Bhima Koregaon
Bhima Koregaon  
ಸುದ್ದಿಗಳು

ಜಾತಿವಾದಿ ಶಕ್ತಿಗಳಿಗೆ ದಲಿತ ವಿದ್ವಾಂಸನ ಯಶಸ್ಸು ಅಪಥ್ಯವಾಗಿದೆ: ಜಾಮೀನು ಅರ್ಜಿಯಲ್ಲಿ ಆನಂದ್ ತೇಲ್ತುಂಬ್ಡೆ

Bar & Bench

“ನನ್ನ ಯಶಸ್ಸನ್ನು ಜಾತಿವಾದಿ ಶಕ್ತಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಸಾಧನೆಗಳನ್ನು ಕುಂದಿಸಲೆಂದು ಮತ್ತು ದಲಿತರನ್ನು ಅವಮಾನಿಸಲೆಂದು ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ,” ಎಂದು ಸಾಮಾಜಿಕ ಹೋರಾಟಗಾರ, ವಿದ್ವಾಂಸ ಆನಂದ್‌ ತೇಲ್ತುಂಬ್ಡೆ ಅವರು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

1967ರ ಕಾನೂನುವಿರೋಧಿ ಚಟುವಟಿಕೆಗಳ ತಡೆ ಕಾಯಿದೆಯ ಅಡಿ ಆರೋಪ ಮಾಡಲು ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಅರ್ಥವ್ಯವಸ್ಥೆಗೆ ಭಂಗ ಉಂಟುಮಾಡುವ ಕೃತ್ಯ ಎಸಗಲು ಸೂಚಿಸಿರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ತನಿಖಾ ಸಂಸ್ಥೆಗಳು ಸಂಗ್ರಹಿಸಿದ ಪುರಾವೆಗಳಿಗೆ ಸೂಕ್ತ ಆಧಾರವಿಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ತೇಲ್ತುಂಬ್ಡೆ ಅವರು ತಮ್ಮ ಅರ್ಜಿಯಲ್ಲಿನ ಆರೋಪಗಳನ್ನು ಪಟ್ಟಿ ಮಾಡಿ ಅವುಗಳಿಗೆ ಉತ್ತರ ನೀಡಿದ್ದಾರೆ.

ಆರೋಪಗಳು ಸಂಪೂರ್ಣವಾಗಿ ನಂಬಲರ್ಹವಲ್ಲ ಎಂದು ನ್ಯಾಯಾಲಯ ಕಂಡುಕೊಂಡರೆ, ಅಂತಹ ಪ್ರಕರಣವನ್ನು ‘ಮೇಲ್ನೋಟಕ್ಕೆ ಸತ್ಯʼ ಎಂದು ಕರೆಯಲಾಗದು. ಇದನ್ನು ಪರಿಗಣಿಸಿ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ತೇಲ್ತುಂಬ್ಡೆ ವಾದಿಸಿದ್ದಾರೆ.

ರಿಪಬ್ಲಿಕ್‌ ಡೆಮಾಕ್ರಟಿಕ್‌ ಫ್ರಂಟ್‌ಗಾಗಿ ಸಿಪಿಐ (ಮಾವೋವಾದಿ) ಧ್ವಜದಡಿಯಲ್ಲಿ ತಾನು 'ದಲಿತ ಉಗ್ರಗಾಮಿತ್ವ ಮತ್ತು ಕ್ರಾಂತಿಕಾರಿ ಪುನರುತ್ಥಾನದ ಮರುಶೋಧ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದನ್ನು ಅಥವಾ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಸಕ್ರಿಯ ಸದಸ್ಯನಾಗಿರುವುದನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆ ವಿಫಲವಾಗಿದೆ ಎಂದು ಅವರು ವಾದಿಸಿದ್ದಾರೆ.

ಈ ಆರೋಪವನ್ನು ಸಾಬೀತುಪಡಿಸಲು ಅವರು ಯಾವುದೇ ಪುರಾವೆಗಳನ್ನು ಸಂಗ್ರಹಿಸಿಲ್ಲ ಎಂದು ಹೇಳಿದ್ದುಎಲ್ಗಾರ್ ಪರಿಷತ್ ಮತ್ತು ಭೀಮಾ ಕೋರೆಗಾಂವ್ ಶೌರ್ಯದಿನ್ ಪ್ರೇರಣಾ ಅಭಿಯಾನ ಕಾರ್ಯಕ್ರಮದ ಸಂಘಟಕರಾಗಿದ್ದರು ಎಂಬ ಎನ್ಐಎ ಆರೋಪವನ್ನು ತೇಲ್ತುಂಬ್ಡೆ ನಿರಾಕರಿಸಿದ್ದಾರೆ.

