<div class="paragraphs"><p>Justice SS Shinde and NR Borkar</p></div>

Justice SS Shinde and NR Borkar

 
ಸುದ್ದಿಗಳು

ಕೋವಿಡ್‌ ಮೂರನೇ ಅಲೆ ಇರುವಾಗ ನಾವು ವರವರರಾವ್‌ ಅವರನ್ನು ಜೈಲಿಗೆ ಕಳಿಸಬೇಕೆ? ಎನ್‌ಐಎಗೆ ಬಾಂಬೆ ಹೈಕೋರ್ಟ್‌ ಪ್ರಶ್ನೆ

Bar & Bench

ಕಳೆದ ವರ್ಷದ ಫೆಬ್ರವರಿಯಲ್ಲಿ ನೀಡಲಾಗಿರುವ ವೈದ್ಯಕೀಯ ಜಾಮೀನು ವಿಸ್ತರಿಸುವಂತೆ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ವರವರರಾವ್‌ ಸಲ್ಲಿಸಿರುವ ಮನವಿಯ ವಿಚಾರಣೆ ಸಂದರ್ಭದಲ್ಲಿ ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಹಿರಿಯ ಕವಿಯನ್ನು ಜೈಲಿಗೆ ಕಳುಹಿಸಬಹುದೇ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ಬಾಂಬೆ ಹೈಕೋರ್ಟ್‌ ಪ್ರಶ್ನಿಸಿದೆ.

ಮೂರನೇ ಅಲೆಯು ಇನ್ನೂ 50-60 ದಿನ ಮುಂದುವರಿಯುವ ಸಾಧ್ಯತೆ ಇದೆ. ಮೊದಲೆರಡು ಅಲೆಗಳಿಗೆ ಹೋಲಿಕೆ ಮಾಡಿದರೆ ಈ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಆರ್‌ ಬೋರ್ಕರ್‌ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

“ಪರಿಸ್ಥಿತಿ ಹೀಗಿರುವಾಗ ರಾವ್‌ ಅವರನ್ನು ಮರಳಿ ಜೈಲಿಗೆ ಕಳುಹಿಸುವುದು ಸರಿಯೇ” ಎಂದು ಎನ್‌ಐಎ ವಿಶೇಷ ವಕೀಲ ಸಂದೇಶ್‌ ಪಾಟೀಲ್‌ ಅವರನ್ನು ಪೀಠವು ಪ್ರಶ್ನಿಸಿತು.

“ಮೂರನೇ ಅಲೆಯಲ್ಲಿ ಸೋಂಕು ಅತ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ವಕೀಲರು ಸೇರಿದಂತೆ ವ್ಯವಸ್ಥೆಯಲ್ಲಿನ ಎಲ್ಲರ ಬಗ್ಗೆ ನಮಗೆ ಕಳಕಳಿ ಇದೆ. ನಾವೆಲ್ಲರೂ ಕುಟುಂಬ ಇದ್ದ ಹಾಗೆ. ನ್ಯಾಯಾಲಯದಲ್ಲಿಯೂ ನಮ್ಮ ಕೆಲವು ಸಹೋದ್ಯೋಗಿಗಳು ಸೋಂಕಿಗೆ ತುತ್ತಾಗಿದ್ದಾರೆ… ಅವರ ಹೆಸರುಗಳನ್ನು ನಾನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ” ಎಂದು ನ್ಯಾ. ಶಿಂಧೆ ಹೇಳಿದ್ದು, ವಿಚಾರಣೆಯಲ್ಲಿ ಭಾಗಿಯಾಗಿದ್ದ ಹಿರಿಯ ವಕೀಲ ಆನಂದ್‌ ಗ್ರೋವರ್‌ ಸೇರಿದಂತೆ ಎಲ್ಲರಿಗೂ ತುಸು ಹೆಚ್ಚು ಜಾಗೃತಿ ವಹಿಸುವಂತೆ ಹೇಳಿದರು.

ವರವರರಾವ್‌ ಅವರಿಗೆ ಶರಣಾಗತಿಗೆ ಫೆಬ್ರವರಿ 5ರ ವರೆಗೆ ಕಾಲಾವಕಾಶ ನೀಡಿರುವ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿದೆ.