ಎನ್‌ಕೌಂಟರ್‌ನಲ್ಲಿ ಹತರಾದ ನಕ್ಸಲ್ ನಾಯಕ ಮಿಲಿಂದ್ ತೇಲ್ತುಂಬ್ಡೆ ಸಾವಿನ ಬಳಿಕ ತನ್ನ ಅಮ್ಮನನ್ನು ಭೇಟಿಯಾಗಲು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಪ್ರೊ. ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಮಾರ್ಚ್ 8 ರಿಂದ 10 ರವರೆಗೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ಅವರ ತಾಯಿಯನ್ನು ಭೇಟಿ ಮಾಡಲು ನ್ಯಾಯಾಲಯ ಅನುಮತಿಸಿದೆ.
ಮಿಲಿಂದ್ ತೇಲ್ತುಂಬ್ಡೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಾಂಟೆಡ್ ಆರೋಪಿಯಾಗಿದ್ದರಾದರೂ, ಅವರು ಅರ್ಜಿದಾರ ಆನಂದ್ ಅವರ ಸಹೋದರ ಮತ್ತು ಘಟನೆಯಲ್ಲಿ ಮಾನವ ಜೀವದ ಹಾನಿಯಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
“ಸಾವು ಎಂಬುದು ಎಲ್ಲರಿಗೂ ಒಂದೇ. ಅವರು ಆರೋಪಿ ಇರಬಹುದು. ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿರಬಹುದು. ಆದರೆ ಅಂತಿಮವಾಗಿ ಮೃತವ್ಯಕ್ತಿ ಅರ್ಜಿದಾರನ ಸಹೋದರ. ಮಾನವ ಜೀವಹಾನಿ ಸಂಭವಿಸಿದೆ” ಎಂದು ಅದು ಹೇಳಿದೆ.
ಸೂಕ್ತ ಬೆಂಗಾವಲು ಮತ್ತು ಬಂದೋಬಸ್ತ್‌ನೊಂದಿಗೆ ತೇಲ್ತುಂಬ್ಡೆ ತಮ್ಮ ತಾಯಿ ಭೇಟಿಗೆ ಅವಕಾಶ ಕಲ್ಪಿಸಬೇಕು. ಮಾರ್ಚ್ 8ರಂದು ಬೆಳಗ್ಗೆ ತೇಲ್ತುಂಬ್ಡೆ ಹುಟ್ಟೂರನ್ನು ತಲುಪುವಂತೆ ವ್ಯವಸ್ಥೆ ಮಾಡಬೇಕು. ಮಾರ್ಚ್ 10, 2022ರಂದು ತಲೋಜಾ ಜೈಲಿಗೆ ಅವರು ಮರಳಬೇಕು. ತಾಯಿಯನ್ನು ಹೊರತುಪಡಿಸಿ ಅವರು ಬೇರಾರನ್ನೂ ಭೇಟಿಯಾಗುವಂತಿಲ್ಲ. ತೇಲ್ತುಂಬ್ಡೆ ಪ್ರಯಾಣದ ವೆಚ್ಚ ಹೊರತುಪಡಿಸಿ ಉಳಿದೆಲ್ಲಾ ಖರ್ಚನ್ನು ಮಹಾರಾಷ್ಟ್ರ ಸರ್ಕಾರವೇ ಭರಿಸಬೇಕು ಎಂದು ಅದು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.