“ಬೈಕ್ ಟ್ಯಾಕ್ಸಿ ಸೇವೆಯು ಸುರಕ್ಷತೆಯಿಂದ ಕೂಡಿದ್ದು, ಅನುಕೂಲಕರ ಮತ್ತು ಕೈಗೆಟುಕುವ ಪ್ರಯಾಣದ ವಿಧಾನವಾಗಿದೆ” ಎಂದು ಮಹಿಳಾ ಪ್ರಯಾಣಿಕರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಬಲವಾಗಿ ಬೈಕ್ ಟ್ಯಾಕ್ಸಿ ಸೇವೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಸುವಂತೆ ನಿರ್ದೇಶನ ಕೋರಿ ಓಲಾ, ಉಬರ್ ಮತ್ತು ರ‍್ಯಾಪಿಡೊ ಮಾತೃ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಮಹಿಳಾ ಪ್ರಯಾಣಿಕರ ಮಧ್ಯಪ್ರವೇಶ ಕೋರಿ, ವಾದಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ಅಸುರಕ್ಷತೆಯ ಕಾರಣ ನೀಡಿ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿದೆ. ಪ್ರತಿನಿತ್ಯ ಪ್ರಯಾಣಿಸುವವರಿಗೆ ಬೈಕ್ ಟ್ಯಾಕ್ಸಿ ಸೇವೆಯು ಸುರಕ್ಷತೆಯುಂದ ಕೂಡಿದ್ದು, ಅನುಕೂಲಕರ ಮತ್ತು ಕೈಗೆಟುಕುವ ಪ್ರಯಾಣದ ವಿಧಾನವಾಗಿದೆ. ಮಹಿಳೆಯರಿಗೆ ಈ ಸೇವೆ ಬೇಕಾಗಿದ್ದು, ಅದನ್ನು ನಿರ್ಬಂಧಿಸುವುದಕ್ಕೂ ಮುನ್ನ ಮಹಿಳೆಯರ ವಾದ ಆಲಿಸಲಾಗಿದೆಯೇ” ಎಂದರು.
“ಬೇರೆ ರಾಜ್ಯಗಳಲ್ಲಿ ಬೈಕರ್‌ಗಳಿಗೆ ಅರ್ಹತಾ ಪೂರ್ವ ಪರೀಕ್ಷೆ ನಿಗದಿಪಡಿಸಲಾಗಿದ್ದು, ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ರಾತ್ರಿಯ ವೇಳೆ ಸೀಮಿತ ಬೈಕ್ ಟ್ಯಾಕ್ಸಿ ಸೇವೆ ನೀಡಲಾಗುತ್ತಿದೆ” ಎಂದರು.
“ದರದ ದೃಷ್ಟಿಯಿಂದ ಬೈಕ್ ಟ್ಯಾಕ್ಸಿಯು ಕೈಗೆಟುಕಲಿದೆ. ಸ್ವತಂತ್ರ ಸಂಸ್ಥೆಗಳು ನಡೆಸಿರುವ ರಾಷ್ಟ್ರೀಯ ಮಟ್ಟದ ವರದಿಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಶಿಫಾರಸ್ಸು ಮಾಡಲಾಗಿದೆ. ಮಹಿಳೆಯರಿಗೆ ಇದು ಸುರಕ್ಷತೆಯಿಂದ ಕೂಡಿದ್ದು, ಕೈಗೆಟುಕುವಂತಿದೆ ಎಂದು ಹೇಳಲಾಗಿದೆ. ಕೆಪಿಎಂಜಿ ವರದಿಯು ಇದೊಂದು ಹೊಂದಾಣಿಕೆಯಾಗಬಹುದಾದ ಸಾರಿಗೆ ವಿಧಾನ ಎಂದಿದೆ” ಎಂದರು.
ರ‍್ಯಾಪಿಡೊ ಮಾತೃ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಈ ಹಿಂದೆ ತಮಿಳುನಾಡು ರಾಜ್ಯವೂ ಬೈಕ್ ಟ್ಯಾಕ್ಸಿ ನಿಷೇಧಿಸಿತ್ತು. ಈಗ ಅನುಮತಿ ನೀಡಿದೆ. ಅಂತೆಯೇ ಕೇರಳವು ಬೈಕ್ ಟ್ಯಾಕ್ಸಿಗೆ ಅನುಮತಿಸಿದೆ. ಬೆಂಗಳೂರಿನಲ್ಲಿ ಎರಡೇ ಎರಡು ಮೆಟ್ರೊ ಲೇನ್ ಕಾರ್ಯನಿರ್ವಹಿಸುತ್ತಿದೆ. ಕೊನೆಯ ಹಂತದವರೆಗೆ ಸಂಪರ್ಕ ಕಲ್ಪಿಸುವ ಯಾವುದೇ ಸೇವೆ ಇಲ್ಲ. ಜಪಾನ್ ಇತ್ಯಾದಿ ಕಡೆಗಳಲ್ಲಿ ಹಲವು ಮೆಟ್ರೊ ಲೇನ್‌ಗಳಿವೆ. ಬೆಂಗಳೂರಿನ ಪರಿಸ್ಥಿತಿ ಬೇರೆ ರೀತಿ ಇದ್ದು, ಹಲವು ಮೆಟ್ರೊ ಲೇನ್ ಮಾಡಿದರೂ ಸಂಪರ್ಕ ಅಸಾಧ್ಯ” ಎಂದರು.
“ಬೈಕ್ ಸೇವೆ ನಿರ್ಬಂಧಿಸಲು ಮಹಿಳೆಯರ ಸುರಕ್ಷತೆಯ ವಿಚಾರವನ್ನು ಮುಂದಿಡಲಾಗುತ್ತಿದೆ. ಆಟೊ ಒಕ್ಕೂಟವು ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿರುವುದರಿಂದ ಬೆಂಗಳೂರಿನಲ್ಲಿ ಶೇ. 18ರಷ್ಟು ಸಂಚಾರ ದಟ್ಟಣೆ ಹೆಚ್ಚಾಗಿದೆ” ಎಂದರು. ವಾದ ಆಲಿಸಿದ ಪೀಠವು ವಿಚಾರಣೆ ಮುಂದೂಡಿತು.