ಬಿಕ್ಲು ಶಿವು ಕೊಲೆ ಪ್ರಕರಣದ ವಿಚಾರಣೆ ವೇಳೆ ಐದನೇ ಆರೋಪಿಯಾಗಿರುವ ಕೆ ಆರ್ ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ ತನಿಖೆಗೆ ಸಹಕರಿಸಿಲ್ಲ. ಬದಲಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ತನಿಖೆ ಹಾದಿ ತಪ್ಪಿಸಿದ್ದಾರೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಬಲವಾಗಿ ವಾದಿಸಿದೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ಸಿಐಡಿ ಪೊಲೀಸರ ಪರ ವಾದ ಮುಂದುವರಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಭೂ ವ್ಯಾಜ್ಯ ಸಂಬಂಧ ಬಿಕ್ಲು ಶಿವನನ್ನು ಕೊಲೆ ಮಾಡಲಾಗಿದೆ. ಪ್ರಕರಣದ 1ನೇ ಆರೋಪಿ ಜಗದೀಶ್ ಮತ್ತು 20ನೇ ಆರೋಪಿ ಅಜಿತ್ ಅವರಿಗೆ ಬೈರತಿ ಬಸವರಾಜ್ ಕರೆ ಮಾಡಿ ಸಂಭಾಷಣೆ ನಡೆಸಿದ್ಧಾರೆ” ಎಂದರು. ಇದಕ್ಕೆ ಪೂರಕವಾಗಿ ತನಿಖಾಧಿಕಾರಿಗಳು ಸಂಗ್ರಹಿಸಿರುವ ಸಿಡಿಆರ್ ದಾಖಲೆಗಳ, ಆರೋಪಿಗಳು ಒಂದೇ ಸ್ಥಳದಲ್ಲಿದ್ದ ಬಗ್ಗೆ ಜಿಯೋಗ್ರಾಫಿಕಲ್ ಮ್ಯಾಪಿಂಗ್ ಮತ್ತು ಜಗದೀಶ್, ಬೈರತಿ ಬಸವರಾಜ ಅವರು ಒಟ್ಟಿಗೆ ಕುಂಭಮೇಳಕ್ಕೆ ಪ್ರಯಾಣಿಸಿರುವ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ತನಿಖೆ ವೇಳೆ ಬಸವರಾಜ ಅವರು ಜಗದೀಶ್ ಜೊತೆಗೆ ಕುಂಭಮೇಳದಲ್ಲಿ ಭಾಗಿಯಾಗಿಯಾಗಲು ಒಟ್ಟಿಗೆ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದ್ದಾರೆ. ಜಗದೀಶ್ ಹುಟ್ಟುಹಬ್ಬದ ಆಚರಣೆ ವೇಳೆ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ಧಾರೆ. ತನಿಖೆ ವೇಳೆ ಈ ಬಗ್ಗೆ ವಿವರಣೆ ಕೇಳಿದಾಗ, ಜಗದೀಶ್ ಮತ್ತು ಅಜಿತ್ ಯಾರೆಂಬುದೇ ನನಗೆ ಗೊತ್ತಿಲ್ಲ. ಕ್ಷೇತ್ರದ ಕಾರ್ಯಕರ್ತರೆಂದು ನನ್ನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಜಗದೀಶ್ ಮತ್ತು ಅಜಿತ್ ಅವರ ಫೋಟೋಗೋಳನ್ನು ಟಿವಿಯಲ್ಲಿ ನೋಡಿದಾಗ, ಅವರ ಬಗ್ಗೆ ನನಗೆ ತಿಳಿಯಿತಷ್ಟೇ ಎಂಬುದಾಗಿ ಬೈರತಿ ಬಸವರಾಜ್ ಹೇಳಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
