Ramesh Gaichor and Sagar Gorkhe  
ಸುದ್ದಿಗಳು

[ಭೀಮಾ ಕೋರೆಗಾಂವ್] ಸರ್ಕಾರ, ಪ್ರಧಾನಿ ಮೋದಿ ವಿರುದ್ಧದ ಟೀಕೆ ದೇಶದ್ರೋಹವಲ್ಲ: ಎನ್ಐಎ ನ್ಯಾಯಾಲಯಕ್ಕೆ ಆರೋಪಿಗಳ ವಿವರಣೆ

2018ರಲ್ಲಿ ಭೀಮಾ ಕೋರೆಗಾಂವ್ ಗಲಭೆಗೆ ಕಾರಣವಾದ ಪ್ರಚೋದಕ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಎನ್ಐಎ ಆರೋಪಿಗಳಾದ ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಅವರನ್ನು 2020ರಲ್ಲಿ ಬಂಧಿಸಿತ್ತು.

Bar & Bench

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಅವರು ರಾಷ್ಟ್ರೀಯ ತನಿಖಾ ಕಾಯಿದೆಯಡಿ ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಭೀಮಾ ಕೋರೆಗಾಂವ್‌ ಘಟನೆಗೆ ಕಾರಣವಾದ ಎಲ್ಗಾರ್‌ ಪರಿಷತ್‌ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ನಿಷೇಧಿತ ಸಂಘಟನೆ ಕಬೀರ್ ಕಲಾ ಮಂಚ್‌ನ ಸದಸ್ಯರಾದ ಇವರನ್ನು 2020ರಲ್ಲಿ ಎನ್‌ಐಎ ಬಂಧಿಸಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್ 124 ಎ ಅಡಿ ದೇಶದ್ರೋಹ ಮತ್ತು ಯುಎಪಿಎ ಕಾಯಿದೆ ಅಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಆರೋಪ ಹೊರಿಸಲಾಗಿತ್ತು.

ಅವರ ಪರವಾಗಿ ವಾದ ಮಂಡಿಸಿದ ವಕೀಲ ನಿಹಾಲ್‌ಸಿಂಗ್ ರಾಥೋಡ್, “ತಮ್ಮ ಕಕ್ಷೀದಾರರು ರಾಜಕೀಯ ಪಕ್ಷದ ವಿರುದ್ಧ ಮತ್ತು ಅದರ ನೀತಿಗಳ ವಿರುದ್ಧ ಹೇಳಿಕೆ ನೀಡಿರುವುದನ್ನು ಹೊರತುಪಡಿಸಿ ಬೇರೇನನ್ನೂ ಮಾಡಿಲ್ಲ. ಸರ್ಕಾರವನ್ನು ಟೀಕಿಸುವುದಕ್ಕೆ ಸಂಬಂಧಿಸಿದಂತೆ ಅವರು ಏನೇ ಹೇಳಿದ್ದರೂ ಅದು ಅವರ ವಾಕ್ ಸ್ವಾತಂತ್ರ್ಯದ ಹಕ್ಕು ಮತ್ತು ಕರ್ತವ್ಯವೂ ಆಗಿದೆ ಎಂದು ವಾದಿಸಿದರು.

ಪಕ್ಷವು ಜಾತೀಯ ಸ್ವರೂಪ ಹೊಂದಿದೆ ಎಂದು ಕಕ್ಷೀದಾರರು ಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದರಲ್ಲಿ ದೇಶದ್ರೋಹ ಎಲ್ಲಿದೆ? ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ಸರ್ಕಾರವನ್ನು ಟೀಕಿಸುವ ಎಲ್ಲ ಹಕ್ಕು ಅವರಿಗಿದೆ. ಬಿಜೆಪಿ, ಆರ್‌ಎಸ್‌ಎಸ್ ದೇಶವನ್ನು ರೂಪಿಸುವುದಿಲ್ಲ ಎಂದು ಕಕ್ಷಿದಾರರು ಹೇಳಿದ್ದಾರೆ. ಮೋದಿ ವಿರುದ್ಧ, ಅವರ ನೀತಿಗಳ ವಿರುದ್ಧ ಕಕ್ಷೀದಾರರು ಕಿಡಿಕಾರಿದ್ದಾರೆ. ಇದು ದೇಶದ್ರೋಹ ಹೇಗಾಗುತ್ತದೆ?" ಎಂದು ರಾಥೋಡ್ ಪ್ರಶ್ನಿಸಿದರು. ಜಾಮೀನು ಅರ್ಜಿಯ ಕುರಿತು ಎನ್‌ಐಎ ಮಂಡಿಸಲಿರುವ ವಾದವನ್ನು ವಿಶೇಷ ನ್ಯಾಯಾಧೀಶ ಡಿ ಇ ಕೋತಲಿಕರ್ ಅವರು ಡಿಸೆಂಬರ್ 1, 2021 ರಂದು ಆಲಿಸಲಿದ್ದಾರೆ.