ಎಲ್ಗಾರ್ ಪರಿಷತ್ ಸಮಾವೇಶಕ್ಕೆ ಸಂಪರ್ಕ ಹೊಂದಿರುವ 2018ರ ಭೀಮಾ ಕೋರೆಗಾಂವ್ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ 'ಯುನೈಟ್ ಎಗೇನ್ಸ್ಟ್ ಹೇಟ್' ಸಂಘಟನೆ ಸದಸ್ಯರಾದ ಉಮರ್ ಖಾಲಿದ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ್ ಅವರ ಆಹ್ವಾನದ ಹಿನ್ನೆಲೆಯಲ್ಲಿ 2017ರ ಡಿಸೆಂಬರ್‌ನಲ್ಲಿ ಎಲ್ಗಾರ್ ಪರಿಷತ್ ಸಭೆಯಲ್ಲಿ ಭಾಗವಹಿಸಿದ್ದು, ಪುಣೆಯಲ್ಲಿ ನ್ಯಾ. ಪಾಟೀಲ್ ಅವರ ಮನೆಯಲ್ಲಿ ಉಳಿದುಕೊಂಡಿದ್ದಾಗಿ ಖಾಲಿದ್ ಎನ್‌ಐಎಗೆ ತಿಳಿಸಿದ್ದಾರೆ.
“2017ರ ಡಿಸೆಂಬರ್ 31ರಂದು ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ್ ಅವರು ಎಲ್ಗಾರ್ ಪರಿಷತ್ ಸಭೆಗೆ ನನ್ನನ್ನು ಆಹ್ವಾನಿಸಿದ್ದರು. ಪುಣೆಗೆ ಭೇಟಿ ನೀಡಿದ್ದಾಗ ನಾನು ನ್ಯಾ. ಕೋಲ್ಸೆ ಪಾಟೀಲ್ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ… ಸಭೆ ಮುಗಿದ ಬಳಿಕ (ಎಲ್ಗಾರ್ ಪರಿಷತ್) ನ್ಯಾ. ಪಾಟೀಲ್ ಅವರ ಮನೆಗೆ ತೆರಳಿದ್ದೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ನ್ಯಾ. ಕೋಲ್ಸೆ ಪಾಟೀಲ್ ಅವರನ್ನು ಬಾರ್ ಅಂಡ್ ಬೆಂಚ್ ಸಂಪರ್ಕಿಸಿದ್ದು, “ಖಾಲಿದ್ ಹೇಳಿರುವುದು ಸರಿಯಾಗಿದೆ. ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಜೊತೆಗೆ ಉಮರ್ ಖಾಲಿದ್ ಅವರು ಭದ್ರತೆಯ ದೃಷ್ಟಿಯಿಂದ ನನ್ನ ಜೊತೆ ಉಳಿದುಕೊಂಡಿದ್ದರು” ಎಂದು ಹೇಳಿದ್ದಾರೆ.
2017ರ ಡಿಸೆಂಬರ್ 31ರಂದು ನಡೆದಿದ್ದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಖಾಲಿದ್ ಸಹ ಒಬ್ಬ ಭಾಷಣಕಾರರಾಗಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಪಿ ಬಿ ಸಾವಂತ್ ಮತ್ತು ನ್ಯಾ. ಪಾಟೀಲ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಘಟನೆ ವಿಕೋಪಕ್ಕೆ ತಿರುಗಿ ದಲಿತ ಮತ್ತು ಮರಾಠಾ ಸಮುದಾಯಗಳ ನಡುವೆ ಸಂಘರ್ಷ ಸಂಭವಿಸಿದ್ದು, ಒಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಬಳಿಕ ಎಫ್‌ಐಆರ್ ದಾಖಲಾಗಿತ್ತು. ಬಂಧಿತರಾಗಿದ್ದ ಸ್ಟ್ಯಾನ್ ಸ್ವಾಮಿ ಅವರ ಸಾವಿನ ಬಳಿಕ ಪ್ರಕರಣದಲ್ಲಿ 15 ಆರೋಪಿಗಳು ಈಗ ಉಳಿದಿದ್ದಾರೆ.