“ಒಂದೇ ಪಿಎನ್‌ಆರ್ ನಂಬರ್‌ನಲ್ಲಿ ಜಗದೀಶ್, ಬೈರತಿ ಬಸವರಾಜ 2025ರ ಫೆಬ್ರವರಿಯಲ್ಲಿ ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದ್ಧರೆ. ಪೈ ಲೇಔಟ್‌ನ ಜಾಗದ ವಿಚಾರವಾಗಿ ಗಲಾಟೆ ನಡೆದಾಗ ಬಸವರಾಜ್, ಜಗದೀಶ್ ಹಾಗೂ ಕೊಲೆ ಪ್ರಕರಣದ ಆರೋಪಿಗಳೂ ಒಂದೇ ಸ್ಥಳದಲ್ಲಿ ಇದ್ದರು. ಜಗದೀಶ್ ಮೇಲೆ ಕೊಲೆ ಯತ್ನ ನಡೆದಾಗ ಪ್ರಕರಣ ಆರೋಪಿಗಳೊಂದಿಗೆ ಬಸವರಾಜ ಮಾತನಾಡಿದ್ಧಾರೆ. ಮೇಲಾಗಿ ಶಿವು ವಿರುದ್ಧವೇ ಮೂರು ಪ್ರಕರಣಗಳು ದಾಖಲಾಗುವಲ್ಲಿ ಬೈರತಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಚಾರಣೆಗೆ ಬಸವರಾಜ ಸಹಕಾರ ನೀಡಿಲ್ಲ. ಬದಲಿಗೆ ಸುಳ್ಳು ಮಾಹಿತಿ ನೀಡಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ. ನ್ಯಾಯಾಲಯದಲ್ಲಿ ಮಾತ್ರ ತನಿಖೆ ಸಂಪೂರ್ಣ ಸಹಕರಿಸಿರುವುದಾಗಿ ಹೇಳಿದ್ದಾರೆ. ಸುಳ್ಳು ಹೇಳಿ ತನಿಖೆ ದಿಕ್ಕು ತಪ್ಪಿಸಿರುವುದು ಯಾವ ರೀತಿ ತನಿಖೆಗೆ ಸಹಕರಿಸಿದಂತಾಗುತ್ತದೆ? ಇಂತಹವರು ಜಾಮೀನು ಪಡೆಯಲು ಅನರ್ಹರು” ಎಂದರು.
ಬಿಕ್ಲು ಶಿವು ಕೊಲೆ 2025ರ ಜುಲೈ 15ರಂದು ನಡೆಯುತ್ತದೆ. ಜುಲೈ 17ರಂದು ಎಫ್‌ಐಆರ್ ರದ್ದುಕೋರಿ ಹೈಕೋರ್ಟ್‌ಗೆ ಬಸವರಾಜ ಅರ್ಜಿ ಸಲ್ಲಿಸುತ್ತಾರೆ. ಜುಲೈ 18ರಂದು ಮಧ್ಯಂತರ ರಕ್ಷಣೆ ಆದೇಶ ಪಡೆದುಕೊಳ್ಳುತ್ತಾರೆ. ನಂತರ ಅರ್ಜಿ ಹಿಂಪಡೆಯುತ್ತಾರೆ. ನಿರೀಕ್ಷಣಾ ಜಾಮೀನು ತಿರಸ್ಕಾರಗೊಂಡ ನಂತರ ಮತ್ತೆ ಅರ್ಜಿ ಸಲ್ಲಿಸಿ ಸುಳ್ಳು ಮಾಹಿತಿ ನೀಡಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಆ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನೇ ನಿಷ್ಫಲಗೊಳಿಸಿದ್ದಾರೆ. ಬಿಕ್ಲು ಶಿವು ತಾಯಿಗೆ ಬೆದರಿಕೆ ಹಾಕಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬಿಕ್ಲು ಶಿವು ಕೊಲೆ ಯತ್ನ ಘಟನೆ ನಡೆದಿದ್ದರೂ, ಎಫ್‌ಐಆರ್ ದಾಖಲಾಗದಂತೆ ಹಾಗೂ ಶಿವುಗೆ ರಕ್ಷಣೆ ಸಿಗದಂತೆ ನೋಡಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಹಾಗೆಯೇ, ಅರ್ಜಿದಾರರು ನ್ಯಾಯಾಲಯದ ಮುಂದೆ ಪ್ರಕರಣದ ತ್ವರಿತ ತನಿಖೆ ನಡೆಯಬೇಕು ಎಂದು ವಾದಿಸುತ್ತಾರೆ. ಆದರೆ, ಇತರ ಆರೋಪಿಗಳ ವಿರುದ್ಧ ತನಿಖೆ ನಡೆಯಬೇಕು. ತಮ್ಮ ವಿರುದ್ಧ ಮಾತ್ರ ತನಿಖೆ ನಡೆಯಬಾರದು ಎಂದು ಬಯಸುತ್ತಾರೆ. ತನಿಖೆಯು ಆರೋಪಿಯ ಇಚ್ಛೆಗೆ ಅನುಸಾರ ನಡೆಯುವಂತಹದಲ್ಲ. ಹೀಗಾಗಿ, ಬೈರತಿ ಬಸವರಾಜ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದರು.