿಯ ವಕೀಲ ಆನಂದ್‌ ಗ್ರೋವರ್‌ ನೆನಪಿಸಿದ್ದಾರೆ.
Varavara Rao, Bombay High Court
Varavara Rao, Bombay High Court
Published on

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಕವಿ ಡಾ. ವರವರ ರಾವ್‌ ಅವರಿಗೆ ವೈದ್ಯಕೀಯ ಕಾರಣದ ಆಧಾರ ಮೇಲೆ ಜಾಮೀನು ಮಂಜೂರು ಮಾಡುವ ವಿಚಾರದ ಆದೇಶವನ್ನು ಬಾಂಬೆ ಹೈಕೋರ್ಟ್‌ ಸೋಮವಾರ ಕಾಯ್ದಿರಿಸಿದೆ.

ಷರತ್ತುಗಳನ್ನು ವಿಧಿಸಿ ರಾವ್‌ ಅವರು ಹೈದರಾಬಾದ್‌ನ ತಮ್ಮ ಮನೆಗೆ ತೆರಳಲು ಅವಕಾಶ ಮಾಡಿಕೊಡುವಂತೆ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಮನೀಷ್‌ ಪಿಟಾಲೆ ಅವರನ್ನು ರಾವ್‌ ಪರ ಹಿರಿಯ ವಕೀಲ ಆನಂದ್‌ ಗ್ರೋವರ್‌ ಕೋರಿದರು.

ರಾವ್‌ ಅವರ ಯೋಗಕ್ಷೇಮ ನೋಡಿಕೊಳ್ಳಲು ಅವರ ಸಂಬಂಧಿಕರು ಕೆಲಸಕ್ಕೆ ರಜೆ ಹಾಕಿ ಇಲ್ಲಿಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿ ಅವರನ್ನು ಹೈದರಾಬಾದ್‌ಗೆ ಕಳುಹಿಸಿಕೊಡುವಂತೆ ಗ್ರೋವರ್‌ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಶಿಂಧೆ ಅವರು “ರಾವ್‌ ಅವರನ್ನು ಬಂಧನದಿಂದ ಬಿಡುಗಡೆ ಮಾಡಲು ಅವರ ಆರೋಗ್ಯವನ್ನು ಪರಿಗಣಿಸಲಾಗುತ್ತದೆಯೇ ವಿನಾ ಅವರ ಸಂಬಂಧಿಕರಿಗೆ ಆಗುತ್ತಿರುವ ಅಡಚಣೆಯನ್ನು ಪರಿಗಣಿಸಲಾಗದು,” ಎಂದು ಹೇಳಿದ್ದಾರೆ. ಮುಂದುವರೆದು ಅವರು, “ರಾವ್‌ ಅವರಿಗೆ ವೈದ್ಯಕೀಯ ಕಾರಣದ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದರೆ ಪ್ರಕರಣದಲ್ಲಿನ ಇತರೆ ಆರೋಪಿಗಳು ಅದರ ಲಾಭ ಪಡೆಯಲು ಹವಣಿಸಿಬಹುದು,” ಎಂದು ಹೇಳಿದ್ದಾರೆ.

ರಾವ್‌ ಅವರನ್ನು ಜೆ ಜೆ ಆಸ್ಪತ್ರೆಗೆ ವರ್ಗಾಯಿಸಿ, ಅವರಿಗೆ ಕಾರಾಗೃಹ ವಿಶೇಷ ವಾರ್ಡ್‌ ನೀಡಿದರೆ ಅವರ ಸಂಬಂಧಿಕರಿಗೆ ಆಗುತ್ತಿರುವ ಅನನುಕೂಲ ತಪ್ಪಲಿದೆ. ಅಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇಡುವುದರ ಜೊತೆಗೆ ಅವರ ಸಂಬಂಧಿಕರನ್ನು ಭೇಟಿ ಮಾಡಬಹುದು ಎಂದು ನ್ಯಾ. ಪಿಟಾಲೆ ಹೇಳಿದ್ದಾರೆ.

