Bombay HC, Bhima Koregaon 
ಸುದ್ದಿಗಳು

ಭೀಮಾ ಕೋರೆಗಾಂವ್ ಪ್ರಕರಣ: ಮಾನವ ಹಕ್ಕುಗಳ ಹೋರಾಟಗಾರರಾದ ರೋನಾ ವಿಲ್ಸನ್, ಸುಧೀರ್ ಧಾವಳೆಗೆ ಬಾಂಬೆ ಹೈಕೋರ್ಟ್ ಜಾಮೀನು

ಆರೋಪಿಗಳ ದೀರ್ಘ ಕಾಲದ ಸೆರೆವಾಸ, ಆರೋಪ ಸಾಬೀತಾಗದಿರುವುದು ಹಾಗೂ 300ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸುವ ಅಂಶ ಉಲ್ಲೇಖಿಸಿ ಪೀಠ ಜಾಮೀನು ನೀಡಿತು.

Bar & Bench

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಾದ ರೋನಾ ವಿಲ್ಸನ್ ಮತ್ತು ಸುಧೀರ್ ಧವಳೆ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳ ದೀರ್ಘ ಕಾಲದ ಸೆರೆವಾಸ, ಆರೋಪ ಸಾಬೀತಾಗದಿರುವುದು ಹಾಗೂ 300 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸುವ ಅಂಶ ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ನ್ಯಾಯಮೂರ್ತಿ ಕಮಲ್ ಖಾತಾ ಅವರಿದ್ದ ಪೀಠ ಜಾಮೀನು ನೀಡಿತು.

₹ 1 ಲಕ್ಷದ ಮೊತ್ತದ ಬಾಂಡ್‌ ನೀಡಬೇಕು ಮತ್ತು ಪ್ರತಿ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಹಾಜರಾಗಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ.

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜುಲೈ 2024ರಲ್ಲಿ ವಿಲ್ಸನ್, ಧಾವಳೆ ಹಾಗೂ ಉಳಿದ ಮೂವರು ಆರೋಪಿಗಳಿಗೆ ಡಿಫಾಲ್ಟ್ ಜಾಮೀನು ನಿರಾಕರಿಸಿತ್ತು .

ಜುಲೈ 2018 ರಲ್ಲಿ ಬಂಧಿತರಾಗಿದ್ದ ವಿಲ್ಸನ್‌ ಯುಎಪಿಎ ಕಾಯಿದೆಯಡಿ ನ್ಯಾಯಾಂಗ ಬಂಧನದಲ್ಲಿದ್ದರು.

ಸ್ಥಳೀಯ ಬ್ರಾಹ್ಮಣ ಪೇಶ್ವೆ ವಿರುದ್ಧದ ಯುದ್ಧದಲ್ಲಿ ದಲಿತ ಸೈನಿಕರು ವಿಜಯ ಸಾಧಿಸಿದ 200ನೇ ವರ್ಷಾಚರಣೆ ಅಂಗವಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಬಿ ಸಾವಂತ್‌ ಮತ್ತು ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿಜಿ ಕೋಲ್ಸೆ-ಪಾಟೀಲ್ ಸೇರಿದಂತೆ ಅನೇಕ ಹೋರಾಟಗಾರರು ಸಾಮಾಜಿಕ ಕಾರ್ಯಕರ್ತರು ಡಿಸೆಂಬರ್ 31, 2017 ರಂದು ಎಲ್ಗಾರ್‌ ಪರಿಷತ್ ಕಾರ್ಯಕ್ರಮ ಆಯೋಜಿಸಿದ್ದರು.

ಆದರೆ ಕಾರ್ಯಕ್ರಮ ದಲಿತ ಮತ್ತು ಮರಾಠಾ ಗುಂಪುಗಳ ಘರ್ಷಣೆಗೆ ನಾಂದಿ ಹಾಡಿತು. ಘಟನೆಯಲ್ಲಿ ಒಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಈ ಸಂಬಂಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಮಾವೋವಾದಿ ಸಂಪರ್ಕ ಹೊಂದಿರುವ ಎಡಪಂಥೀಯ ಗುಂಪುಗಳ ವಿರುದ್ಧ ಜನವರಿ 8, 2018ರಂದು ಪೊಲೀಸರು ಎಫ್‌ಐಆರ್‌ ದಾಖಲಿಸಿದರು. ಇದು ಇಡೀ ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಆಧಾರವಾಗಿ 16 ಆರೋಪಿಗಳನ್ನು ಬಂಧಿಸಿ 3 ಆರೋಪಪಟ್ಟಿಗಳನ್ನು ಸಲ್ಲಿಸಲಾಗಿತ್ತು.