ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ನಾಟಕ ಪ್ರದರ್ಶಿಸಿದ್ದಕ್ಕೆ ದೇಶದ್ರೋಹ ಆರೋಪದ ಹಿನ್ನೆಲೆಯಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯ ಮಕ್ಕಳನ್ನು ಸಮವಸ್ತ್ರ ಮತ್ತು ಶಸ್ತ್ರಾಸ್ತ್ರದೊಂದಿಗೆ ವಿಚಾರಣೆ ನಡೆಸಿದ ಐವರು ಪೊಲೀಸ್ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ವಕೀಲೆ ನಯನ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಸಂಘಟನೆ ‘ಸಿಕ್ರಮ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ಬುಧವಾರ ನಡೆಸಿತು.
ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿ “ಬೀದರ್‌ನ ಶಾಹೀನ್ಚ ಶಿಕ್ಷಣ ಸಂಸ್ಥೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಐವರು ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬರಬೇಕಿದೆ. ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ತನಿಖೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ, ಮಕ್ಕಳನ್ನು ವಿಚಾರಣೆಗೊಳಪಡಿಸುವಾಗ ಬಾಲ ನ್ಯಾಯ ಕಾಯಿದೆಯ ಸಂಬಂಧಪಟ್ಟ ಸೆಕ್ಷನ್‌ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಈಗಾಗಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ” ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೂ ಮೊದಲು ಕೇವಲ ಶೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಹೇಳಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠವು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಅವರನ್ನು ಠಾಣೆಯಿಂದ ಹೊರಗೆ ಕರ್ತವ್ಯಕ್ಕೆ ನಿಯೋಜಿಸದಂತೆ ನಿರ್ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಸರ್ಕಾರ ಸಲ್ಲಿಸಿರುವ ಮೆಮೊ ನಮಗೆ ತಲುಪಿಲ್ಲ, ಅದರಲ್ಲಿನ ಅಂಶಗಳಿಗೆ ನಾವು ಪ್ರತಿಕ್ರಿಯಿಸಬೇಕಿದೆ” ಎಂದರು.
‘ಮೆಮೊದಲ್ಲಿ ಏನಿದೆ ಎಂದು ನಾನೇ ಓದಿ ಹೇಳಿದ್ದೇನೆ. ಇನ್ನೇನು ಬೇಕು? ಪೊಲೀಸರನ್ನು ನೇಣಿಗೆ ಹಾಕಲು ಹೇಳಬೇಕಾ? ಎಂದು ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು ಪೊ. ರವಿವರ್ಮ ಕುಮಾರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರೊ. ಕುಮಾರ್ ಅವರು “85 ಮಕ್ಕಳನ್ನು ಸಮವಸ್ತ್ರಧಾರಿ ಮತ್ತು ಶಸ್ತ್ರಾಸ್ತ್ರದಾರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದನ್ನು ಸಾಂವಿಧಾನಿಕ ನ್ಯಾಯಾಲಯಕ್ಕೆ ತಿಳಿಸದೇ ಯಾರಿಗೆ ಹೇಳೋಣ. ಇದರ ಜೊತೆಗೆ ಅರ್ಜಿಯಲ್ಲಿ ಬೇರೆ ಮನವಿಗಳೂ ಇವೆ” ಎಂದು ಸಮಜಾಯಿಷಿ ನೀಡಿದರು.
“ಪ್ರಕರಣವನ್ನು ದೀರ್ಘಾವಧಿಗೆ ಮುಂದುವರಿಸುಕೊಂಡು ಹೋಗಲು ನೀವು ಬಯಸಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ” ಎಂದು ಹೇಳಿದ ಪೀಠವು ವಿಚಾರಣೆಯನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಿತು.