Supreme Court and Bilkis Bano 
ಸುದ್ದಿಗಳು

ಬಿಲ್ಕಿಸ್ ಪ್ರಕರಣ: ಅಪರಾಧಿಗಳಿಗೆ ಕುಟುಂಬಸ್ಥರು ಹಾರ ಹಾಕಿದರೆ ತಪ್ಪೇನು? ಸುಪ್ರೀಂ ಕೋರ್ಟ್‌ನಲ್ಲಿ ಎಎಸ್‌ಜಿ ಪ್ರಶ್ನೆ

ಗುಜರಾತ್ ಗಲಭೆ ವೇಳೆ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಈ ಪ್ರಶ್ನೆ ಕೇಳಲಾಯಿತು.

Bar & Bench

ಶಿಕ್ಷೆ ಕಡಿಮೆ ಮಾಡುವಂತೆ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ತಿರಸ್ಕರಿಸಿರುವಾಗ ತನ್ನ ಶಿಕ್ಷೆ ಹಿಂಪಡೆಯುವಂತೆ ಕೋರಿ ಸಂವಿಧಾನದ  32ನೇ ವಿಧಿಯಡಿ ಸಲ್ಲಿಸಲಾದ ರಿಟ್‌ ಅರ್ಜಿಯನ್ನು ಹೇಗೆ ಪರಿಗಣಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ [ಬಿಲ್ಕಿಸ್ ಯಾಕೂಬ್ ರಸೂಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮೇ 2022ರಲ್ಲಿ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರಿದ್ದ ಮತ್ತೊಂದು ಪೀಠ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಪ್ರಶ್ನೆ ಕೇಳಿದೆ.

“ಅಪರಾಧ ನಿಜವಾಗಿ ನಡೆದ ರಾಜ್ಯದಲ್ಲಿ ಶಿಕ್ಷೆಯ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ನೀತಿಯ ಪ್ರಕಾರ ಪ್ರಕರಣದಲ್ಲಿ ಅಪರಾಧಿಗಳ ಕ್ಷಮಾದಾನ ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳಾದ ರಸ್ತೋಗಿ ಮತ್ತು ನಾಥ್ ಅವರು ಕಳೆದ ವರ್ಷ ಮೇ 13ರಂದು ತೀರ್ಪು ನೀಡಿದ್ದರು.

ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಭಗವಾನದಾಸ್ ಷಾ ಅಲಿಯಾಸ್‌ ಲಾಲಾ ವಕೀಲ್ ಅವರು 32ನೇ ವಿಧಿಯಡಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿತ್ತು. ತನ್ನನ್ನು ಅಪರಾಧಿ ಎಂದು ಘೋಷಿಸುವ ವೇಳೆ ಅಸ್ತಿತ್ವದಲ್ಲಿದ್ದ 1992ರ ನೀತಿಯಡಿ  ಅವಧಿಪೂರ್ವವಾಗಿ ತನ್ನನ್ನು ಬಿಡುಗಡೆ ಮಾಡಲು ಗುಜರಾತ್‌ ಸರ್ಕಾರಕ್ಕೆ ನಿರ್ದೇಶಿಸುವಂತೆ ಅವರು ಕೋರಿದ್ದರು.

ಈ ಹಿಂದೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್‌ ವಜಾಗೊಳಿಸಿತ್ತು. ಮಹಾರಾಷ್ಟ್ರದಲ್ಲಿ ವಿಚಾರಣೆ ಮುಕ್ತಾಯಗೊಂಡಿರುವುದರಿಂದ ಅವಧಿಪೂರ್ವ ಬಿಡುಗಡೆಗೆ ಅರ್ಜಿಯನ್ನು ಮಹಾರಾಷ್ಟ್ರದಲ್ಲಿ ಸಲ್ಲಿಸಬೇಕೇ ಹೊರತು ಗುಜರಾತ್‌ನಲ್ಲಿ ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಅರ್ಜಿದಾರ- ಅಪರಾಧಿ ತನ್ನನ್ನು ಬಿಡುಗಡೆಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ಗೆ ಮೊದಲು ಸಲ್ಲಿಸಬೇಕಿತ್ತು ಎಂದು ನ್ಯಾ. ನಾಗರತ್ನ ಮಂಗಳವಾರ ಹೇಳಿದರು.

"ಗುಜರಾತ್ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದನ್ನು ಅವರು ಸುಪ್ರೀಂ ಕೋರ್ಟ್‌ಗೆ ಬಹಿರಂಗಪಡಿಸಿದ್ದಾರೆಯೇ? ಹಾಗಿಲ್ಲದಿದ್ದರೆ ಈ ನ್ಯಾಯಾಲಯದ ಮುಂದೆ 32ನೇ ವಿಧಿಯಡಿ ಹೇಗೆ ಅರ್ಜಿ ಸಲ್ಲಿಸಲು ಸಾಧ್ಯ?  32ನೇ ವಿಧಿಯಡಿ ಅರ್ಜಿಯನ್ನು ಹೇಗೆ  ನಿರ್ವಹಿಸಲಾಗುತ್ತದೆ ಮತ್ತು ಪುರಸ್ಕರಿಸಲಾಗುತ್ತದೆ? ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಯಾವುದೇ ಸವಾಲು ಇಲ್ಲದೆ, ಗುಜರಾತ್ ಹೈಕೋರ್ಟ್ ತೀರ್ಪನ್ನು ಹೇಗೆ ರದ್ದುಗೊಳಿಸಲಾಯಿತು?" ಎಂದು ಅವರು ಪ್ರಶ್ನಿಸಿದರು.