ರಾವ್ ಅವರನ್ನು ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಲ್ಲಿಟ್ಟು ವಿಚಾರಣೆ ಬಾಕಿ ಇರುವವರೆಗೂ ಅವರನ್ನು ಬಂಧನದಿಂದ ಬಿಡುಗಡೆ ಮಾಡುವ ನ್ಯಾ ಪಿಟಾಲೆಯವರ ಈ ಹಿಂದಿನ ಸಲಹೆಯನ್ನು ಕೂಡ ವಕೀಲ ಆನಂದ್‌ ಗ್ರೋವರ್‌ ಇದೇ ವೇಳೆ ನೆನಪಿಸಿದರು.

ಆದರೆ ಮತ್ತೊಂದೆಡೆ ರಾವ್‌ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದವಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ವಾದಿಸಿದರು.

200 ಸಾಕ್ಷ್ಯಗಳು ಇದ್ದು, ಇನ್ನೂ ಆರೋಪ ಪಟ್ಟಿ ಸಿದ್ಧಪಡಿಸದೇ ಇರುವುದರಿಂದ ವಿಚಾರಣೆಗೆ ಸಾಕಷ್ಟು ಸಮಯಬೇಕಾಗಬಹುದು ಎಂದು ನ್ಯಾ. ಶಿಂಧೆ ಇಂಗಿತ ವ್ಯಕ್ತಪಡಿಸಿದರು. “ಇನ್ನೂ ಆರೋಪಪಟ್ಟಿ ಸಿದ್ಧವಾಗಿಲ್ಲ. ತುರ್ತು ವಿಚಾರಣೆಯೂ ಮೂಲಭೂತ ಹಕ್ಕುಗಳ ಭಾಗ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್‌ ಅವರು “ಹೆಚ್ಚು ಸಾಕ್ಷ್ಯಗಳನ್ನು ಹೊಂದಿರುವುದರಿಂದ ಜಾಮೀನಿಗೆ ಅವಕಾಶ ಕಡಿಮೆ. ಜಾಮೀನಿನ ಮೇಲೆ ಹೊರ ಹೋಗುವ ಕೈದಿಗಳ ಮೇಲೆ ಹಿಡಿತವಿರುವುದಿಲ್ಲ” ಎಂದರು.

ರಾವ್‌ ಅವರಿಗೆ ಮರೆಗುಳಿ ಖಾಯಿಲೆ (ಡಿಮೆನ್ಶಿಯಾ) ಇದೆಯೇ, ಇಲ್ಲವೇ ಎನ್ನುವುದರ ಬಗ್ಗೆ ಸ್ಪಷ್ಟಪಡಿಸುವಂತೆ ನ್ಯಾಯಾಲಯ ಪ್ರಶ್ನಿಸಿತು. ಯಾವುದೇ ಆಸ್ಪತ್ರೆಯೂ ಅವರಿಗೆ ಮರೆಗುಳಿ ಖಾಯಿಲೆ ಬಗ್ಗೆ ತಪಾಸಣೆ ನಡೆಸುವಂತೆ ಹೇಳದೇ ಇರುವುದರಿಂದ ಆ ರೀತಿಯ ಪರೀಕ್ಷೆ ನಡೆಸಿಲ್ಲ ಎಂದು ಸಿಂಗ್‌ ಹೇಳಿದರು. ಹಿಂದಿನ ವರದಿಯಲ್ಲಿ ರಾವ್‌ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದ್ದು, ಅವರಿಗೆ ಒಳಾಂಗಣ ನಿರ್ವಹಣೆಯ ಅಗತ್ಯವಿಲ್ಲ ಎಂದು ಹೇಳಲಾಗಿದೆ ಎಂದರು. ಆದರೆ, ನ್ಯಾಯಾಲಯವು ಮೊದಲು ಅಥವಾ ಕೊನೆಯ ವರದಿ ಎಂದು ಪರಿಗಣಿಸುವುದಿಲ್ಲ, ಬದಲಿಗೆ ತನಗೆ ಸಲ್ಲಿಸಲಾಗಿರುವ ಎಲ್ಲಾ ವೈದ್ಯಕೀಯ ವರದಿಗಳನ್ನು ಪರಿಗಣಿಸಲಾಗುವುದು ಎಂದಿತು.

Also Read
ವಾದ ಮಂಡಿಸುವಾಗ ವರವರ ರಾವ್ ಆರೋಗ್ಯ ನೆನಪಿನಲ್ಲಿಡಿ ಎಂದು ವಕೀಲರಿಗೆ ಸೂಚಿಸಿದ ಬಾಂಬೆ ಹೈಕೋರ್ಟ್

ಜೆ ಜೆ ಸರ್ಕಾರಿ ಆಸ್ಪತ್ರೆಯಲ್ಲಿ ಕೈದಿ ವಾರ್ಡ್‌ ಸೃಷ್ಟಿಸಿ ವಿಶೇಷ ಶುಶ್ರೂಷೆ ಮಾಡುವುದಕ್ಕೆ ಒಪ್ಪಿಕೊಂಡಿರುವ ಮುಖ್ಯ ಸರ್ಕಾರಿ ಅಭಿಯೋಜಕ ದೀಪಕ್‌ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಪೀಠವು ಗ್ರೋವರ್‌ಗೆ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಗ್ರೋವರ್‌ ಅವರು ರಾವ್‌ ಅವರನ್ನು ತಲೋಜಾ ಜೈಲು ಆಸ್ಪತ್ರೆಯಲ್ಲಿ ಇಡುವುದು ಪರಿಹಾರವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದರು. “ಈಗ ಉಳಿದಿರುವ ಪ್ರಶ್ನೆ ಹೈದರಾಬಾದ್‌ ಅಥವಾ ಜೆ ಜೆ ಆಸ್ಪತ್ರೆ?” ಎಂದ ಗ್ರೋವರ್‌ ಅವರು ಕಠಿಣ ಷರತ್ತುಗಳನ್ನು ವಿಧಿಸಿ ಮೂರು ತಿಂಗಳವರೆಗೆ ಜಾಮೀನು ನೀಡಿ ಪರಿಶೀಲಿಸುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಪ್ರತ್ಯುತ್ತರ ಹೇಳಿಕೆ ಸಲ್ಲಿಸಿದ್ದು, ಕಳೆದ ವರ್ಷದ ಫೆಬ್ರುವರಿಯಿಂದ ಒಟ್ಟಾರೆ 149 ದಿನಗಳನ್ನು ರಾವ್‌ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಇದು ಅವರ ಆರೋಗ್ಯ ಎಷ್ಟು ಕೆಟ್ಟಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಈ ನೆಲೆಯಲ್ಲಿ ಅವರಿಗೆ ವೈದ್ಯಕೀಯ ಕಾರಣವನ್ನು ಮುಂದಿಟ್ಟು ಜಾಮೀನು ಮಂಜೂರು ಮಾಡುವಂತೆ ಕೋರಿದ್ದಾರೆ.

ಆದೇಶ ಕಾಯ್ದಿರಿಸಿರುವ ಪೀಠವು ರಾವ್‌ ಅವರ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸುವವರೆಗೂ ಅವರನ್ನು ಆಸ್ಪತ್ರೆಯಲ್ಲಿ ಉಳಿಸಿಕೊಳ್ಳುವ ಸಂಬಂಧ ನಾನಾವತಿ ಆಸ್ಪತ್ರೆಗೆ ಮಧ್ಯಂತರ ನಿರ್ದೇಶನವನ್ನು ನೀಡಿದೆ.

Kannada Bar & Bench
kannada.barandbench.com