ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ನಿಯಮಾವಳಿಗಳನ್ನು ಪ್ರಶ್ನಿಸಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಪ್ರೊ. ಆನಂದ್ ತೇಲ್ತುಂಬ್ಡೆ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಭಾರತದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ನೆರವು ಕೋರಿದೆ.
ಜಾಮೀನು ನಿಯಮಾವಳಿಗಳು ಮತ್ತು "ಮುಂಚೂಣಿ ಸಂಘಟನೆ" ಪದವನ್ನು ಎನ್ಐಎ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಯುಎಪಿಎ ಕಾಯಿದೆಯ ನಿಯಮಾವಳಿಗಳನ್ನು ವಕೀಲರಾದ ದೇವಯಾನಿ ಕುಲಕರ್ಣಿ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಹಿರಿಯ ವಕೀಲ ಮಿಹಿರ್ ದೇಸಾಯಿ ಅವರು “ಯುಎಪಿಎ ಅಥವಾ ಯಾವುದೇ ಕಾಯಿದೆಗಳು 'ಮುಂಚೂಣಿ ಸಂಘಟನೆ (ಫ್ರಂಟಲ್ ಆರ್ಗನೈಸೇಷನ್)' ಎಂದರೇನು ಎಂದು ವ್ಯಾಖ್ಯಾನಿಸಿಲ್ಲ. ಕೇಂದ್ರ ಸರ್ಕಾರ ಸೂಚನೆ ನೀಡಿದ ನಂತರ ಅಥವಾ ಯುಎಪಿಎ ಶೆಡ್ಯೂಲ್‌ನಲ್ಲಿ ಸೇರಿಸಿದ ನಂತರ ಮಾತ್ರ ಸಂಘಟನೆಯನ್ನು "ನಿಷೇಧಿಸಲಾಗಿದೆ" ಎಂದು ಘೋಷಿಸಬಹುದು ಎಂದು ವಾದಿಸಿದರು. ಮುಂಚೂಣಿ ಸಂಘಟನೆ ಪದದ ವ್ಯಾಖ್ಯಾನ ವಿಶಾಲವಾಗಿದ್ದು ಇದನ್ನು ಎನ್‌ಐಎ ದುರ್ಬಳಕೆ ಮಾಡಿಕೊಂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿದಾರರ ವಾದವನ್ನು ಕೆಲ ಕಾಲದವರಗೆ ಆಲಿಸಿದ ನ್ಯಾಯಮೂರ್ತಿಗಳಾದ ಎಸ್ ಬಿ ಸುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ಅಟಾರ್ನಿ ಜನರಲ್ ಅವರಿಗೆ ನೋಟಿಸ್ ನೀಡಿ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಕೇಳಿತು. ನಾಲ್ಕು ವಾರಗಳ ನಂತರ ಅಂತಿಮ ವಿಲೇವಾರಿ ಮಾಡಲು ಪ್ರಕರಣವನ್ನು ಮುಂದೂಡಿತು.