A1
ಸುದ್ದಿಗಳು

ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ: ಗುಜರಾತ್ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ನಾಳೆ ಅರ್ಜಿಯ ವಿಚಾರಣೆ ನಡೆಸುವಂತೆ ಕೋರಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್.

Bar & Bench

ಗೋಧ್ರಾ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ನಾಳೆ ಅರ್ಜಿಯ ವಿಚಾರಣೆ ನಡೆಸುವಂತೆ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠವನ್ನು ಕೋರಿದರು. ಅರ್ಜಿಯನ್ನು ಓದುವುದಾಗಿ ತಿಳಿಸಿದ ಪೀಠ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವ ಕುರಿತಂತೆ ಯಾವುದೇ ಆದೇಶ ನೀಡಲಿಲ್ಲ.

ಸಿಪಿಎಂ ನಾಯಕಿ ಸುಭಾಸಿನಿ ಅಲಿ, ಸ್ವತಂತ್ರ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ರೇವತಿ ಲೌಲ್‌ ಮತ್ತು ರೂಪ್ ರೇಖ್ ವರ್ಮಾ ಅವರು ಅರ್ಜಿ ಸಲ್ಲಿಸಿದ್ದಾರೆ.

ಬಾನೊ ಅವರ ಮೇಲೆ 2002ರ ಗುಜರಾತ್‌ ಕೋಮು ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಗುಜರಾತ್‌ನ ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಗುಂಪೊಂದು ಹತ್ಯೆಗೈದ ಹನ್ನೆರಡು ಜನರಲ್ಲಿ ಬಿಲ್ಕಿಸ್‌ ಮೂರು ವರ್ಷದ ಮಗಳು ಸಹ ಸೇರಿದ್ದಳು.

ಅಪರಾಧಿಗಳು 14 ವರ್ಷಗಳಿಂದ ಜೈಲುವಾಸ ಪೂರ್ಣಗೊಳಿಸಿರುವುದು, ವಯಸ್ಸು, ಅಪರಾಧದ ಸ್ವರೂಪ ಮತ್ತು ಜೈಲಿನಲ್ಲಿ ತೋರಿದ ಉತ್ತಮ ನಡವಳಿಕೆಯಂತಹ ಇತರೆ ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ತಿಳಿಸಿದ್ದರು ಎಂದು ವರದಿಯಾಗಿತ್ತು.

ತಮಗೆ ಆರೋಪಿಗಳಿಂದ ಜೀವ ಬೆದರಿಕೆ ಇದೆ ಎಂದು ಬಾನೊ ದೂರಿದ್ದರಿಂದ ವಿಚಾರಣೆಯನ್ನು ಗುಜರಾತ್‌ನ ಗೋಧ್ರಾದಿಂದ ಮಹಾರಾಷ್ಟ್ರಕ್ಕೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 2008ರಲ್ಲಿ 13 ಅಪರಾಧಿಗಳಿಗೆ ಶಿಕ್ಷೆ ವಿಧಿಸಿತ್ತು. ಇದರಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ಮುಂದೆ ಮೇ, 2017ರಲ್ಲಿ ಬಾಂಬೆ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.

ಸಂತ್ರಸ್ತೆ ಬಾನೊಗೆ ರೂ. 50 ಲಕ್ಷ ಪರಿಹಾರ, ವಸತಿ ಹಾಗೂ ಸರ್ಕಾರಿ ಉದ್ಯೋಗ ನೀಡುವಂತೆ ಸುಪ್ರೀಂ ಕೋರ್ಟ್‌ 2019ರಲ್ಲಿ ಆದೇಶಿಸಿತ್ತು.