ಭೀಮಾ ಕೋರೆಗಾಂವ್ ಪ್ರಕರಣದ ಜಾಮೀನು ಅರ್ಜಿಯ ಸಂಬಂಧ ವಾದ ಮಂಡಿಸುತ್ತಿರುವ ವಕೀಲರು ಪ್ರಕರಣದ ಆರೋಪಿ ಡಾ ವರವರ ರಾವ್ ಅವರ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ಮಾನವೀಯ ನಡೆ ಅಳವಡಿಸಿಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ ತಿಳಿಸಿದೆ.
ಸರ್ಕಾರ ಮತ್ತು ಜೈಲು ಅಧಿಕಾರಿಗಳಿಂದ ತಮ್ಮ ಪತಿಯ ಆರೋಗ್ಯದ ಹಕ್ಕು ಉಲ್ಲಂಘನೆಯಾಗಿದ್ದು ವೈದ್ಯಕೀಯ ಹಿನ್ನೆಲೆಯಲ್ಲಿ ಜಾಮೀನು ಕೋರಿ ರಾವ್ ಅವರ ಪತ್ನಿ ಪೆಂಡ್ಯಾಲ ಹೇಮಲತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿತಲೆ ಅವರಿದ್ದ ಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು. ಜ. 19ರಂದು ಮತ್ತೆ ವಿಚಾರಣೆ ನಡೆಸಲಿರುವ ಪೀಠ ಅಷ್ಟರೊಳಗೆ ವರದಿಗಳನ್ನು ಅವಲೋಕಿಸಲು ಮತ್ತು ಅದಕ್ಕೆ ತಕ್ಕಂತೆ ವಾದ ಮಂಡಿಸಲು ಗಡುವು ನೀಡಿದೆ. ಅಲ್ಲಿಯವರೆಗೆ ರಾವ್ ಅವರು ನಾನಾವತಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿರುವಂತೆ ನ್ಯಾಯಾಲಯ ನೀಡಿರುವ ನಿರ್ದೇಶನ ಮುಂದುವರೆಯಲಿದೆ. ಈ ಹಿಂದೆ ಪೀಠ ಮಾನವೀಯ ನೆಲೆಯಲ್ಲಿ ರಾವ್ ಅವರನ್ನು ತಲೋಜ ಜೈಲಿನಿಂದ ನಾನಾವತಿ ಆಸ್ಪತ್ರೆಗೆ ದಾಖಲಿಸಲು ನಿರ್ದೇಶನ ನೀಡಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮೊಹರು ಮಾಡಿದ ಲಕೋಟೆಯಲ್ಲಿ ರಾವ್ ಅವರ ಇತ್ತೀಚಿನ ವೈದ್ಯಕೀಯ ವರದಿಗಳನ್ನು ನೀಡಿದರು. ಆಗ ರಾವ್ ಪರ ಹಾಜರಾದ ವಕೀಲ ಆರ್ ಸತ್ಯನಾರಾಯಣನ್ ಅವರು ವಾದ ಮಂಡನೆಗೂ ಮೊದಲು ತಾವು ವರದಿಗಳ ಅಧ್ಯಯನ ಮಾಡುವ ಅಗತ್ಯವಿದೆ ಎಂದು ನ್ಯಾಯಾಲಯವನ್ನು ಕೋರಿದರು. ಈ ಸಂದರ್ಭದಲ್ಲಿ ನ್ಯಾಯಪೀಠವು ಮೇಲಿನಂತೆ ಅಭಿಪ್ರಾಯಪಟ್ಟಿತು. ಅಲ್ಲದೆ, ಅಧ್ಯಯನ ಮಾಡಿ ನಾಳೆಯೊಳಗೆ ಪ್ರಕರಣದ ವಿಚಾರಣೆಯು ಗುರುವಾರವೂ ನಡೆಯಲಿದೆ.
ಪ್ರಕರಣದ ಇತರೆ ಆರೋಪಿಗಳ ಜಾಮೀನು ಅರ್ಜಿ ಆಲಿಸುವಾಗ ಕೂಡ ನ್ಯಾಯಮೂರ್ತಿ ಶಿಂಧೆ ಇದೇ ರೀತಿಯ ಭಾವನೆ ವ್ಯಕ್ತಪಡಿಸಿದ್ದರು. "... ತಕ್ಷಣವೇ ಆರೋಗ್ಯ ಸಲಹೆ ಪಡೆಯಲು, ಆಸ್ಪತ್ರೆಗೆ ವರ್ಗಾಯಿಸಲು ಸರ್ಕಾರವು ನಾವು ನೀಡಿದ ನಿರ್ದೇಶನಗಳನ್ನು ಅನುಸರಿಸಿದೆ. ನಾವು ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತೇವೆ. ಉಳಿದದ್ದೆಲ್ಲವೂ ನಂತರದ್ದು,” ಎಂದು ಅವರು ಹೇಳಿದರು.