Supreme Court and Bilkis Bano  A1
ಸುದ್ದಿಗಳು

[ಬಿಲ್ಕಿಸ್ ಬಾನೊ] ಗುಜರಾತ್ ಸರ್ಕಾರದ ಅಫಿಡವಿಟ್ ತುಂಬಾ ದೊಡ್ಡದಿದೆ: ನ. 29ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

ರಾಜ್ಯ ಸರ್ಕಾರದ ಪ್ರತಿ-ಅಫಿಡವಿಟನ್ನು ಎಲ್ಲಾ ಪಕ್ಷಕಾರರಿಗೆ ನೀಡುವಂತೆ ತಿಳಿಸುವ ವೇಳೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Bar & Bench

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಹನ್ನೊಂದು ಅಪರಾಧಿಗಳ ಬಿಡುಗಡೆ  ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಗುಜರಾತ್‌ ಸರ್ಕಾರ ನೀಡಿರುವ ಪ್ರತಿಕ್ರಿಯೆ ತುಂಬಾ ದೊಡ್ಡದಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ರಾಜ್ಯ ಸರ್ಕಾರದ ಪ್ರತಿ-ಅಫಿಡವಿಟನ್ನು ಎಲ್ಲಾ ಪಕ್ಷಕಾರರಿಗೆ ನೀಡುವಂತೆ ತಿಳಿಸುವ ವೇಳೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಇದು ಬಹಳ ದೊಡ್ಡ ಪ್ರತಿಕ್ರಿಯೆ… ಹಲವು ತೀರ್ಪುಗಳು ಈ ಪ್ರತಿಕ್ರಿಯೆಯಲ್ಲಿ ಇವೆ. ಇದರಲ್ಲಿ ವಾಸ್ತವಿಕ ಹೇಳಿಕೆ ಎಲ್ಲಿದೆ? ಗಮನ ಕೇಂದ್ರೀಕರಿಸುವುದು ಹೇಗೆ," ಎಂದು ನ್ಯಾಯಾಲಯ ಮೌಖಿಕವಾಗಿ ಟೀಕಿಸಿತು.

"ಅದನ್ನು ತಪ್ಪಿಸಬಹುದಿತ್ತು, ನಾನು ಒಪ್ಪುತ್ತೇನೆ... ಆದರೆ ಎಲ್ಲವೂ ಒಂದೆಡೆ ದೊರೆಯುವಂತೆ ಸುಲಭ ಉಲ್ಲೇಖ ನೀಡಬೇಕೆಂಬ ಆಲೋಚನೆ ಇತ್ತು” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿದರು.

ಆಗ ನ್ಯಾಯಾಲಯ "ಎಲ್ಲ ವಕೀಲರಿಗೆ ಪ್ರತಿ- ಅಫಿಡವಿಟ್‌ನ ಪ್ರತಿಗಳು ಲಭ್ಯವಾಗಲಿ. ನವೆಂಬರ್ 29, 2022ಕ್ಕೆ ಪ್ರಕರಣ ಪಟ್ಟಿ ಮಾಡಿ" ಎಂದು ಸೂಚಿಸಿತು.

ಪ್ರಕರಣದ ಸಂಬಂಧ ಗುಜರಾತ್‌ ಸರ್ಕಾರ ಮತ್ತು 11 ಅಪರಾಧಿಗಳ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಆಗಸ್ಟ್ 25 ರಂದು ಕೇಳಿತ್ತು. ಅಂತೆಯೇ ಸರ್ಕಾರ ತನ್ನ ಪ್ರತಿ ಅಫಿಡವಿಟ್‌ನಲ್ಲಿ ʼಅಪರಾಧಿಗಳು 14 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದು ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಕೈದಿಗಳ ಬಿಡುಗಡೆಗೆ ಸಂಬಂಧಿಸಿದ 1992ರ ನೀತಿಯಡಿ ಎಲ್ಲಾ ಹನ್ನೊಂದು ಆರೋಪಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತುʼ ಎಂದು ನಿನ್ನೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.