ತಾನು ಈ ಪ್ರಶ್ನೆಗಳನ್ನು ಈಗ ಕೇವಲ ಮುಂದಿಡುತ್ತಿದ್ದುಅಪರಾಧಿಗಳ ಪರ ವಕೀಲರ ವಾದ ಆಲಿಸುವಾಗ ಇದನ್ನು ಹೆಚ್ಚು ವಿಸ್ತಾರವಾಗಿ ಪರಿಗಣಿಸುವುದಾಗಿ ಪೀಠ ಸ್ಪಷ್ಟಪಡಿಸಿತು.

ಗುಜರಾತ್‌ ಗಲಭೆ (2002) ವೇಳೆ ಬಿಲ್ಕಿಸ್‌ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.  

ಕುಟುಂಬಸ್ಥರು ಹಾರ ಹಾಕುವುದರಲ್ಲಿ ತಪ್ಪೇನು?

ಇಂದಿನ ವಿಚಾರಣೆಯಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹೂವ ಮೊಯಿತ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ʼಅಪರಾಧಿಗಳನ್ನು ಬಿಡುಗಡೆ ಮಾಡುವ ಕ್ರಮ ಸಮರ್ಥಿಸುವ ಜನರು ಅಪರಾಧಿಗಳು ಬ್ರಾಹ್ಮಣರು ಎಂದು ಒತ್ತಿ ಹೇಳುತ್ತಾರೆ. ಅಪರಾಧಿಗಳ ಬಿಡುಗಡೆಯ ಸಂದರ್ಭದಲ್ಲಿ ಅವರಿಗೆ ಹಾರ ಹಾಕಿದ್ದು ಏಕೆ?ʼ ಎಂದು ಆಕ್ಷೇಪಿಸಿದರು.

ಗುಜರಾತ್ ಮತ್ತು ಕೇಂದ್ರ ಸರ್ಕಾರಗಳನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಇದಕ್ಕೆ ಪ್ರತಿಕ್ರಿಯಿಸಿಸುತ್ತಾ "ಕುಟುಂಬದವರು ಹಾರ ಹಾಕುವುದರಲ್ಲಿ ತಪ್ಪೇನಿದೆ?" ಎಂದು ಕೇಳಿದರು.

ಇದೇ ವೇಳೆ ವಾದ ಮಂಡಿಸಿದ ವಕೀಲೆ ಶೋಭಾ ಗುಪ್ತಾ ಅಪರಾಧಿಗಳನ್ನು ಬಿಡುಗಡೆ ಮಾಡುವುದರ ವಿರುದ್ಧ ಸಿಬಿಐ, ಗೋಧ್ರಾ ಜಿಲ್ಲಾ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಶಿಫಾರಸು ಮಾಡಿದ್ದಾರೆ ಎಂದರು.

ಸಂಬಂಧಿತ ಜೈಲು ಅಧೀಕ್ಷಕರು ಅಪರಾಧದ ಮಹತ್ವವನ್ನು ಪರಿಶೀಲಿಸಲಿಲ್ಲ ಮತ್ತು ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಶಿಫಾರಸು ಮಾಡಲು ಕಾರಣಗಳನ್ನು ದಾಖಲಿಸಿಲ್ಲ ಎಂದು ಅವರು ಹೇಳಿದರು.

"ಇದು (ಬಿಡುಗಡೆ ಪ್ರಕ್ರಿಯೆ) ಬಹಳ ಯಾಂತ್ರಿಕವಾಗಿ ಮಾಡಿದ ನಿರ್ಲಕ್ಷ್ಯದ ಕ್ರಿಯೆ ಅಥವಾ ಕಟ್ಟುನಿಟ್ಟಿನ ವಿಧಾನವಲ್ಲದ ಇದು ಬಹುಶಃ ಉದ್ದೇಶಪೂರ್ವಕ ಅಜಾಗರೂಕತೆಯಿಂದ ನಡೆದಿದೆ" ಎಂದು ಅವರು ವಾದಿಸಿದರು.

ಇಬ್ಬರು ಅಪರಾಧಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲ ರಿಷಿ ಮಲ್ಹೋತ್ರಾ ಅವರು, ಬಾನೊ ಹೊರತುಪಡಿಸಿ ಬೇರೆಯವರು ಸಲ್ಲಿಸಿರುವ ಅರ್ಜಿಗಳ ಅರ್ಹತೆಯನ್ನು ಪ್ರಶ್ನಿಸುವುದಾಗಿ ತಿಳಿಸಿದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆದಿದ್ದು ಬುಧವಾರ ಕೂಡ ನ್ಯಾಯಾಲಯ ಪ್ರಕರಣವನ್ನು ಆಲಿಸಲಿದೆ.