ಸಹೋದರ ಮಿಲಿಂದ್ ಹತ್ಯೆ: ಎನ್ಐಎ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಆನಂದ್ ತೇಲ್ತುಂಬ್ಡೆ

ಈ ವರ್ಷ ನವೆಂಬರ್ 13ರಂದು ಮಹಾರಾಷ್ಟ್ರದ ಗಢ್‌ಚಿರೋಲಿಯ ಕೊರ್ಚಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ 26 ಮಂದಿಯಲ್ಲಿ ಮಿಲಿಂದ್ ತೇಲ್ತುಂಬ್ಡೆ ಕೂಡ ಒಬ್ಬರು.
ಸಹೋದರ ಮಿಲಿಂದ್ ಹತ್ಯೆ: ಎನ್ಐಎ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಆನಂದ್ ತೇಲ್ತುಂಬ್ಡೆ
Dr Anand Teltumbde

ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇತ್ತೀಚೆಗೆ ತಮ್ಮ ಸಹೋದರ ಮಾವೋವಾದಿ ಮಿಲಿಂದ್‌ ತೇಲ್ತುಂಬ್ಡೆ ಹತರಾದ ಹಿನ್ನೆಲೆಯಲ್ಲಿ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ ಅವರು ತಮ್ಮ ತಾಯಿ ಮತ್ತು ಕುಟುಂಬವನ್ನು ಭೇಟಿಯಾಗಲು ಮಧ್ಯಂತರ ಜಾಮೀನು ಕೋರಿ ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ವರ್ಷ ನವೆಂಬರ್ 13 ರಂದು ಮಹಾರಾಷ್ಟ್ರದ ಗಡ್‌ಚಿರೋಲಿಯ ಕೊರ್ಚಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ 26 ಮಂದಿಯಲ್ಲಿ ಮಿಲಿಂದ್ ತೇಲ್ತುಂಬ್ಡೆ ಕೂಡ ಒಬ್ಬರು.

ಎನ್‌ಐಎ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಆನಂದ್‌ ಅವರು ”1990ರ ದಶಕದ ಮಧ್ಯಭಾಗದಲ್ಲಿ ತಮ್ಮ ಕುಟುಂಬ ಮಿಲಿಂದ್‌ ಅವರ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಆ ಬಳಿಕ ಅವರೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ” ಎಂದು ಹೇಳಿದ್ದಾರೆ.

Also Read
[ಭೀಮಾ ಕೋರೆಗಾಂವ್] ಆರೋಪಿಗಳ ಪತ್ರದಲ್ಲಿದ್ದ ಆಕ್ಷೇಪಾರ್ಹ ವಿಚಾರ ನಿಯತಕಾಲಿಕದಲ್ಲಿ ಪ್ರಕಟವಾಗುತ್ತಿತ್ತು ಎಂದ ಎನ್ಐಎ

ತಂದೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದು ತಾಯಿಗೆ 90 ವರ್ಷ ವಯಸ್ಸಾಗಿದೆ. ಕುಟುಂಬದ ಹಿರಿಯನಾಗಿರುವುದರಿಂದ ಇಂತಹ ದುಃಖದ ಸಮಯದಲ್ಲಿ ತಾವು ಕುಟುಂಬದೊಂದಿಗೆ ಇದ್ದರೆ ಅವರಿಗೆ ನೈತಿಕ ಬೆಂಬಲ ಮತ್ತು ಸಾಂತ್ವನ ಒದಗಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ 15 ದಿನಗಳ ಮಧ್ಯಂತರ ಜಾಮೀನು ನೀಡಬೇಕೆಂದು ಅವರು ಪ್ರಾರ್ಥಿಸಿದ್ದಾರೆ.

ವಿಶೇಷ ನ್ಯಾಯಾಧೀಶ ಡಿ ಇ ಕೋಥಲೀಕರ್ ಅವರು ಮುಂದಿನ ವಿಚಾರಣೆ ವೇಳೆ ತೇಲ್ತುಂಬ್ಡೆ ಮನವಿಗೆ ಎನ್‌ಐಎ ನೀಡಲಿರುವ ಪ್ರತಿಕ್ರಿಯೆಯನ್ನು ಆಲಿಸಲಿದ್ದಾರೆ. ಆನಂದ್ ತೇಲ್ತುಂಬ್ಡೆ ಅವರು ತಮ್ಮ ತಾಯಿಯೊಂದಿಗೆ ದೂರವಾಣಿ ಮುಖೇನ ಮಾತನಾಡಲು ವಿಶೇಷ ನ್ಯಾಯಾಧೀಶರು ಕಳೆದ ವಾರ 5 ನಿಮಿಷಗಳ ಕಾಲಾವಕಾಶವನ್ನು ನೀಡಿದ್ದರು.

ಕೋವಿಡ್‌ ಕಟ್ಟುಪಾಡುಗಳು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಕೈದಿಗಳ ಭೌತಿಕ ಭೇಟಿಗೆ ಮಾತ್ರವೇ ಅನುವು ಮಾಡಲಾಗಿದ್ದು, ದೂರವಾಣಿ ಮೂಲಕ ಮಾತನಾಡುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಅಗತ್ಯವಿರುವ ಪ್ರಕರಣಗಳಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಮಾತ್ರವೇ ಫೋನ್‌ನಲ್ಲಿ ಮಾತನಾಡಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com