ಸುದ್ದಿಗಳು

ದೊಡ್ಡ ಕಾನೂನು ಸಂಸ್ಥೆಗಳು ಎರಡು ಮತ್ತು ಮೂರನೇ ಶ್ರೇಣಿ ನಗರಗಳ ಪದವೀಧರರನ್ನು ನೇಮಿಸಿಕೊಳ್ಳಬೇಕು: ಸಿಜೆಐ ಎನ್ ವಿ ರಮಣ

ಪ್ರಮುಖ ಕಾನೂನು ಸಂಸ್ಥೆಗಳು ಮೊದಲನೇ ಶ್ರೇಣಿಯ ನಗರಗಳನ್ನು ಮಾತ್ರ ಗಮನಿಸುತ್ತವೆ. ಪರಿಣಾಮ ಅನೇಕ ಪ್ರತಿಭಾವಂತ ವಕೀಲರು ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯುತ್ತಾರೆ ಎಂದು ಅವರು ಹೇಳಿದರು.

Bar & Bench

ಕಾನೂನು ಸಂಸ್ಥೆಗಳು ಮೊದಲನೇ ಶ್ರೇಣಿ ನಗರಗಳಿಂದ ನೂತನ ಕಾನೂನು ಪದವೀಧರರನ್ನು ನೇಮಿಸಿಕೊಳ್ಳುವ ಮತ್ತು ಅಲ್ಲಿನ ವಿಶ್ವವಿದ್ಯಾಲಯಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅಭ್ಯಾಸವನ್ನು ಮರುಪರಿಶೀಲಿಸಬೇಕು. ಎರಡನೇ ಶ್ರೇಣಿ ಮತ್ತು ಮೂರನೇ ಶ್ರೇಣಿ ನಗರಗಳಿಗೂ ತಮ್ಮ ನೇಮಕಾತಿ ಪ್ರಕ್ರಿಯೆಯನ್ನು ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಬುಧವಾರ ಹೇಳಿದರು.

ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್ಐಎಲ್ಎಫ್) ಸದಸ್ಯ ಸಂಸ್ಥೆಗಳ ವಿವರಗಳನ್ನು ಒದಗಿಸುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮೊದಲ ತಲೆಮಾರಿನ ವಕೀಲರಿಗೆ ಆರ್ಥಿಕ ಚಲನಶೀಲತೆಯನ್ನು ಒದಗಿಸುವಲ್ಲಿ ಕಾನೂನು ಸಂಸ್ಥೆಗಳು ವಹಿಸಿದ ಪಾತ್ರವನ್ನು ಸಿಜೆಐ ಶ್ಲಾಘಿಸಿದರು. ಆದರೆ ಸಂಸ್ಥೆಗಳು ಅನುಸರಿಸುವ ನಿರ್ಬಂಧಿತ ನೇಮಕಾತಿ ನೀತಿಯಿಂದ ಅನೇಕ ಸಮರ್ಥ ಯುವ ವಕೀಲರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಪ್ರಮುಖ ಕಾನೂನು ಸಂಸ್ಥೆಗಳು ಮೊದಲನೇ ಶ್ರೇಣಿಯ ನಗರಗಳನ್ನು ಮಾತ್ರ ಗಮನಿಸುತ್ತವೆ. ನೇಮಕಾತಿಗಾಗಿ ಅಲ್ಲಿನ ವಿಶ್ವವಿದ್ಯಾಲಯಗಳನ್ನು ಮಾತ್ರ ಆಯ್ಕೆ ಮಾಡುತ್ತವೆ. ಪರಿಣಾಮ ಅನೇಕ ಪ್ರತಿಭಾವಂತ ವಕೀಲರು ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

"ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳು ವಾಣಿಜ್ಯ ಚಟುವಟಿಕೆಗಳ ಕೇಂದ್ರಗಳಾಗಿವೆ. ಇದು ವಹಿವಾಟುಗಳು ಹಾಗೂ ವ್ಯಾಜ್ಯಗಳಿಗೆ ಕಾರಣವಾಗುತ್ತದೆ. ಕಾನೂನು ಸಂಸ್ಥೆಗಳು ಈ ಕಕ್ಷೀದಾರರನ್ನು ನಿರ್ವಹಿಸಲು ಸ್ಥಳೀಯ ಪ್ರತಿಭೆಗಳನ್ನು ಆಯ್ದುಕೊಳ್ಳಬೇಕು" ಎಂದು ಅವರು ಹೇಳಿದರು.

"ಎಲ್ಲೆಡೆಯೂ ಕಚ್ಚಾ ವಜ್ರಗಳಿವೆ. ಅವರನ್ನು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಮತ್ತು ನಮ್ಮ ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಅರಿಯಬೇಕು ಎಂದು ನಿಮ್ಮೆಲ್ಲರನ್ನೂ ಕೋರುತ್ತೇನೆ. ವೈವಿಧ್ಯತೆ ವಿಸೃತ ಅಭಿಪ್ರಾಯವನ್ನು ಮಂಡಿಸುತ್ತದೆ. ವೈವಿಧ್ಯಮಯ ತಂಡ ಹೆಚ್ಚು ನ್ಯಾಯಯುತ ಮತ್ತು ಸಮಗ್ರ ಪರಿಹಾರಗಳನ್ನು ಒದಗಿಸಬಲ್ಲದು” ಎಂದು ಸಿಜೆಐ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಹಿರಿಯ ವಕೀಲ ಫಾಲಿ ಎಸ್ ನಾರಿಮನ್, ಎಸ್‌ಐಎಲ್‌ಎಫ್ ಅಧ್ಯಕ್ಷ ಲಲಿತ್ ಭಾಸಿನ್ ಮತ್ತು ಎಜಡ್‌ಬಿ ಸಂಸ್ಥಾಪಕಿ ಜಿಯಾ ಮೋದಿ ಭಾಗವಹಿಸಿದ್ದರು.