<div class="paragraphs"><p>Pegasus and sc</p></div>

Pegasus and sc

 
ಸುದ್ದಿಗಳು

ಪೆಗಸಸ್ ಸಮಿತಿಗೆ ಭೀಮಾ ಕೋರೆಗಾಂವ್ ಆರೋಪಿಗಳ ಫೋನ್ ಹಸ್ತಾಂತರ ಕೋರಿಕೆ: ಅನುಮತಿಗೆ ವಿಶೇಷ ನ್ಯಾಯಾಲಯದ ಮೊರೆ ಹೋದ ಎನ್ಐಎ

Bar & Bench

ಭೀಮಾ ಕೋರೆಗಾಂವ್‌ ಪ್ರಕರಣದ ಏಳು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ ಫೋನ್‌ಗಳನ್ನು ಪೆಗಸಸ್‌ ಸ್ಪೈವೇರ್ ಹಗರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ ತಾಂತ್ರಿಕ ಸಮಿತಿಗೆ ಒಪ್ಪಿಸಲು ಅನುಮತಿ ನೀಡುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ತಮ್ಮ ಫೋನ್‌ಗಳನ್ನು ಪೆಗಸಸ್ ಹ್ಯಾಕ್ ಮಾಡಿದೆ ಎಂದು ನಂಬಲು ಕಾರಣಗಳಿವೆ ಎಂಬುದಾಗಿ ಪ್ರಕರಣದ ಏಳು ಆರೋಪಿಗಳಾದ ರೋನಾ ವಿಲ್ಸನ್, ವೆರ್ನಾನ್ ಗೊನ್ಸಾಲ್ವೇಸ್‌, ಪಿ.ವರವರ ರಾವ್, ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ಹನಿ ಬಾಬು ಹಾಗೂ ಶೋಮಾ ಸೇನ್ ಅವರು ಪತ್ರ ಬರೆದ ಬಳಿಕ ಎನ್ಐಎ ಈ ಅರ್ಜಿ ಸಲ್ಲಿಸಿದೆ.

ತಮ್ಮ ಬಂಧನವಾದಾಗ ಪುಣೆ ಪೊಲೀಸರು ಏಳು ಮಂದಿಯ ಒಟ್ಟು 26 ಸಾಧನಗಳನ್ನು ವಶಪಡಿಸಿಕೊಂಡಿದ್ದರು. ಅವು ಈಗ ಎನ್‌ಐಎ ಬಳಿ ಇರುವುದರಿಂದ ತಾವು ಅವುಗಳನ್ನು ಹಾಜರುಪಡಿಸಲಾಗುತ್ತಿಲ್ಲ ಎಂದು ಆರೋಪಿಗಳು ಪೆಗಸಸ್‌ ಸಮಿತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ತರುವಾಯ, ತಾಂತ್ರಿಕ ಸಮಿತಿಯು ಜನವರಿ 2022ರಲ್ಲಿ ಎನ್‌ಐಎಗೆ ಪತ್ರ ಬರೆದು ಸಾಧನಗಳಲ್ಲಿರುವ ವಿವರಗಳನ್ನು ಪ್ರತಿ ಮಾಡಿಕೊಳ್ಳಲು ಮತ್ತು ಅವುಗಳನ್ನು ಪರಿಶೀಲಿಸಲು ಕೋರಿತ್ತು. ಅದರನ್ವಯ ಎನ್‌ಐಎ ಪ್ರಸ್ತುತ ಅರ್ಜಿ ಸಲ್ಲಿಸಿದೆ. ಅರ್ಜಿಯ ಪ್ರತಿಗಳನ್ನು ಆರೋಪಿಗಳಿಗೆ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿದ ವಿಶೇಷ ನ್ಯಾಯಾಧೀಶ ಡಿ ಇ ಕೋತಲಿಕರ್ ಅವರು ಬುಧವಾರದೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದರು.

ಪೆಗಸಸ್‌ ಬೇಹುಗಾರಿಕಾ ಹಗರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್‌ ನೇತೃತ್ವದಲ್ಲಿ ಮೂವರು ತಜ್ಞರ ಸಮಿತಿ ರಚಿಸಿ ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷ ಅಕ್ಟೋಬರ್ 27 ರಂದು ಮಹತ್ವದ ಆದೇಶ ಹೊರಡಿಸಿತ್ತು.