Supreme Court, Bihar caste survey A1
ಸುದ್ದಿಗಳು

ಜನಗಣತಿ ಕಾಯಿದೆಯಡಿ ಕೇಂದ್ರ ಸರ್ಕಾರಕ್ಕೆ ಮಾತ್ರ ಜನಗಣತಿ ನಡೆಸಲು ಅವಕಾಶ: ಸುಪ್ರೀಂಗೆ ಗೃಹ ಸಚಿವಾಲಯದ ವಿವರಣೆ

ಸೋಮವಾರ ಬೆಳಗ್ಗೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿದ್ದ ವಾಕ್ಯವನ್ನು ತೆಗೆದು ಹಾಕಿದ ಸಚಿವಾಲಯ ಸಂಜೆ ಹೊಸ ಪ್ರಮಾಣಪತ್ರ ಸಲ್ಲಿಸಿತು. ಜನಗಣತಿ ಮತ್ತು ಜನಗಣತಿಯಂತಹ ಚಟುವಟಿಕೆಗಳ ನಡೆಸಬಲ್ಲ ಏಕೈಕ ಸಂಸ್ಥೆ ಕೇಂದ್ರ ಎನ್ನುವ ವಾಕ್ಯವನ್ನು ಕೈಬಿಟ್ಟಿತು.

Bar & Bench

ಜನಗಣತಿ ಕಾಯಿದೆ - 1948ರ ಪ್ರಕಾರ ಕೇಂದ್ರ ಸರ್ಕಾರ ಮಾತ್ರ ಜನಗಣತಿ ನಡೆಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಏಕ್ ಸೋಚ್ ಏಕ್ ಪ್ರಯಾಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಂವಿಧಾನದ ಏಳನೇ ಶೆಡ್ಯೂಲ್‌ನಲ್ಲಿನ ನಮೂದು 69 ರ ಪ್ರಕಾರ ಜನಗಣತಿಯ ವಿಷಯ ಕೇಂದ್ರ ಪಟ್ಟಿಯಡಿ ಬರುತ್ತದೆ ಎಂದು ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಜನಗಣತಿ ಕಾಯಿದೆಯಡಿಯಲ್ಲಿ ಜನಗಣತಿ ಎಂಬುದು ಶಾಸನಬದ್ಧ ಪ್ರಕ್ರಿಯೆಯಾಗಿದೆ ಎಂದು ಕೂಡ ವಿವರಿಸಲಾಗಿದೆ.

ಸೋಮವಾರ ಬೆಳಗ್ಗೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿದ್ದ ವಾಕ್ಯವನ್ನು ತೆಗೆದು ಹಾಕಿದ ಸಚಿವಾಲಯ ಸಂಜೆ ಹೊಸ ಪ್ರಮಾಣಪತ್ರ ಸಲ್ಲಿಸಿತು. ಜನಗಣತಿ ಮತ್ತು ಜನಗಣತಿಯಂತಹ ಚಟುವಟಿಕೆಗಳ ನಡೆಸಬಲ್ಲ ಏಕೈಕ ಸಂಸ್ಥೆ ಕೇಂದ್ರ ಎನ್ನುವ ವಾಕ್ಯವನ್ನು ಅದು ಕೈಬಿಟ್ಟಿತು.

ಬಿಹಾರದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ರಿಜಿಸ್ಟ್ರಾರ್ ಜನರಲ್ ಪರವಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ಬಿಹಾರ ಸರ್ಕಾರ ಕೈಗೊಳ್ಳುತ್ತಿರುವ ಜಾತಿ ಸಮೀಕ್ಷೆಯನ್ನು ಎತ್ತಿಹಿಡಿಯುವ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿವೆ.

ಹಿಂದಿನ ವಿಚಾರಣೆ ವೇಳೆ ಸಮೀಕ್ಷೆ, ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದ ವೇಳೆ ಪೀಠವು ಬಿಹಾರದಲ್ಲಿ, ಬಹುತೇಕ ಜನರಿಗೆ ತಮ್ಮ ಸುತ್ತಲಿನ ವ್ಯಕ್ತಿಗಳ ಜಾತಿಯ ಬಗ್ಗೆ ತಿಳಿದಿರುತ್ತದೆ. ದೆಹಲಿಯಂತಹ ಮಹಾನಗರದಲ್ಲಿ ಹಾಗಿಲ್ಲದೇ ಇರಬಹುದು ಎಂದು ಹೇಳಿತ್ತು. ವಿಚಾರಣೆಯ ಸಂದರ್ಭದಲ್ಲಿ ಅದು ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು.