Anand Teltumbde and Bombay High court 
ಸುದ್ದಿಗಳು

ಭೀಮಾ ಕೋರೆಗಾಂವ್‌: ಆನಂದ್‌ ತೇಲ್ತುಂಬ್ಡೆಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌

ಜಾಮೀನು ಅರ್ಜಿಯ ವಿಚಾರಣೆಯನ್ನು ವಿಸ್ತೃತವಾಗಿ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಎ ಎಸ್‌ ಗಡ್ಕರಿ ಮತ್ತು ಮಿಲಿಂದ್‌ ಜಾಧವ್‌ ನೇತೃತ್ವದ ವಿಭಾಗೀಯ ಪೀಠವು ಇಂದು ಪ್ರಕಟಿಸಿತು.

Bar & Bench

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಬಂಧಿತರಾಗಿರುವ ದಲಿತ ಹಕ್ಕುಗಳ ಪರ ಹೋರಾಟಗಾರ ಮತ್ತು ಚಿಂತಕ ಆನಂದ್‌ ತೇಲ್ತುಂಬ್ಡೆಗೆ ಶುಕ್ರವಾರ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. 2020ರಿಂದ ತೇಲ್ತುಂಬ್ಡೆ ಅವರು ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಜಾಮೀನು ಅರ್ಜಿಯ ವಿಚಾರಣೆಯನ್ನು ವಿಸ್ತೃತವಾಗಿ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಎ ಎಸ್‌ ಗಡ್ಕರಿ ಮತ್ತು ಮಿಲಿಂದ್‌ ಜಾಧವ್‌ ನೇತೃತ್ವದ ವಿಭಾಗೀಯ ಪೀಠವು ಇಂದು ಪ್ರಕಟಿಸಿತು.

ತೇಲ್ತುಂಬ್ಡೆ ಅವರ ವಿರುದ್ಧ ಸೆಕ್ಷನ್‌ 38 ಮತ್ತು 39ರ (ಉಗ್ರ ಸಂಘಟನೆಯಲ್ಲಿನ ಸದಸ್ಯತ್ವಕ್ಕೆ ಸಂಬಂಧಿಸಿದ) ಅಡಿ ಆರೋಪಗಳನ್ನು ದಾಖಲಿಸಲಾಗಿದೆ. ಈ ಅಪರಾಧಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಇರಲಿದ್ದು, ತೇಲ್ತುಂಬ್ಡೆ ಈಗಾಗಲೇ ಎರಡು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಹೀಗಾಗಿ, ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ಮಧ್ಯೆ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿರುವ ಹೈಕೋರ್ಟ್‌, ತನ್ನ ಆದೇಶಕ್ಕೆ ಒಂದು ವಾರ ತಡೆ ನೀಡಿದೆ.

ಎಲ್ಗರ್‌ ಪರಿಷತ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ತೇಲ್ತುಂಬ್ಡೆ ಅವರು 2018ರ ಜನವರಿ 1ರಂದು ಮಾಡಿದ ಪ್ರಚೋದನಾಕಾರಿ ಭಾಷಣವು ಗಲಭೆಗೆ ನಾಂದಿ ಹಾಡಿತ್ತು ಎಂಬುದು ಎನ್‌ಐಐ ದೂರಾಗಿದೆ. ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ (ಎಂ) ಪಕ್ಷದ ಸದಸ್ಯರಾಗಿದ್ದಾರೆ ಎಂದು ಎನ್‌ಐಎ ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.