Gujarat HC
Gujarat HC 
ಸುದ್ದಿಗಳು

ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಪ್ರಕರಣ: ರಾಜಿ ಹಿನ್ನೆಲೆಯಲ್ಲಿ ಎಫ್‌ಐಆರ್ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

Bar & Bench

ಗುಜರಾತಿನ ಭುಜ್‌ನಲ್ಲಿರುವ ಸಹಜಾನಂದ ಮಹಿಳಾ ಸಂಸ್ಥೆಯಲ್ಲಿ 66 ವಿದ್ಯಾರ್ಥಿನಿಯರ ಒಳಉಡಪುಗಳನ್ನು ತೆಗೆಸಿ ಅವರು ಋತುಮತಿಯಾಗಿದ್ದಾರೆಯೇ ಎಂದು ಪರಿಶೀಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿಯ ವಿರುದ್ಧ ದಾಖಲಿಸಲಾಗಿದ್ದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ಗುಜರಾತ್ ಹೈಕೋರ್ಟ್ ವಜಾಗೊಳಿಸಿದೆ.

ಸೌಹಾರ್ದಯುತವಾಗಿ ಪ್ರಕರಣವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ದೂರುದಾರರು ಸಲ್ಲಿಸಿರುವ ಅಫಿಡವಿಟ್ ಅನ್ನು ದಾಖಲೆಯ ರೂಪದಲ್ಲಿ ಸಲ್ಲಿಸುವ ಮೂಲಕ ಪ್ರಾಚಾರ್ಯ ಮತ್ತು ಇತರ ನಾಲ್ವರು ಆರೋಪಿಗಳು ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಮಾಧ್ಯಮಗಳ ಮಧ್ಯಪ್ರವೇಶ ಮತ್ತು ಕ್ಯಾಂಪಸ್‌ನಲ್ಲಿ ನಿರ್ಮಾಣವಾದ ಗೊಂದಲದ ಪರಿಸ್ಥಿತಿಯಿಂದ ವಿವಾದ ವ್ಯಾಪಿಸಿತು ಎಂದು ದೂರುದಾರೆಯೊಬ್ಬರು ತಮ್ಮ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ. ದೂರುದಾರೆ ಮತ್ತು ಇತರ ವಿದ್ಯಾರ್ಥಿನಿಯರು ಪ್ರರಕರಣವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದು, ಸೌಹಾರ್ದಯುತವಾಗಿ ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿರುವುದಾಗಿ ಆಕೆ ತಿಳಿಸಿದ್ದಾರೆ. ಬಾಲಕಿಯರ ಕುಟುಂಬದವರು ಮತ್ತು ಇತರೆ ವಿದ್ಯಾರ್ಥಿಗಳು ಸಂಧಾನ ಪ್ರಕ್ರಿಯೆಲ್ಲಿ ಭಾಗಿಯಾಗಿದ್ದರು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಅತ್ಯಾಚಾರದಂತೆ ಇದು ಅಷ್ಟು ಗಂಭೀರವಾದ ಅಪರಾಧವಲ್ಲ ಎಂದಿರುವ ನ್ಯಾ. ಎ ಸಿ ಜೋಶಿ ನೇತೃತ್ವದ ಏಕದಸ್ಯ ಪೀಠವು ವಿಚಾರಣೆಯು ನ್ಯಾಯದ ತಾರ್ಕಿಕ ಅಂತ್ಯಕ್ಕೆ ವಿರುದ್ಧವಾಗಲಿದೆ ಎಂದಿದ್ದಾರೆ.

“ಸಾಮಾನ್ಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು 302 ರ ಅಡಿ ದಾಖಲಾಗುವ ಗಂಭೀರವಾದ ಅಪರಾಧ ಪ್ರಕರಣಗಳನ್ನು ವಜಾಗೊಳಿಸುವ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಿಂದೆ ಚರ್ಚಿಸಿದಂತೆ ಗಂಭೀರವಾದುವಲ್ಲ. ಆದ್ದರಿಂದ ಪ್ರಸ್ತುತ ಪ್ರಕರಣಕ್ಕೆ ಇತ್ತೀಚಿನ ಕಾನೂನುಗಳು ಅನ್ವಯವಾಗುವುದಿಲ್ಲ.”
ನ್ಯಾ. ಎ ಸಿ ಜೋಶಿ

ಈ ಅವಲೋಕನದ ಹಿನ್ನೆಲೆಯಲ್ಲಿ ಎಫ್‌ಐಆರ್‌ಗೆ ಅನುಗುಣವಾಗಿ ವಿಚಾರಣೆ ಮುಂದುವರಿಸುವುದು ನಿರರ್ಥಕ ಎಂದು ನ್ಯಾಯಾಲಯವು ಎಫ್‌ಐಆರ್‌ ಅನ್ನು ವಜಾಗೊಳಿಸಿತು.

ಪ್ರಕರಣದ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ವಿಶೇಷ ತನಿಖಾ ತಂಡ ಭಾಗಿಯಾದ್ದರಿಂದ ಪ್ರಕರಣಕ್ಕೆ ವ್ಯಾಪಕ ಪ್ರಚಾರ ದೊರೆತಿತ್ತು. ಪ್ರಾಚಾರ್ಯರು, ಸಂಸ್ಥೆಯ ಸಂಚಾಲಕ, ವಿದ್ಯಾರ್ಥಿನಿಯರ ವಸತಿಗೃಹದ ಮೇಲ್ವಿಚಾರಕರು ಮತ್ತು ಜವಾನರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.

ಹಿರಿಯ ವಕೀಲ ಎನ್‌ ಡಿ ನಾನಾವತಿ ಅರ್ಜಿದಾರರ ಪರವಾಗಿ, ವಕೀಲರಾದ ವೈಭವಿಬೆನ್ ನಾನಾವತಿ ಮತ್ತು ನಿಮೇಶ್ ಪಟೇಲ್ ಅವರು ದೂರುದಾರೆಯೊಬ್ಬರನ್ನು ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಚ್ ಕೆ ಪಟೇಲ್ ವಾದಿಸಿದರು.