ತಾನು ನೋಡಿರದ ಅಥವಾ ಸಂವಹನ ನಡೆಸದ ಸಾಕ್ಷಿಗಳಿಂದ ಹೇಳಿಕೆ ಸಂಗ್ರಹಿಸಿದ್ದು ಎಲ್ಲಾ ಆರೋಪಗಳು ಮೇಲ್ನೋಟಕ್ಕೆ ಸುಳ್ಳು ಎಂದು ಸಾಬೀತಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ತಾನು ಪ್ರಕರಣದ ಸಹ ಆರೋಪಿಗಳಾದ ಹ್ಯಾರಿ ಬಾಬು ಮತ್ತು ಸ್ಟ್ಯಾನ್‌ ಸ್ವಾಮಿ ಅವರೊಂದಿಗೆ ಇಮೇಲ್‌ ಸಂಪರ್ಕದಲ್ಲಿದ್ದೆ ಎಂದು ಎನ್‌ಐಏ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, "ತನಿಖಾ ಸಂಸ್ಥೆ ತನ್ನ ಅನುಕೂಲಕ್ಕೆ ತಕ್ಕಂತೆ ಇಮೇಲ್‌ಗಳನ್ನು ಆಯ್ದುಕೊಂಡಿರುವುದರಿಂದ ಅದರಲ್ಲಿ ಹೇಳಲು ಏನೂ ಇಲ್ಲ,” ಎಂದಿದ್ದಾರೆ. “ಒಬ್ಬ ಆರೋಪಿ ಮತ್ತೊಬ್ಬ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದ ಸಂದರ್ಭವನ್ನು ಗಮನಿಸಿ ದೋಷಾರೋಪ ಮಾಡಬೇಕಾಗುತ್ತದೆ,” ಎಂದು ಅವರು ಹೇಳಿದ್ದಾರೆ.

"ಆರೋಪಗಳ ಸ್ವರೂಪವನ್ನು ಗಮನಿಸಿ ಮತ್ತು ಆರೋಪವನ್ನು ಪರಿಗಣಿಸಿ ಪ್ರತಿಯೊಬ್ಬ ಆರೋಪಿಗಳು ಯಾವ ಸಂದರ್ಭದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದಾರೆಂದು ನಿರೂಪಿಸಬೇಕಾಗುತ್ತದೆ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಅಲ್ಲದೆ ಬಹುತೇಕ ಪುರಾವೆಗಳು ಇಲೆಕ್ಟ್ರಾನಿಕ್‌ ಸ್ವರೂಪದ್ದಾಗಿದ್ದು ಅವುಗಳನ್ನು ಸುಲಭವಾಗಿ ತಿರುಚಬಹುದಾಗಿದೆ ಎಂದು ತೇಲ್ತುಂಬ್ಡೆ ವಾದಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜ ಎಂದು ಸಾಬೀತುಪಡಿಸಲು ಎನ್‌ಐಎಗೆ ಸಾಕಷ್ಟು ಪುರಾವೆಗಳಿಲ್ಲ ಎಂದು ವಾದಿಸಲು ಈ ಕೆಳಗಿನ ಆಧಾರಗಳನ್ನು ಅವರು ನೀಡಿದ್ದಾರೆ.

  1. ಸಂಗ್ರಹಿಸಿದ ಸಾಕ್ಷ್ಯಗಳಲ್ಲಿ ವೈಪರೀತ್ಯಗಳಿವೆ;

  2. ಸಂದರ್ಭಗಳ ಸರಪಳಿ, ಸಾತತ್ಯ ಪೂರ್ಣಗೊಂಡಿಲ್ಲ;

  3. ಎಲೆಕ್ಟ್ರಾನಿಕ್ ಸಾಕ್ಷ್ಯ ಸಂಗ್ರಹಿಸುವ ಸಮಯದಲ್ಲಿ ಒಂದು ಗುಂಪಿನ ಬಿಟ್‌ಗಳನ್ನು ವಿಶ್ಲೇಷಿಸುವಾಗ ಅಲ್ಗಾರಿದಮ್‌ನಿಂದ ಉತ್ಪತ್ತಿಯಾಗುವ ಆಲ್ಫಾ-ಸಂಖ್ಯಾ ಅಕ್ಷರಗಳ ವಿಶಿಷ್ಟ ಅನುಕ್ರಮವಾದ ‘ಹ್ಯಾಸ್ ವ್ಯಾಲ್ಯೂ’ ಏನು ಎಂಬುದನ್ನು ಎನ್ಐಎ ದಾಖಲಿಸಿಲ್ಲ;

  4. ತೇಲ್ತುಂಬ್ಡೆ ಅವರ ವಿರುದ್ಧ ಆರೋಪ ಮಾಡಲು ಬಳಸಲಾದ ಉಪನ್ಯಾಸ ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿವೆ.