ಮಧ್ಯಸ್ಥಿಕೆಗೆ ಆಂಧ್ರ ವಿರೋಧ: ಜಲ ವಿವಾದ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಎನ್ ವಿ ರಮಣ

"ನೀವು ಮಧ್ಯಸ್ಥಿಕೆ ಬಯಸದಿದ್ದರೆ ನಾವು ನಿಮಗೆ ಒತ್ತಾಯ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ಬೇರೊಂದು ಪೀಠದ ಮುಂದೆ ಪಟ್ಟಿ ಮಾಡಲಿ" ಎಂದು ಸಿಜೆಐ ಹೇಳಿದರು.
CJI Ramana, Andhra Pradesh and Telangana
CJI Ramana, Andhra Pradesh and Telangana

ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಜಲ ವಿವಾದದ ವಿಚಾರಣೆಯಿಂದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹಿಂದೆ ಸರಿದಿದ್ದಾರೆ. ಎರಡೂ ರಾಜ್ಯಗಳ ನಡುವೆ ಸಂಧಾನಕ್ಕೆ ಮುಂದಾಗುವ ಪ್ರಸ್ತಾಪವನ್ನು ಆಂಧ್ರಪ್ರದೇಶ ವಿರೋಧಿಸಿದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ತಾನು ಕಾನೂನು ವಿಚಾರಗಳನ್ನು ಆಲಿಸಲು ಸಿದ್ಧವಿಲ್ಲ. ಆದರೆ, ಉಭಯ ರಾಜ್ಯಗಳ ನಡುವೆ ಸಂಧಾನಕ್ಕೆ ಒಲವು ಹೊಂದಿರುವುದಾಗಿ ಸೋಮವಾರ ನ್ಯಾ. ರಮಣ ಅವರು ಹೇಳಿದ್ದರು.

"ನಾನು ಎರಡೂ ರಾಜ್ಯಗಳಿಗೆ ಸೇರಿದವನಾಗಿದ್ದು, ಕಾನೂನು ವಿಚಾರಗಳನ್ನು ಆಲಿಸಲು ನನಗೆ ಇಚ್ಛೆ ಇಲ್ಲ. ಉಭಯ ಪಕ್ಷಕಾರರು ಒಪ್ಪಿದರೆ ನಾನು ಸಂಧಾನಕ್ಕೆ ಸಹಾಯ ಮಾಡುವೆ” ಎಂದು ಅವರು ತಿಳಿಸಿದ್ದರು.

Also Read
[ಆಂಧ್ರ ವರ್ಸಸ್‌ ತೆಲಂಗಾಣ ಜಲ ವಿವಾದ] ಕಾನೂನು ವಿಚಾರ ಆಲಿಸಲಾಗದು, ಸಂಧಾನದಲ್ಲಿ ಸಹಾಯ ಮಾಡುವೆ: ಸಿಜೆಐ ರಮಣ

ಮಧ್ಯಸ್ಥಿಕೆಗೆ ಇಚ್ಛೆ ಇರುವುದನ್ನು ಕಂಡುಕೊಳ್ಳಲು ಎರಡು ರಾಜ್ಯಗಳ ವಕೀಲರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅವರು ಬುಧವಾರಕ್ಕೆ ವಿಚಾರಣೆ ಮುಂದೂಡಿದ್ದರು. ಆದರೆ ಬುಧವಾರ ಪ್ರಕರಣದ ವಿಚಾರಣೆ ನಡೆದಾಗ ಆಂಧ್ರಪ್ರದೇಶ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ (ನ್ಯಾಯಾಲಯದಿಂದ) ತೀರ್ಪು ನೀಡುವ ಅವಶ್ಯಕತೆ ಇದೆ ಎಂದರು.

"ನೀವು ಮಧ್ಯಸ್ಥಿಕೆ ಬಯಸದಿದ್ದರೆ ನಾವು ನಿಮಗೆ ಒತ್ತಾಯ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ಬೇರೊಂದು ಪೀಠದ ಮುಂದೆ ಪಟ್ಟಿ ಮಾಡಲಿ" ಎಂದು ನ್ಯಾ. ರಮಣ ಹೇಳಿದರು.

Also Read
ಜಲ ವಿವಾದ: ತೆಲಂಗಾಣ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಆಂಧ್ರಪ್ರದೇಶ

ಪ್ರಕರಣವನ್ನು ಸಿಜೆಐ ರಮಣ ಆಲಿಸುವ ಸಂಬಂಧ ರಾಜ್ಯಗಳಿಗೆ ಯಾವುದೇ ವಿರೋಧ ಇಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ಆದರೂ ಪ್ರಕರಣದ ವಿಚಾರಣೆಗೆ ನ್ಯಾ. ರಮಣ ನಿರಾಕರಿಸಿದರು. "ಇಲ್ಲ. ನಾನು ಅದನ್ನು ಹೇಗೆ ಆಲಿಸಲಿ? ಇದನ್ನು ಇನ್ನೊಂದು ಪೀಠದ ಮುಂದೆ ಪಟ್ಟಿ ಮಾಡಿ" ಎಂದು ಅವರು ಹೇಳಿದರು.

ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿನ ತನ್ನ ನ್ಯಾಯಸಮ್ಮತ ನೀರಿನ ಪಾಲನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಆಂಧ್ರಪ್ರದೇಶ ಸರ್ಕಾರ ತೆಲಂಗಾಣ ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಶ್ರೀಶೈಲಂ ಅಣೆಕಟ್ಟು ಯೋಜನೆಯಡಿ, ತೆಲಂಗಾಣ ವಿದ್ಯುತ್ ಉತ್ಪಾದಿಸುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಇದನ್ನು ತಡೆಯುವಂತೆ ತೆಲಂಗಾಣಕ್ಕೆ ವಿನಂತಿ ಮಾಡಲಾಗಿದ್ದರೂ ಅದನ್ನು ಪಾಲಿಸಿಲ್ಲ ಎಂದು ಆಂಧ್ರಪ್ರದೇಶ ದೂರಿತ್ತು.

Kannada Bar & Bench
kannada.barandbench.com