Mahesh Raut
Mahesh Raut 
ಸುದ್ದಿಗಳು

ಭೀಮಾ ಕೋರೆಗಾಂವ್ ಗಲಭೆ: ಮಹೇಶ್‌ ರಾವುತ್‌ಗೆ ಜಾಮೀನು; ಈವರೆಗೆ ಪ್ರಕರಣದಲ್ಲಿ ಜಾಮೀನು ಪಡೆದ 6 ಮಂದಿ

Bar & Bench

ಐದು ವರ್ಷಗಳ ಹಿಂದಿನ ಅಂದರೆ 2018ರಲ್ಲಿ ನಡೆದಿದ್ದ ಭೀಮಾ ಕೋರೆಗಾಂವ್ ಗಲಭೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಹೋರಾಟಗಾರ ಮಹೇಶ್ ರಾವುತ್‌ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಶರ್ಮಿಳಾ ದೇಶಮುಖ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಆದರೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ತನ್ನ ತೀರ್ಪು ಜಾರಿಗೆ ಒಂದು ವಾರಗಳ ಕಾಲ ತಡೆ ನೀಡಿದೆ.

ವಕೀಲೆ, ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್, ತೆಲುಗು ಕವಿ ವರವರ ರಾವ್, ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ, ಸಾಮಾಜಿಕ ಕಾರ್ಯಕರ್ತರಾದ ವೆರ್ನಾನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ನಂತರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜಾಮೀನು ಪಡೆಯುತ್ತಿರುವ ಆರನೇ ವ್ಯಕ್ತಿ ರಾವುತ್.

ಮೇಲಿನವರಲ್ಲಿ ವರವರ ರಾವ್‌ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ ಮತ್ತೊಬ್ಬ ಆರೋಪಿ, ಮಾನವ ಹಕ್ಕುಗಳ ಹೋರಾಟಗಾರ ಮತ್ತು ಪತ್ರಕರ್ತ ಗೌತಮ್ ನವಲಖಾ ಅವರನ್ನು ಜೈಲಿನ ಬದಲು ಗೃಹಬಂಧನದಲ್ಲಿ ಇರಿಸಲಾಗಿದೆ.

ರಾವುತ್‌ ಅವರನ್ನು ಜೂನ್ 2018ರಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಸೆರೆವಾಸ ಅನುಭವಿಸುತ್ತಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ನವೆಂಬರ್ 2021ರಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಾವುತ್‌ ಹೈಕೋರ್ಟ್‌ ಮೊರೆ ಹೋಗಿದ್ದರು.